ಅಕ್ಷರ ಜ್ಞಾನವಿಲ್ಲದೆಯೂ ಪರಿಶ್ರಮದಿಂದ ಯಶಸ್ವಿ ಉದ್ಯಮಿಯಾಗಿ 300ರಷ್ಟು ಮಂದಿಗೆ ಉದ್ಯೋಗ, ಬಡವರಿಗೆ ನೆರವು ನೀಡುತ್ತಿರುವ ಸಮಾಜಸೇವಕ ರವಿ ಕಕ್ಯಪದವುಗೆ ಮಂಗಳೂರು ಪ್ರೆಸ್ ಕ್ಲಬ್ ಪ್ರಶಸ್ತಿ – ಕಹಳೆ ನ್ಯೂಸ್
ಮಂಗಳೂರು,ಫೆ 13 : ಮಂಗಳೂರು ಪ್ರೆಸ್ ಕ್ಲಬ್‌ನಿಂದ ದಕ್ಷಿಣ ಕನ್ನಡ ಜಿಲ್ಲೆಯ ಶ್ರೇಷ್ಠ ಸಾಧಕರಿಗೆ ಪ್ರತಿವರ್ಷ ನೀಡಲಾಗುವ ಮಂಗಳೂರು ಪ್ರೆಸ್ ಕ್ಲಬ್- 2021ನೇ ಸಾಲಿನ ವರ್ಷದ ಪ್ರಶಸ್ತಿಗೆ ಅಕ್ಷರ ಜ್ಞಾನವಿಲ್ಲದೆಯೂ ಪರಿಶ್ರಮದಿಂದ ಯಶಸ್ವಿ ಉದ್ಯಮಿಯಾಗಿ 300ರಷ್ಟು ಮಂದಿಗೆ ಉದ್ಯೋಗ, ಬಡವರಿಗೆ ನೆರವು ನೀಡುತ್ತಿರುವ ಸಮಾಜಸೇವಕ ರವಿ ಕಕ್ಯಪದವು ಆಯ್ಕೆಯಾಗಿದ್ದಾರೆ.
ಹಿರಿಯ ಪತ್ರಕರ್ತ ಮನೋಹರ್ ಪ್ರಸಾದ್, ಭಾರತೀಯ ರೆಡ್‌ಕ್ರಾಸ್ ಸೊಸೈಟಿಯ ದಕ್ಷಿಣ ಕನ್ನಡ ಶಾಖೆಯ ಕಾರ್ಯಕಾರಿ ಸಮಿತಿ ಸದಸ್ಯ, ಸಮಾಜ ಸೇವಕ ರವೀಂದ್ರನಾಥ್ ಕೆ. ಹಾಗೂ ಸಹ್ಯಾದ್ರಿ ಎಂಜಿನಿಯರಿಂಗ್ ಕಾಲೇಜಿನ ಪ್ರಾಧ್ಯಾಪಕ ಡಾ.ಜಿ.ಅನಂತ ಪ್ರಭು ನೇತೃತ್ವದ ನಿರ್ಣಾಯಕ ಸಮಿತಿ ಈ ಆಯ್ಕೆ ನಡೆಸಿದೆ.
ಮಾ.6ರಂದು ಪ್ರಶಸ್ತಿ ಪ್ರದಾನ: ಮಾ.6ರಂದು ತಣ್ಣೀರುಬಾವಿಯ ಟ್ರೀ ಪಾರ್ಕ್‌ನಲ್ಲಿ ನಡೆಯಲಿರುವ ಪ್ರೆಸ್ ಕ್ಲಬ್ ದಿನಾಚರಣೆಯಂದು ರವಿ ಕಕ್ಯಪದವು ಅವರಿಗೆ ಮಂಗಳೂರು ಪ್ರೆಸ್ ಕ್ಲಬ್ ಪ್ರಶಸ್ತಿ ಪ್ರದಾನ ಮಾಡಲಾಗುವುದು. ಪ್ರಶಸ್ತಿಯು 10,001 ರೂ. ನಗದು, ಪ್ರಶಸ್ತಿ ಫಲಕ ಮತ್ತು ಸನ್ಮಾನವನ್ನೊಳಗೊಂಡಿದೆ ಎಂದು ಮಂಗಳೂರು ಪ್ರೆಸ್ ಕ್ಲಬ್‌ನ ಪ್ರಧಾನ ಕಾರ್ಯದರ್ಶಿ ಮುಹಮ್ಮದ್ ಆರಿಫ್ ಪಡುಬಿದ್ರಿ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.
