Recent Posts

Tuesday, January 21, 2025
ದಕ್ಷಿಣ ಕನ್ನಡಪುತ್ತೂರುಸುದ್ದಿ

ನರೇಂದ್ರ ಪದವಿ ಪೂರ್ವ ಕಾಲೇಜಿನಲ್ಲಿ ಎಸ್.ಎಸ್.ಎಲ್.ಸಿ ವಿದ್ಯಾರ್ಥಿಗಳ ಚೈತನ್ಯ ಕಾರ್ಯಾಗಾರ “ಸೌರಭ” ಉದ್ಘಾಟನಾ ಕಾರ್ಯಕ್ರಮ- ಕಹಳೆ ನ್ಯೂಸ್

ಪುತ್ತೂರು: ನರೇಂದ್ರ ಪದವಿ ಪೂರ್ವ ಕಾಲೇಜಿನಲ್ಲಿ ನಡೆದ ಎಸ್.ಎಸ್.ಎಲ್.ಸಿ ವಿದ್ಯಾರ್ಥಿಗಳ ಚೈತನ್ಯವನ್ನು ಪುನಶ್ಚೇತನಗೊಳಿಸುವ ಕಾರ್ಯಾಗಾರ “ಸೌರಭ” ಕಾರ್ಯಕ್ರಮವನ್ನು ಉದ್ಘಾಟಿಸಿ ಮಾತನಾಡಿದ ಕಾಲೇಜಿನ ಆಡಳಿತ ಮಂಡಳಿಯ ಸದಸ್ಯರಾದ ಸಂಪತ್ ಕುಮಾರ್ “ಭೌತಿಕ, ಮಾನಸಿಕ ಉತ್ತೇಜನವನ್ನು ನೀಡುವುದರೊಂದಿಗೆ ವಿದ್ಯಾರ್ಥಿಗಳ ಅಭ್ಯುದಯಕ್ಕೆ ಸಹಕಾರಿಯಾಗಬಲ್ಲ ಪಠ್ಯೇತರ ಚಟುವಟಿಕೆಗಳನ್ನು ಈ ಕಾರ್ಯಾಗಾರದಲ್ಲಿ ಹಮ್ಮಿಕೊಳ್ಳಲಾಗಿದೆ. ವಿದ್ಯಾರ್ಥಿಗಳೆಲ್ಲರೂ ಅದರ ಸದುಪಯೋಗವನ್ನು ಪಡೆಯಬೇಕು. ವಿದ್ಯಾರ್ಥಿಗಳು ತಮ್ಮ ಶೈಕ್ಷಣಿಕ ಜೀವನದಲ್ಲಿ ಸಕರಾತ್ಮಕ ವಿಷಯಗಳ ಬಗ್ಗೆ ಚಿಂತನೆ ಮಾಡುತ್ತಾ ಜ್ಞಾನವನ್ನು ಸಂಪಾದಿಸುವಂತಾಗಬೇಕು. ಬಾಲ್ಯದಲ್ಲಿಯೇ ಶಿಸ್ತನ್ನು ಅಳವಡಿಸಿಕೊಂಡರೆ ಕಠಿಣ ಶ್ರಮವಹಿಸಿ ಅಧ್ಯಯನ ಶೀಲರಾದರೆ ಜೀವನದಲ್ಲಿ ನಿಮ್ಮ ಗುರಿಯನ್ನು ಸಾಧಿಸಬಹುದು.”ಎಂದು ಹೇಳಿದರು.

ಕಾರ್ಯಕ್ರಮದ ಅಧ್ಯಕ್ಷತೆಯನ್ನು ವಹಿಸಿದ ಕಾಲೇಜಿನ ಪ್ರಾಂಶುಪಾಲರಾದ ಪ್ರಸಾದ್ ಶ್ಯಾನಭಾಗ್‍ರವರು ಮಾತನಾಡುತ್ತಾ, “ಆಧುನಿಕ ಹಾಗೂ ಸ್ಪರ್ಧಾತ್ಮಕ ಜಗತ್ತಿಗೆ ವಿದ್ಯಾರ್ಥಿಗಳನ್ನು ಅಣಿಗೊಳಿಸಲು ಶಿಕ್ಷಣದ ಜೊತೆಗೆ ಇಂತಹ ಕಾರ್ಯಾಗಾರಗಳ ಅವಶ್ಯಕತೆಯಿದೆ. ಪರೀಕ್ಷೆಯಲ್ಲಿ ಉತ್ತಮ ಅಂಕಗಳಿಸುವುದರ ಜೊತೆಗೆ ಮುಂದಿನ ದಿನಗಳಲ್ಲಿ ಉತ್ತಮ ಭವಿಷ್ಯ ರೂಪಿಸಿಕೊಳ್ಳಬೇಕು.” ಎಂದು ಹೇಳಿದರು.

