ಆಪರೇಶನ್ ಗಂಗಾ ಕಾರ್ಯಾಚರಣೆ, ಪ್ರಧಾನಿ ನರೇಂದ್ರ ಮೋದಿ 5ನೇ ಉನ್ನತ ಮಟ್ಟದ ಸಭೆ ; ಉಕ್ರೇನ್‍ನಿಂದ 18 ಸಾವಿರ ಮಂದಿ ಸ್ವದೇಶಕ್ಕೆ – ಕಹಳೆ ನ್ಯೂಸ್
ನವದೆಹಲಿ: ಆಪರೇಶನ್ ಗಂಗಾ ಕಾರ್ಯಾಚರಣೆಯ ಅಂಗವಾಗಿ ಯುದ್ಧಗ್ರಸ್ಥ ಉಕ್ರೇನ್‍ನಿಂದ ಭಾರತೀಯರನ್ನು ಕರೆತರುವ ಬಗ್ಗೆ ಪ್ರಧಾನಿ ನರೇಂದ್ರ ಮೋದಿ ಶುಕ್ರವಾರ 5ನೇ ಉನ್ನತ ಮಟ್ಟದ ಸಭೆ ನಡೆಸಿದರು.
ಸಭೆಯಲ್ಲಿ ವಿದೇಶಾಂಗ ಸಚಿವ ಎಸ್ ಜೈಶಂಕರ್ ಹಾಗೂ ವಿದೇಶಾಂಗ ಕಾರ್ಯದರ್ಶಿ ಹರ್ಷವರ್ಧನ್ ಶ್ರಿಂಗ್ಲಾ ಭಾರತೀಯರ ಸ್ಥಳಾಂತರ ಕಾರ್ಯಾಚರಣೆಯ ಪ್ರಗತಿಯ ಬಗ್ಗೆ ಮಾಹಿತಿ ನೀಡಿದರು.
ಯುದ್ಧ ಪ್ರಾರಂಭವಾದಾಗಿನಿಂದ 18,000 ಕ್ಕೂ ಹೆಚ್ಚು ಭಾರತೀಯರನ್ನು ಬಿಡುಗಡೆ ಮಾಡಲಾಗಿದೆ ಎಂದು ಪ್ರಧಾನಿ ಮೋದಿಗೆ ವಿವರಿಸಿದರು. ಒಡೆಸ್ಸಾ ಹಾಗೂ ಸುಮಿ ಪ್ರದೇಶಗಳಲ್ಲಿ ಸಿಲುಕಿರುವ ಭಾರತೀಯರ ಪರಿಸ್ಥಿತಿ ಹಾಗೂ ಅವರನ್ನು ಸುರಕ್ಷಿತ ಪ್ರದೇಶಗಳಿಗೆ ಸ್ಥಳಾಂತರಿಸುವ ಮಾರ್ಗಗಗಳ ಬಗ್ಗೆ ತಿಳಿಸಿಲಾಯಿತು.
ಸಭೆಯಲ್ಲಿ ವಿದೇಶಾಂಗ ಸಚಿವ ಎಸ್ ಜೈಶಂಕರ್, ವಾಣಿಜ್ಯ ಸಚಿವ ಪಿಯೂಷ್ ಗೋಯಲ್, ರಾಷ್ಟ್ರೀಯ ಭದ್ರತಾ ಸಲಹೆಗಾರ ಅಜಿತ್ ದೋವಲ್, ಪ್ರಧಾನಿ ಪ್ರಧಾನ ಕಾರ್ಯದರ್ಶಿ ಪಿಕೆ ಮಿಶ್ರಾ, ಸಂಪುಟ ಕಾರ್ಯದರ್ಶಿ ರಾಜೀವ್ ಗೌಬಾ, ವಿದೇಶಾಂಗ ಕಾರ್ಯದರ್ಶಿ ಹರ್ಷವರ್ಧನ್ ಶ್ರಿಂಗ್ಲಾ ಹಾಗೂ ಹಿರಿಯ ಅಧಿಕಾರಿಗಳು ಉಪಸ್ಥಿತರಿದ್ದರು.
ಉಕ್ರೇನ್ ಗಡಿ ದೇಶಗಳಿಗೆ ಭಾರತದಿಂದ ನಾಲ್ಕು ಕೇಂದ್ರ ಸಚಿವರು ತೆರಳಿದ್ದು, ಇದೀಗ ಭಾರತೀಯರನ್ನು ಕರೆತರುವ ಪ್ರಕ್ರಿಯೆ ಚುರುಕುಗೊಂಡಿದೆ. ಅಧಿಕಾರಿಗಳು ಉಕ್ರೇನ್‍ನ ಉಜ್ಹೋರೋಡ್‍ಗೆ ಸಮೀಪವಿರುವ ವೈಸ್ನೆ ನೆಮೆಕೆಯಲ್ಲಿ ಹೊಸ ಚೆಕ್‍ಪಾಯಿಂಟ್ ಗುರುತಿಸಿದ್ದಾರೆ. ಭಾರತೀಯ ವಿದ್ಯಾರ್ಥಿಗಳಿಗೆ ಹಂಗೇರಿಯ ಬುಡಾಪೆಸ್ಟ್‍ಗೆ ಹೋಗುವ ಬದಲು ಸ್ಲೋವಾಕಿಯಾಗೆ ತೆರಳಲು ಸಲಹೆ ನೀಡಲಾಗಿದೆ. ಭಾರತೀಯರನ್ನು ಕರೆತರಲು ಮಾಡಲಾದ ವ್ಯವಸ್ಥೆಯನ್ನು ಪರೀಕ್ಷಿಸಲು ಕೇಂದ್ರ ಸಚಿವ ಕಿರಣ್ ರಿಜಿಜು ಖುದ್ದಾಗಿ ಸ್ಥಳಕ್ಕೆ ಭೆಟಿ ನೀಡಿದ್ದಾರೆ.