ರವಿ ಕಕ್ಯಪದವು ಪರಿಚಯ: ಬಂಟ್ವಾಳ ತಾಲೂಕಿನ ಉಳಿ ಗ್ರಾಮದ ಮುದಲಾಡಿ ಕುಟುಂಬದ ದಿವಂಗತ ಚಂದು ಪೂಜಾರಿ- ಕಮಲ ದಂಪತಿಯ ಇಬ್ಬರು ಮಕ್ಕಳ ಪೈಕಿ ಹಿರಿಯವರು ರವಿ ಕಕ್ಯಪದವು. ಬಡ ಕುಟುಂಬದಲ್ಲಿ ಹುಟ್ಟಿದ ಅವರಿಗೆ ಆರನೇ ವರ್ಷದಲ್ಲಿ ಶಾಲೆಗೆ ಸೇರಿಸಲಾಗಿತ್ತು. ಕಟ್ಟಿಗೆ ಒಡೆಯುವ ಕಾಯಕ ಮಾಡುತ್ತಿದ್ದ ತಂದೆಯ ಕಾಲಿಗೆ ಕೊಡಲಿ ಪೆಟ್ಟು ಬಿದ್ದು, ಗಂಭೀರ ಗಾಯವಾದ ದಿನವೇ ಶಾಲೆ ಬಿಟ್ಟಿದ್ದಾರೆ. ಕೇವಲ 15 ದಿನ ಶಾಲೆಯ ಮೆಟ್ಟಿಲು ಹತ್ತಿದ್ದು, ಅವರಿಗೆ ಅಕ್ಷರ ಜ್ಞಾನವಿಲ್ಲ.
ಕುಟುಂಬವನ್ನು ಸಾಗಿಸುವ ಜವಾಬ್ದಾರಿಯಿಂದ ಬಾಲ್ಯದಲ್ಲೇ ದುಡಿಮೆ ಆರಂಭಿಸಿದ ಅವರು, ಧರ್ಮಸ್ಥಳದಲ್ಲಿ ಪತ್ರಿಕಾ ವಿತರಕರಾಗಿದ್ದರು. ಅಂಗಡಿಯಲ್ಲಿ ಸಹಾಯಕರಾಗಿದ್ದರು. ಮುಂಬಯಿಯಲ್ಲಿ ಹೋಟೆಲ್ ಕ್ಲೀನರ್ ಆಗಿದ್ದರು. ಮೇಸ್ತ್ರಿಗೆ ಹೆಲ್ಪರ್ ಆಗಿದ್ದರು. ಹೋಟೆಲ್‌ನಲ್ಲಿ ಸಹಾಯಕರಾಗಿದ್ದರು. ಅರ್ಚಕರ ಸಹಾಯಕನಾಗಿಯೂ ಕೆಲಸ ಮಾಡಿದ್ದರು.
2000 ಇಸವಿಗೆ ಸುಬ್ರಹ್ಮಣ್ಯಕ್ಕೆ ಬಂದ ಅವರು, ಪೈಂಟರ್, ಸಾರಣೆ ಕೆಲಸಗಾರನಾಗಿ ದುಡಿದು ಬಳಿಕ ಗುತ್ತಿಗೆದಾರನಾದರು. ಬಳಿಕ ಸ್ವಂತ ಅನುಗ್ರಹ ಕನ್‌ಸ್ಟ್ರಕ್ಷನ್, ಏನೆಕಲ್‌ನಲ್ಲಿ ಅಮೃತ ಅನುಗ್ರಹ ಇಂಡಸ್ಟ್ರೀಸ್ ಸ್ಥಾಪಿಸಿ, ಯಶಸ್ವಿ ಮತ್ತು ಬೇಡಿಕೆಯ ಗುತ್ತಿಗೆದಾರನಾಗಿದ್ದಾರೆ. ಇಷ್ಟರ ತನಕ 265ಕ್ಕೂ ಹೆಚ್ಚು ಮನೆಗಳನ್ನು ಹಾಗೂ ಐದು ಅಪಾರ್ಟ್‌ಮೆಂಟ್ ನಿರ್ಮಿಸಿದ ಹಿರಿಮೆ ಅವರದ್ದು. ಇಂದು ಸುಮಾರು 300 ಮಂದಿಗೆ ನೇರ ಉದ್ಯೋಗ ಒದಗಿಸಿದ್ದಾರೆ.
