ವಿವೇಕಾನಂದ ಮಹಾವಿದ್ಯಾಲಯದಲ್ಲಿ ಪ್ರತಿಭೆಗಳ ‘ಕಲರವ 2022’ ಪ್ರತಿಭಾನ್ವೇಷನೆ ಕಾರ್ಯಕ್ರಮ – ಕಹಳೆ ನ್ಯೂಸ್
ಪುತ್ತೂರು : ಮಾಧ್ಯಮ ಲೋಕದಲ್ಲಿ ಕೆಲಸ ಮಾಡಲು ಇಚ್ಛಿಸುವವರು ಪೂರ್ವ ತಯಾರಿಯೊಂದಿಗೆ ಕಾರ್ಯವನ್ನು ಆರಂಭಿಸಬೇಕು. ಭಾವಿ ಪತ್ರಕರ್ತರನ್ನು ದೈಹಿಕವಾಗಿಯೂ, ಮಾನಸಿಕವಾಗಿಯೂ ಸದೃಢರನ್ನಾಗಿ ರೂಪಿಸಬೇಕು. ಒಬ್ಬ ವಿದ್ಯಾರ್ಥಿ ಪತ್ರಕರ್ತನಾಗಲು ಭಾಷೆಯ ಮೇಲಿನ ಹಿಡಿತ ಚೆನ್ನಾಗಿರಬೇಕು. ಪತ್ರಿಕೆಗಳನ್ನು ನೋಡಿದರೆ ಸಾಲದು, ಓದಬೇಕು. ವಿಷಯಗಳನ್ನು ಅರ್ಥೈಸಿಕೊಳ್ಳಬೇಕು ಎಂದು ಹೊಸದಿಗಂತ ಪತ್ರಿಕೆಯ ಸಂಪಾದಕ ವಿನಾಯಕ್ ಭಟ್ ಮುರೂರು ಹೇಳಿದರು.
ಅವರು ವಿವೇಕಾನಂದ ಮಹಾವಿದ್ಯಾಲಯದ ಸ್ನಾತಕೋತ್ತರ ಸಮೂಹ ಸಂವಹನ ಮತ್ತು ಪತ್ರಿಕೋದ್ಯಮ ವಿಭಾಗ, ಮಾನವಿಕ ಸಂಘ ಮತ್ತು ಐಕ್ಯೂಎಸಿ ಘಟಕದ ಆಶ್ರಯದಲ್ಲಿ ಪದವಿ ಕಲಾ ವಿಭಾಗದ ವಿದ್ಯಾರ್ಥಿಗಳಿಗಾಗಿ ‘ಕಲರವ-2022’ ಪ್ರತಿಭಾನ್ವೇಷನೆ ಕಾರ್ಯಕ್ರಮವನ್ನು ಉದ್ಘಾಟಿಸಿ ಮಾತನಾಡಿದರು.
