ಬೆಂಗಳೂರು: ಹಿಜಬ್ ವಿವಾದಕ್ಕೆ ಸಂಬಂಧಿಸಿದಂತೆ ನ್ಯಾಯಾಲಯವು ರಾಜಕೀಯ ಪ್ರೇರಿತವಾದ ಅಸಾಂವಿಧಾನಿಕ ತೀರ್ಪನ್ನು ನೀಡಿದೆ ಎಂದು ಸೋಷಿಯಲ್ ಡೆಮಾಕ್ರಟಿಕ್ ಪಾರ್ಟಿ ಆಫ್ ಇಂಡಿಯಾ (ಎಸ್‌ಡಿಪಿಐ) ಅಸಮಾಧಾನ ವ್ಯಕ್ತಪಡಿಸಿದೆ.
ದೇಶದ ಪ್ರಜೆಗಳಿಗಿರುವ ಆಯ್ಕೆಯ ಹಕ್ಕು, ಸಾಂವಿಧಾನಿಕವಾಗಿರುವ ವೈಯಕ್ತಿಕ ಹಕ್ಕು ಮತ್ತು ಮೂಲಭೂತ ಹಕ್ಕನ್ನು ಕಡೆಗಣಿಸಿ ವ್ಯಕ್ತಿ ಸ್ವಾತಂತ್ರ್ಯವನ್ನು ಎತ್ತಿ ಹಿಡಿಯುವಲ್ಲಿ ನ್ಯಾಯಾಲಯವು ವಿಫಲವಾಗಿದೆ ಎಂಬುದು ಕರ್ನಾಟಕ ಹೈಕೋರ್ಟ್ ಹಿಜಬ್ ಕುರಿತು ನೀಡಿದ ತೀರ್ಪಿನಲ್ಲಿ ರುಜುವಾತಾಗಿದೆ ಎಂದು ಅಭಿಪ್ರಾಯಪಟ್ಟಿದೆ.
ಬಿಜೆಪಿ ಸರ್ಕಾರ ಮುಸ್ಲಿಂ ಅಸ್ತಿತ್ವವನ್ನು ಅಪರಾಧಿಯಂತೆ ಬಿಂಬಿಸುತ್ತಿದೆ. ಆ ಮೂಲಕ ಸಮಾಜದೊಳಗೆ ಸಮಸ್ಯೆಯನ್ನು ಹುಟ್ಟುಹಾಕಿ, ಸಮಾಜದಲ್ಲಿ ಅಶಾಂತಿ ಸೃಷ್ಟಿಸುತ್ತಿದೆ. ಸಂತ್ರಸ್ತರು ನ್ಯಾಯದ ನಿರೀಕ್ಷೆಯಲ್ಲಿ ನ್ಯಾಯಾಲಯದ ಮೊರೆ ಹೋದಾಗ, ನ್ಯಾಯಾಲಯವೂ ರಾಜಕೀಯ ಪ್ರೇರಿತವಾದ ಅಸಂವಿಧಾನಿಕ ತೀರ್ಪನ್ನು ನೀಡಿದೆ. ಇದು ನ್ಯಾಯ ವ್ಯವಸ್ಥೆಯ ಮೇಲಿರುವ ಅಲ್ಪಸಂಖ್ಯಾತರ ನಂಬಿಕೆಯನ್ನು ನಿರಾಶೆಗೊಳಿಸಿದೆ ಎಂದು ಬೇಸರ ವ್ಯಕ್ತಪಡಿಸಿದೆ.
ಹಿಜಬ್ ಒಂದು ಸಾಂವಿಧಾನಿಕವಾಗಿರುವ ವೈಯಕ್ತಿಕ ಮತ್ತು ಮೂಲಭೂತ ಹಕ್ಕುಗಳಿಂದ ಕೂಡಿದ ಆಯ್ಕೆಯ ಹಕ್ಕು. ಈ ಹಕ್ಕನ್ನು ನ್ಯಾಯಾಲಯವೇ ಕಸಿಯುತ್ತಿರುವುದು ವಿಷಾದನೀಯ. ಅಗತ್ಯ ಧಾರ್ಮಿಕ ಆಚರಣೆಯ ವಿಚಾರಗಳಲ್ಲಿ ಅಂದರೆ ಶಬರಿ ಮಲೆಗೆ ಮಹಿಳಾ ಪ್ರವೇಶ, ಮುಸ್ಲಿಂ ಹೆಣ್ಣು ಮಕ್ಕಳ ಮಸೀದಿ ಪ್ರವೇಶ, ಪಾರ್ಸಿ ಹೆಣ್ಮಕ್ಕಳ ಅಂತರ್ಜಾತಿ ವಿಚಾರಗಳಲ್ಲಿ ಸುಪ್ರೀಂ ಕೋರ್ಟ್ ಎಷ್ಟರವರೆಗೆ ಮಧ್ಯ ಪ್ರವೇಶ ಮಾಡಬೇಕು? ಆಯಾ ಧರ್ಮದ ಧಾರ್ಮಿಕ ನಂಬಿಕೆಗಳನ್ನು ಎತ್ತಿ ಹಿಡಿಯಬೇಕಾ ಎಂಬ ವಿಚಾರದಲ್ಲಿ ಒಂದು ಅಂತಿಮ ತೀರ್ಮಾನ ಕೈಗೊಳ್ಳಲು ಬಾಕಿ ಇರುವಾಗಲೇ, ಕರ್ನಾಟಕ ಹೈಕೋರ್ಟ್ ಹಿಜಬ್ ಅಗತ್ಯ ಧಾರ್ಮಿಕ ಆಚರಣೆಯ ಭಾಗವಲ್ಲಾ ಎಂದಿರುವುದು ಸಾಂವಿಧಾನಿಕ ಹಕ್ಕುಗಳ ಮೇಲಿನ ದಾಳಿಯಾಗಿದೆ ಎಂದು ಹೇಳಿದೆ.
2021-22ರ ಸರ್ಕಾರದ ದಾಖಲಾತಿ ನಿಯಮಗಳ ಪ್ರಕಾರ ಪದವಿಪೂರ್ವ ಕಾಲೇಜುಗಳಲ್ಲಿ ಸಮವಸ್ತ್ರ ಕಡ್ಡಾಯವಲ್ಲ. ಯಾರಾದರೂ ಅದನ್ನು ಉಲ್ಲಂಘಿಸಿದರೆ ಸರ್ಕಾರ ಕ್ರಮ ಕೈಗೊಳ್ಳುತ್ತದೆ ಎಂದು ಆದೇಶ ಇದ್ದರೂ, ಏಕಾಏಕಿ ವಿವಾದವೆಬ್ಬಿಸಿ ತಕ್ಷಣದಲ್ಲೇ ಹೊಸ ಆದೇಶ ಹೊರಡಿಸಿದ್ದನ್ನು ಹೈಕೋರ್ಟ್ ಎತ್ತಿ ಹಿಡಿದಿರುವುದು ರಾಜಕೀಯ ಪ್ರೇರಿತ ಆದೇಶ ಎಂಬ ಸಂಶಯಕ್ಕೆ ಹೆಚ್ಚು ಪುಷ್ಠಿಯನ್ನು ನೀಡಿದಂತಾಗಿದೆ ಎಂದು ತಿಳಿಸಿದೆ.