ಸಮಾಜಸೇವೆ: ಸಮಾಜಸೇವೆಯು ರವಿ ಕಕ್ಯಪದವು ಅವರ ಇಷ್ಟದ ಪ್ರವೃತ್ತಿ. ತನ್ನ ದುಡಿಮೆಯ ಉಳಿತಾಯದ ಶೇ.25 ಭಾಗವನ್ನು ಸಮಾಜಸೇವೆಗೆ ವ್ಯಯ ಮಾಡುತ್ತಿದ್ದಾರೆ. ಪ್ರತಿವರ್ಷ ನೂರಾರು ಮಕ್ಕಳಿಗೆ ಪುಸ್ತಕ ಮತ್ತು ಸಮವಸ್ತ್ರ ನೀಡುತ್ತಿದ್ದಾರೆ. ಕುಲ್ಕುಂದ ಗ್ರಾಮದಲ್ಲಿ 80 ಸೆಂಟ್ಸ್ ಜಾಗವನ್ನು ಖರೀದಿಸಿ, ಅದನ್ನು ಆರ್ಥಿಕವಾಗಿ ಹಿಂದುಳಿದ ಕುಟುಂಬಗಳಿಗೆ ದಾನ ಮಾಡಿದ್ದಾರೆ. ಅದರಲ್ಲಿ ಅರ್ಹ ವ್ಯಕ್ತಿಗಳಿಗೆ ಮನೆಗಳನ್ನೂ ಉಚಿತವಾಗಿ ನಿರ್ಮಿಸಿ ಕೊಟ್ಟಿದ್ದಾರೆ. ಪ್ರತಿವರ್ಷ ಷಷ್ಠಿ ಸಂದರ್ಭದಲ್ಲಿ ಬಡವರಿಗೆ ಅಕ್ಕಿಯನ್ನು ದಾನ ಮಾಡುತ್ತಿದ್ದಾರೆ.
ಸಮಾಜಸೇವೆಗಾಗಿ ಜೇಸಿಐ ಮತ್ತಿತರ ಸಂಘ ಸಂಸ್ಥೆಗಳಲ್ಲೂ ತಮ್ಮನ್ನು ತೊಡಗಿಸಿಕೊಂಡಿದ್ದಾರೆ. ಜೆಸಿಐನ ವಲಯ ಉಪಾಧ್ಯಕ್ಷ, ವಲಯಾಧಿಕಾರಿ ಆಗಿದ್ದರು. ಅವರ ಜೀವನ, ಸಾಧನೆ ಕುರಿತು ದಂತ ವೈದ್ಯೆ ಡಾ.ರಾಜೇಶ್ವರಿ ಗೌತಮ್ ಅವರು ‘ಬೆಂಕಿಯಲ್ಲಿ ಅರಳಿದ ಹೂವು’ ಎಂಬ ಪುಸ್ತಕ ಬರೆದಿದ್ದಾರೆ.ರವಿ ಕಕ್ಯಪದವು ಅವರಿಗೆ ಜೆಸಿಐ ಸಾಧನಾಶ್ರೀ, ಕಮಲ ಪತ್ರ ಪ್ರಶಸ್ತಿ, ಸ್ವಸ್ತಿಶ್ರೀ ರಾಜ್ಯ ಪ್ರಶಸ್ತಿ ಇತ್ಯಾದಿಯಲ್ಲದೇ, 270ಕ್ಕೂ ಅಧಿಕ ಸನ್ಮಾನಗಳು ಲಭಿಸಿವೆ.
ಶೂನ್ಯದಿಂದ ಬಂದು ಸಾಧಕನಾಗಿ ಮೆರೆದ ಅವರ ಜೀವನ ವೃತ್ತಾಂತ ಮತ್ತೊಬ್ಬರಿಗೆ ಪ್ರೇರಣದಾಯಕ. ಬದುಕಿನ ಕಷ್ಟ, ಕಾರ್ಪಣ್ಯ, ಕಲ್ಲು ಮುಳ್ಳುಗಳನ್ನು ದಾಟಿ ಸಾಧನೆ ಮಾಡಿದ್ದಾರೆ.