ಶ್ರೀ ರಾಮ ಹಿರಿಯ ಪ್ರಾಥಮಿಕ ಶಾಲೆಯಲ್ಲಿ ಹೆತ್ತವರ ಪಾದಪೂಜೆ ಹಾಗೂ ಕೈತುತ್ತು ಕಾರ್ಯಕ್ರಮ – ಕಹಳೆ ನ್ಯೂಸ್
ಕಲ್ಲಡ್ಕ : ಶ್ರೀರಾಮ ಹಿರಿಯ ಪ್ರಾಥಮಿಕ ಶಾಲೆಯ ವೇದವ್ಯಾಸ ಧ್ಯಾನಮಂದಿರದಲ್ಲಿ ಹೆತ್ತವರ ಪಾದಪೂಜೆ ಹಾಗೂ ಕೈತುತ್ತು ಕಾರ್ಯಕ್ರಮ ನಡೆಯಿತು. 1ನೇ ಮತ್ತು 2ನೇ ತರಗತಿಯವರ ಪೋಷಕರು ಈ ಕಾರ್ಯಕ್ರಮದಲ್ಲಿ ಭಾಗವಹಿಸಿದರು.
ಶ್ರೀರಾಮ ಪ್ರಾಥಮಿಕ ವಿಭಾಗದ ಸಂಸ್ಕøತ ಅಧ್ಯಾಪಕರದ ಅನ್ನಪೂರ್ಣ ಎನ್ ಭಟ್ “ಮಾತೃದೇವೋಭವ ಎನ್ನುವಂತೆ ತಾಯಿಯಲ್ಲಿ ದೇವರನ್ನು ಕಾಣುವುದು ನಮ್ಮ ಸಂಸ್ಕøತಿ. ಆ ತಾಯಿಯ ಪಾದಪೂಜೆ ಮಾಡುವುದು ಸರ್ವಶ್ರೇಷ್ಟ ಪೂಜೆಯಾಗಿದೆ. ಇದು ನಮ್ಮ ಶ್ರೇಷ್ಟ ಪರಂಪರೆಯಾಗಿದೆ. ಈ ಪರಂಪರೆಯನ್ನು ಉಳಿಸುವ ನಿಟ್ಟಿನಲ್ಲಿ ಈ ಕಾರ್ಯಕ್ರಮ ಹಮ್ಮಿಕೊಳ್ಳಲಾಗಿದೆ. ಉತ್ತಮ ಸಂಸ್ಕಾರಗಳನ್ನು ಬೆಳೆಸಿ, ಮಕ್ಕಳು ತಮ್ಮ ಜೀವನದಲ್ಲಿ ಅಗ್ರಸ್ಥಾನ ತಲುಪಲಿ” ಎನ್ನುತ್ತಾ ಪಾದ ಪೂಜೆಯ ಮಹತ್ವವನ್ನು ತಿಳಿಸಿದರು.
ಪಾದಪೂಜೆ ಕಾರ್ಯಕ್ರಮದಲ್ಲಿ ಮೊದಲಿಗೆ ಹೆತ್ತವರನ್ನು ಕುಳ್ಳಿರಿಸಿ, ಪರದೆಯನ್ನು ಅಡ್ಡ ಹಿಡಿಯಲಾಗಿತ್ತು. ಮಕ್ಕಳು ತಮ್ಮ ಹೆತ್ತವರ ಪಾದವನ್ನು ಗುರುತಿಸಿ ಅವರ ಮುಂದೆ ಕುಳಿತುಕೊಂಡ ನಂತರ ಪರದೆಯನ್ನು ಸರಿಸಲಾಯಿತು. ನಂತರ ಮಕ್ಕಳು ತನ್ನ ಹೆತ್ತವರ ಪಾದ ತೊಳೆದು ಅರಸಿನ ಕುಂಕುಮ ಹಚ್ಚಿ ಪಾದಗಳಿಗೆ ಹೂವಿನ ಅರ್ಚನೆ ಮಾಡಿ ನಮಸ್ಕಾರ ಮಾಡಿದರು. ಹಾಗೆಯೇ ಹೆತ್ತವರು ತಮ್ಮ ಮಕ್ಕಳಿಗೆ ಅಕ್ಷತೆ ಹಾಕಿ ಆರ್ಶೀವಾದ ಮಾಡಿ ಸಿಹಿ ತಿನಿಸಿದರು. ನಂತರ ಕೈತುತ್ತು ಕಾರ್ಯಕ್ರಮ ನಡೆಯಿತು. ಮಕ್ಕಳಿಗೆ ಕತೆ, ಹಾಡು ಹೇಳುತ್ತಾ, ಕುಶಲೋಪರಿ ವಿಚಾರಿಸುತ್ತಾ, ಕೈತುತ್ತು ನೀಡಿದರು. ತಾಯಿ ಮತ್ತು ಮಗುವಿನ ಬಾಂಧವ್ಯವನ್ನು ಹೆಚ್ಚಿಸುವ ಈ ಕಾರ್ಯಕ್ರಮದಲ್ಲಿ 1 ಮತ್ತು 2ನೇ ತರಗತಿಯ ಮಕ್ಕಳ ತಾಯಂದಿರು ಭಾಗವಹಿಸಿ, 1ನೇ ತರಗತಿಯ ಮಕ್ಕಳಿಗೆ 2ನೇ ತರಗತಿಯ ಪೋಷಕರು ಕೈತುತ್ತು ನೀಡಿದರು. ಈ ಮೂಲಕ ತಮ್ಮ ಮಗುವಿನ ಜೊತೆ ಇರುವ ಬಾಂಧವ್ಯದೊಡನೆ ಇತರ ಮಗುವಿನ ಜೊತೆ ಬಾಂಧವ್ಯ ಬೆಸೆಯಲು ಈ ಕಾರ್ಯಕ್ರಮವು ಸಾಕ್ಷಿಯಾಯಿತು.
ಕಾರ್ಯಕ್ರಮದಲ್ಲಿ ವಿದ್ಯಾರ್ಥಿಗಳು ಹಾಗೂ ಅಧ್ಯಾಪಕರು ತಾಯಿಯ ವಿಶೇಷತೆಯನ್ನು ಸಾರುವ ಹಾಡುಗಳನ್ನು ಹಾಡಿದರು ವೇದಿಕೆಯಲ್ಲಿ ಶಾಲಾ ಪೋಷಕರಾದ ಅಕ್ಷತಾ, ಕವಿತ, ಮಮತ, ಸವಿತ, ಜಯಶ್ರೀ, ಹೇಮಲತಾ ಹಾಗೂ ಮುಖ್ಯ ಶಿಕ್ಷಕರಾದ ರವಿರಾಜ್ ಕಣಂತೂರು ಉಪಸ್ಥಿತರಿದ್ದರು. ಕಾರ್ಯಕ್ರಮವನ್ನು ಅಧ್ಯಾಪಕರಾದ ರೂಪಕಲಾ ಸ್ವಾಗತಿಸಿ, ಸವಿತಾ ನಿರೂಪಿಸಿದರು.