ಪ್ರೆಸ್, ಪೊಲಿಟಿಕ್ಸ್ ಹಾಗೂ ಪೊಲೀಸ್ ಇವರಿಗೆ ರಜೆ ಇಲ್ಲ. ಅವರದ್ದು ಅವಿರತ ಕೆಲಸ. ವರ್ಕ್ ಫ್ರಮ್ ಹೋಮ್ ಅನ್ನುವುದು ಮಾಧ್ಯಮಗಳಿಗೂ ಅನ್ವಯ ಮಾಡಬಹುದು ಎನ್ನುವುದನ್ನು ಕೊರೋನ ಕಲಿಸಿಕೊಟ್ಟಿತು. ಸುದ್ದಿಗಳ ಕೊರತೆ ಕಾಡಿತು. ಆದರೆ ಏನು ಸುದ್ದಿ ಮಾಡುವುದು ಎನ್ನುವ ಹೊಸ ಸವಾಲು ಎದುರಾಯಿತು. ಎಲ್ಲಾ ಸುದ್ದಿ ಇದ್ದಾಗ ಸುದ್ದಿಯನ್ನು ಆರಿಸುತ್ತಿದ್ದೆವು. ಆದರೆ ಏನೂ ಸುದ್ದಿ ಇಲ್ಲದಿರುವಾಗ ಏನನ್ನು ಪತ್ರಿಕೆಗಳಲ್ಲಿ ಏನನ್ನು ತುಂಬಿಸಬೇಕು ಅನ್ನುವುದು ಪತ್ರಕರ್ತರಿಗೆ ಸವಾಲು. ಅವರ ಕ್ರಿಯಾತ್ಮಕತೆಗೆ ಎದುರಾಗುವ ಸವಾಲು. ಯಾವ ಸುದ್ದಿಯನ್ನು ನೀಡಬೇಕು ಹಾಗೂ ಎಂಥಹ ಶೀರ್ಷಿಕೆಯನ್ನು ನೀಡಬಹುದು. ಮಾತ್ರವಲ್ಲ ಉಳಿದ ಪತ್ರಿಕೆಗಳಿಗಿಂತ ಮೊದಲು ಹಾಗೂ ಅವುಗಳಿಗಿಂತ ವಿಭಿನ್ನವಾದ ಶೀರ್ಷಿಕೆಯನ್ನು ನೀಡುವುದು ಎಂಬುವುದರ ಕುರಿತಾಗಿ ಪತ್ರಕರ್ತ ಯೋಚಿಸಬೇಕು. ತಾನೇ ಬರೆದ ಲೇಖನಗಳನ್ನು ತಿದ್ದುಪಡಿ ಮಾಡುವುದನ್ನು ಕಲಿಯಬೇಕು. ಪತ್ರಿಕೆಗಳಲ್ಲಿ ಬರೆಯುವಾಗ, ಅಕ್ಷರಗಳನ್ನು ಬಳಸುವಾಗ ಎಚ್ಚರವಹಿಸಬೇಕು ಎಂದು ನುಡಿದರು.
ಕಾರ್ಯಕ್ರಮದ ಅಧ್ಯಕ್ಷತೆಯನ್ನು ಕಾಲೇಜಿನ ಆಡಳಿತ ಮಂಡಳಿಯ ಅಧ್ಯಕ್ಷ ಡಾ. ಶ್ರೀಪತಿ ಕಲ್ಲೂರಾಯ ಮಾತನಾಡಿ, ಶೈಕ್ಷಣಿಕ ಜೀವನದಲ್ಲಿ ಕಲಿತ ವಿಷಯಗಳನ್ನು ಮರೆಯಬಾರದು. ಯಾವುದೇ ವಿಷಯಗಳನ್ನು ಸಲಿಸಾಗಿ ತೆಗೆದುಕೊಳ್ಳಬಾರದು. ಇಂದು ಕಲಿತ ಪ್ರತಿಯೊಂದು ವಿಷಯಗಳು ನಮ್ಮ ನಾಳೆಗೆ ಸಹಕಾರಿಯಾಗಲಿದೆ. ವಿದ್ಯಾರ್ಥಿಗಳಲ್ಲಿ ಅನೇಕ ಪ್ರತಿಭೆಗಳು ಅಡಕವಾಗಿದೆ. ಪ್ರತಿಭಾ ಸಿಂಚನಾ ಕಾರ್ಯಕ್ರಮದ ಮೂಲಕ ವಿದ್ಯಾರ್ಥಿಗಳ ಪ್ರತಿಭೆಯನ್ನು ಹೊರಸೂಸುವ ಕಾರ್ಯ ನಡೆಯಬೇಕಿದೆ.
