ನವದೆಹಲಿ : ಶಾಲೆ ಕಾಲೇಜುಗಳಲ್ಲಿ ಹಿಜಬ್, ಕೇಸರಿ ಶಾಲ್ ಸಹಿತ ಧಾರ್ಮಿಕ ವಸ್ತ್ರಗಳನ್ನು ನಿಷೇಧಿಸಿ ಹೊರಡಿಸಿದ ಹೈಕೋರ್ಟ್ ಮಧ್ಯಂತರ ಆದೇಶಕ್ಕೆ ತಡೆ ಕೋರಿ ಸಲ್ಲಿಸಿದ್ದ ಅರ್ಜಿ ವಿಚಾರಣೆ ನಡೆಸಲು ಸುಪ್ರೀಂಕೋರ್ಟ್ ನಿರಾಕರಿಸಿದೆ. ಮುಖ್ಯ ನ್ಯಾಯಮೂರ್ತಿ ಎನ್.ವಿ ರಮಣ ನೇತೃತ್ವದ ತ್ರಿ ಸದಸ್ಯ ಪೀಠ ಹೈಕೋರ್ಟ್ ನಲ್ಲಿ ವಿಚಾರಣೆ ಮುಂದುವರಿಯಲಿ ಎಂದು ಅಭಿಪ್ರಾಯಪಟ್ಟಿದೆ.
ಗುರುವಾರ ಕರ್ನಾಟಕ ಹೈಕೋರ್ಟ್ ನೀಡಿದ ಆದೇಶವನ್ನು ಪ್ರಶ್ನೆ ಮಾಡಿ ಉಡುಪಿ ಮೂಲದ ಆಯೇಷಾ ಮತ್ತು ಇತರೆ ವಿದ್ಯಾರ್ಥಿನಿಯರು ಸುಪ್ರೀಂಕೋರ್ಟ್ ಮೆಟ್ಟಿಲೇರಿದರು. ಹೈಕೋರ್ಟ್ ಆದೇಶ ಎಲ್ಲ ಸಮುದಾಯದ ಆಚರಣೆಗೆ ದಕ್ಕೆ ತರಲಿದ್ದು ಆ ಆದೇಶಕ್ಕೆ ತಡೆ ನೀಡಬೇಕು ಎಂದು ಮನವಿ ಮಾಡಿದ್ದರು.
ನಿನ್ನೆ ಸಂಜೆ ಸಲ್ಲಿಕೆಯಾಗಿದ್ದ ಈ ಅರ್ಜಿಯನ್ನು ತುರ್ತು ವಿಚಾರಣೆ ನಡೆಸಬೇಕು ಎಂದು ಇಂದು ಹಿರಿಯ ವಕೀಲ ದೇವದತ್ ಕಾಮತ್ ಮುಖ್ಯ ನ್ಯಾ. ಎನ್.ವಿ ರಮಣ ನೇತೃತ್ವದ ತ್ರಿ ಸದಸ್ಯ ಪೀಠದ ಮುಂದೆ ಮನವಿ ಮಾಡಿದರು. ಆದರೆ ತುರ್ತು ವಿಚಾರಣೆ ನಡೆಸಲು ಪೀಠ ನಿರಾಕರಿಸಿತು.
ವಿಚಾರಣೆ ವೇಳೆ ವಾದ ಮಂಡಿಸಿದ ದೇವದತ್ ಕಾಮತ್, ಹೈಕೋರ್ಟ್ ಆದೇಶ ಕೇವಲ ಮುಸ್ಲಿಂ ಮಾತ್ರವಲ್ಲದೇ ಸಿಖ್ ಸೇರಿದಂತೆ ಹಲವು ಸಮುದಾಯಗಳಿಗೆ ತೊಂದರೆಯಾಗಲಿದೆ. ಸಿಖ್ ಟರ್ಬಲ್ ಬಳಸದೇ ಶಾಲೆ ಕಾಲೇಜುಗಳಿಗೆ ಬರುವುದಿಲ್ಲ ಹೀಗಾಗಿ ಹೈಕೋರ್ಟ್ ಆದೇಶ ಸಂವಿಧಾನದ ಧಾರ್ಮಿಕ ಹಕ್ಕಿನ ಉಲ್ಲಂಘನೆಯಾಗಿದೆ ಎಂದರು. ಅಲ್ಲದೇ ಪರೀಕ್ಷೆ ಬರುತ್ತಿರುವ ಹೊತ್ತಲ್ಲಿ ಧಾರ್ಮಿಕ ವಸ್ತ್ರಗಳೊಂದಿಗೆ ಶಾಲೆ ಕಾಲೇಜು ತೆರಳಲು ಅನುವು ಮಾಡಿಕೊಡಬೇಕು ಎಂದು ಮನವಿ ಮಾಡಿದರು.
ಇದಕ್ಕೆ ಪ್ರತಿಕ್ರಿಯಿಸಿದ ನ್ಯಾಯಮೂರ್ತಿ ಎನ್.ವಿ ರಮಣ ಹೈಕೋರ್ಟ್ ನಲ್ಲಿ ಏನು ನಡೆಯುತ್ತಿದೆ ಎಂದು ನಾವು ಗಮನಿಸುತ್ತಿದ್ದೇವೆ, ಈ ವಿಚಾರವನ್ನು ನೀವೂ ರಾಷ್ಟ್ರ ಮಟ್ಟಕ್ಕೆ ತರಲು ಪ್ರಯತ್ನಿಸುತ್ತಿದ್ದೀರಾ? ದೇಶದ ಪ್ರತಿಯೊಬ್ಬ ಪ್ರಜೆಗೂ ಧಾರ್ಮಿಕ ಹಕ್ಕುಗಳಿದೆ ನಾವು ಅದನ್ನು ರಕ್ಷಿಸುತ್ತೇವೆ ಹೈಕೋರ್ಟ್ ವಿಚಾರಣೆ ನಡೆಸಲಿ ನಾವು ಸೂಕ್ತ ಸಮಯದಲ್ಲಿ ಮಧ್ಯಪ್ರವೇಶ ಮಾಡಲಿದ್ದೇವೆ ಎಂದು ಭರವಸೆ ನೀಡಿದರು.