ಜಾಹೀರಾತು
ಜಾಹೀರಾತು
ಜಾಹೀರಾತು

ಇದೇ ಸಂದರ್ಭದಲ್ಲಿ ಇಂಡಿಯನ್ ಇನ್ ಸ್ಟಿಟ್ಯೂಟ್ ಆಫ್ ಕಂಪೆನಿ ಸೆಕ್ರೆಟರೀಸ್ ಆಫ್ ಇಂಡಿಯಾ ಸಂಸ್ಥೆ ನಡೆಸಿದ ಸಿಎಸ್ ಎಕ್ಸೆಕ್ಯುಟಿವ್ ಪರೀಕ್ಷೆಯಲ್ಲಿ ರಾಷ್ಟ್ರಮಟ್ಟದಲ್ಲಿ 11 ನೇ ರ‍್ಯಾಂಕ್  ಗಳಿಸಿದ ನರೇಂದ್ರ ಪ.ಪೂ.ಕಾಲೇಜಿನ ಹಿರಿಯ ವಿದ್ಯಾರ್ಥಿಯಾದ ಶರತ್ ಕುಮಾರ್ ಎನ್. ಇವರನ್ನು ಸನ್ಮಾನಿಸಲಾಯಿತು.

ಜಾಹೀರಾತು
ಜಾಹೀರಾತು
ಜಾಹೀರಾತು

2018 ರಲ್ಲಿ ನಡೆದ ದ್ವಿತೀಯ ಪಿಯುಸಿ ವಾರ್ಷಿಕ ಪರೀಕ್ಷೆಯಲ್ಲಿ ವಿಜ್ಞಾನ ವಿಭಾಗದಲ್ಲಿ ರಾಜ್ಯಕ್ಕೆ ಮೂರನೇ ರ‍್ಯಾಂಕ್ ಪಡೆದ ನರೇಂದ್ರ ಪ.ಪೂ.ಕಾಲೇಜಿನ ಇನ್ನೋರ್ವ ಹಿರಿಯ ವಿದ್ಯಾರ್ಥಿನಿಯಾದ ಜಾಗೃತಿ ಜೆ. ನಾಯಕ್ ಅವರು ತಮ್ಮ ಕಲಿಕಾ ಅನುಭವಗಳನ್ನು ಹಂಚಿಕೊಂಡರು.

ವೇದಿಕೆಯಲ್ಲಿ ರಕ್ಷಕ-ಶಿಕ್ಷಕ ಸಂಘದ ಅಧ್ಯಕ್ಷರಾದ ಕೃಷ್ಣಪ್ಪ ಗೌಡ ಇವರು ಉಪಸ್ಥಿತರಿದ್ದರು. ಈ ಕಾರ್ಯಕ್ರಮದಲ್ಲಿ ವಿವೇಕಾನಂದ ಕನ್ನಡ ಮಾಧ್ಯಮ ಶಾಲೆ ತೆಂಕಿಲ, ಶ್ರೀದೇವಿ ಪ್ರೌಢ ಶಾಲೆ ದೇವಿನಗರ ಪುಣಚ, ಗಜಾನನ ಆಂಗ್ಲ ಮಾಧ್ಯಮ ಶಾಲೆ ಈಶ್ವರಮಂಗಲ, ಪ್ರಿಯದರ್ಶಿನಿ ಪ್ರೌಢ ಶಾಲೆ ಬೆಟ್ಟಂಪಾಡಿ ಶಾಲೆಗಳ ಎಸ್.ಎಸ್.ಎಲ್.ಸಿ ಯ 250ಕ್ಕೂ ಹೆಚ್ಚು ವಿದ್ಯಾರ್ಥಿಗಳು ಭಾಗವಹಿಸಿದರು.

ಕಾರ್ಯಕ್ರಮದಲ್ಲಿ ಉಪನ್ಯಾಸಕರಾದ ಶ್ರೀಮತಿ ನಾಗಶ್ರೀ ಕಾಲೇಜಿನ ವಿಶೇಷತೆಗಳ ಬಗ್ಗೆ ಮಾಹಿತಿಯನ್ನು ನೀಡಿದರು. ಶ್ರೀಮತಿ ಶಶಿಕಲಾ ಸ್ವಾಗತಿಸಿ, ಶ್ರೀಮತಿ ರೇಣುಕಾ ವಂದಿಸಿದರು. ಶ್ರೀಮತಿ ಮಧುರಾ ಕಾರ್ಯಕ್ರಮವನ್ನು ನಿರೂಪಿಸಿದರು.