ಪಠ್ಯವಿಷಯಗಳ ಜೊತೆಗೆ ಪ್ರಾಯೋಗಿಕ ಜ್ಞಾನವನ್ನು ವಿದ್ಯಾರ್ಥಿಗಳು. ಜೊತೆಗೆ ಭಾಷೆಯ ಮೇಲಿನ ಹಿಡಿತವನ್ನು ಕೂಡ ವಿದ್ಯಾರ್ಥಿಗಳು ಪಡೆದುಕೊಳ್ಳಬೇಕು. ಶಿಕ್ಷಣದ ಜೊತೆಗೆ, ಧರ್ಮ-ಸಂಸ್ಕøತಿಯ ವೈಚಾರಿಕತೆಯನ್ನು ಜೀವನದಲ್ಲಿ ಅಳವಡಿಸಬೇಕು. ವಿದ್ಯಾರ್ಥಿಗಳು ಗೆಲ್ಲುವುದಕ್ಕಿಂತ ಸ್ಫರ್ಧೆಯಲ್ಲಿ ಭಾಗವಹಿಸುವುದು ಅವಶ್ಯಕವಾಗಿದೆ ಎಂದು ಅಭಿಪ್ರಾಯಪಟ್ಟರು.
ಕಾರ್ಯಕ್ರಮದ ಮುಖ್ಯ ಅತಿಥಿಯಾಗಿ ಭಾಗವಹಿಸಿದ ಕಾಲೇಜಿನ ಪ್ರಾಂಶುಪಾಲ ಪ್ರೊ. ವಿಷ್ಣು ಗಣಪತಿ ಭಟ್ ಮಾತನಾಡಿ, ಭಾಷೆಯ ಮೇಲೆ ಹಿಡಿತವಿದ್ದಾಗ ಯಾವುದೇ ಕ್ಷೇತ್ರದಲ್ಲಿ ಉನ್ನತಿಯನ್ನು ಸಾಧಿಸಬಹುದು. ಪತ್ರಕರ್ತರಾಗುವವರು ಸಮಯದ ಪರಿಮಿತಿಗೆ ಒಳಪಡದೇ, ಯಾವುದೇ ಕ್ಷಣದಲ್ಲೂ, ಎಂತಹ ಪರಿಸ್ಥಿತಿಯಲ್ಲಿಯೂ ಕಾರ್ಯ ನಿರ್ವಹಿಸಲು ತಯಾರಿರಬೇಕು. ಸ್ಪರ್ಧೆಯಲ್ಲಿ ಗೆಲ್ಲುವುದಕ್ಕಿಂತ, ಭಾಗವಹಿಸುವಿಕೆ ಮುಖ್ಯ ಎಂದು ನುಡಿದರು. ಈ ಸಂದರ್ಭ ಕಾಲೇಜಿನ ಪ್ರತಿಭಾನ್ವೇಷಣೆ ಸ್ಪರ್ಧೆಯಲ್ಲಿನ ಉತ್ತಮ ಪ್ರದರ್ಶನಕ್ಕಾಗಿ, ಎಂಸಿಜೆ ವಿದ್ಯಾರ್ಥಿಗಳನ್ನು ಅಭಿನಂದಿಸಿದರು.
ಈ ಸಂದರ್ಭ ಪದವಿ ಪತ್ರಿಕೋದ್ಯಮ ವಿಬಾಗದ ಪ್ರಾಯೋಗಿಕ ಪತ್ರಿಕೆ ‘ವಿಕಸನ’ ಕಲರವ ವಿಶೇಷ ಸಂಚಿಕೆಯನ್ನು ಪತ್ರಕರ್ತ ವಿನಾಯಕ ಭಟ್ ಮುರೂರು ಬಿಡುಗಡೆಗೊಳಿಸಿದರು. ಪದವಿ ಪತ್ರಿಕೋದ್ಯಮ ವಿಭಾಗದ ಮುಖ್ಯಸ್ಥೆ ಭವ್ಯ ಪಿ. ಆರ್. ನಿಡ್ಪಳ್ಳಿ ಸ್ವಾಗತಿಸಿ ಪ್ರಸ್ತಾವನೆಗೈದರು.
ದ್ವಿತೀಯ ಸ್ನಾತಕೋತ್ತರ ಸಮೂಹ ಸಂವಹನ ಮತ್ತು ಪತ್ರಿಕೋದ್ಯಮ ವಿಭಾಗದ ವಿದ್ಯಾರ್ಥಿನಿ ಪ್ರಜ್ಞಾ ಒಡಿಲ್ನಾಳ ಕಾರ್ಯಕ್ರಮವನ್ನು ನಿರ್ವಹಿಸಿದರು.