ಪುತ್ತೂರು: ಮಕ್ಕಳಿಗೆ ಪಠ್ಯ ಪ್ರವಚನಗಳೊಂದಿಗೆ ಕ್ರೀಡೆಯ ಅಗತ್ಯವಿದೆ. ಕ್ರೀಡೆಯಲ್ಲಿ ಹೆಚ್ಚೆಚ್ಚು ತೊಡಗಿಸಿಕೊಂಡಷ್ಟು ಮಕ್ಕಳ ಬೌದ್ಧಿಕ ಮತ್ತು ಶಾರೀರಿಕ ವಿಕಸನವಾಗಲು ಸಾಧ್ಯ. ವಾಲಿಬಾಲ್, ತ್ರೋಬಾಲ್, ಕಬಡ್ಡಿ ಮುಂತಾದ ಕ್ರೀಡೆಗಳು ನಮ್ಮ ಹಳ್ಳಿಗಳಿಂದ ಬಂದಿರುವಂತಹುದು. ಇದಕ್ಕೆ ಹೆಚ್ಚಿನ ಪ್ರಾಶಸ್ತ್ಯ ನೀಡಬೇಕು. ಮಕ್ಕಳು ಶಾಲಾ ಕಾಲೇಜಿಗಳಲ್ಲಿ ಸ್ಪರ್ಧೆಗಳನ್ನು ಇಟ್ಟಾಗ ಅತೀಹೆಚ್ಚಿನ ಸಂಖ್ಯೆಯಲ್ಲಿ ಭಾಗವಹಿಸಬೇಕು ಎಂದು ನಗರದ ನಟ್ಟೋಜ ಫೌಂಡೇಶನ್ ಟ್ರಸ್ಟ್ ಮುನ್ನಡೆಸುತ್ತಿರುವ ಅಂಬಿಕಾ ಸಮೂಹ ಶಿಕ್ಷಣ ಸಂಸ್ಥೆಗಳ ಆಡಳಿತ ಮಂಡಳಿ ಸದಸ್ಯ ಸುರೇಶ ಶೆಟ್ಟಿ ಹೇಳಿದರು.
ಅವರು ಬಪ್ಪಳಿಗೆಯ ಅಂಬಿಕಾ ಕ್ಯಾಂಪಸ್‍ನಲ್ಲಿ ನಡೆದ ಕ್ರೀಡಾ ಕೂಟವನ್ನು ಉದ್ಘಾಟಿಸಿ ಮಾತನಾಡಿದರು. ಕ್ರೀಡೆಯು ದೇಹಕ್ಕೆ ವ್ಯಾಯಮವನ್ನು ಒದಗಿಸುವುದಲ್ಲದೆ ಮನುಷ್ಯನ ಮಾನಸಿಕ ಒತ್ತಡವನ್ನು ಕಡಿಮೆ ಮಾಡಲು ಸಹಕಾರಿಯಾಗಿದೆ. ಸದ್ಯದಲ್ಲೇ ಎದುರಾಗಲಿರುವ ಪರೀಕ್ಷೆಯ ತಯಾರಿಯ ಒತ್ತಡದ ಮಧ್ಯೆಯೂ ಕ್ರೀಡಾ ಕೂಟಗಳನ್ನು ಏರ್ಪಡಿಸಿರುವುದು ಸಂಸ್ಥೆಗೆ ವಿದ್ಯಾರ್ಥಿಗಳ ಸರ್ವತೋಮುಖ ಬೆಳವಣಿಗೆಯ ಬಗೆಗಿರುವ ಕಾಳಜಿಯನ್ನು ತೋರಿಸುತ್ತದೆ ಎಂದು ಹೇಳಿದರು.
ಕಾರ್ಯಕ್ರಮದಲ್ಲಿ ಉಪಸ್ಥಿತರಿದ್ದ ಅಂಬಿಕಾ ಸಮೂಹ ಶಿಕ್ಷಣ ಸಂಸ್ಥೆಗಳ ಕೋಶಾಧಿಕಾರಿ ರಾಜಶ್ರೀ ನಟ್ಟೋಜ ಮಾತನಾಡಿ ಕೊರೋನಾ ಹಾವಳಿಯಿಂದ ಮಕ್ಕಳು ಎಲ್ಲಾ ರೀತಿಯ ಕ್ರೀಡಾ ಮನೋರಂಜನೆಗಳಿಂದ ವಂಚಿತರಾಗಿದ್ದು, ಇದೀಗ ಮಕ್ಕಳು ಹುರುಪು ಹುಮ್ಮಸ್ಸುಗಳಿಂದ ಭಾಗವಹಿಸುವಂತಾಗಿದೆ. ಕ್ರೀಡೆಯು ನಮ್ಮ ಮಾನಸಿಕ ಹಾಗೂ ದೈಹಿಕ ಸಾಮರ್ಥ್ಯವನ್ನು ಹೆಚ್ಚಿಸಿ ಲವಲವಿಕೆಯಿಂದ ಇರಲು ಸಹಕರಿಸುತ್ತದೆ. ಪಠ್ಯಗಳೊಂದಿಗೆ ಕ್ರೀಡೆಯನ್ನು ಅಳವಡಿಸಿಕೊಂಡಾಗ ಶೈಕ್ಷಣಿಕ ಹಂತದಲ್ಲಿ ಹೆಚ್ಚಿನ ಸಾಧನೆಗೈಯಲು ಸಾಧ್ಯ ಎಂದರು.
ಕ್ರೀಡಕೂಟದಲ್ಲಿ ಸಂಸ್ಥೆಯ ಕ್ಯಾಂಪಸ್ ನಿರ್ದೇಶಕ ಬಾಸ್ಕರ್ ಶೆಟ್ಟಿ ಹಾಗೂ ಅಂಬಿಕಾ ವಿದ್ಯಾಲಯದ ದೈಹಿಕ ಶಿಕ್ಷಕಿ ಸುಚಿತ್ರಾ ಶೆಟ್ಟಿ ಉಪಸ್ಥಿತರಿದ್ದರು, ವಿದ್ಯಾರ್ಥಿ ಅನೀಶ್ ಕೆ ಪ್ರಾರ್ಥಿಸಿ, ಸಂಸ್ಥೆಯ ಪ್ರಾಂಶುಪಾಲ ಶಂಕರನಾರಾಯಣ ಭಟ್ ಸ್ವಾಗತಿಸಿದರು.
ನೆಲ್ಲಿಕಟ್ಟೆ ಕಾಲೇಜಿನ ವಿದ್ಯಾರ್ಥಿ ಕ್ಷೇಮಪಾಲನ ಅಧಿಕಾರಿ ಪ್ರದೀಪ್ ಕೆ ವೈ ವಂದನಾರ್ಪಣೆಗೈದು, ಸಂಸ್ಥೆಯ ಕ್ರೀಡಾ ನಿರ್ದೇಶಕ ನವೀನ್ ಡಿ ಕಾರ್ಯಕ್ರಮ ನಿರೂಪಿಸಿದರು.