” ರೇಪ್ ಮಾಡಿ ನನ್ನ ಸ್ನೇಹಿತನ ಪತ್ನಿಯನ್ನೇ ತುಂಡು ತುಂಡು ಕತ್ತರಿಸಿ ರಸ್ತೆಗೆ ಎಸೆದಿದ್ರು – ದಿ ಕಾಶ್ಮೀರ್ ಫೈಲ್ಸ್ ಸಿನಿಮಾ ಕೇವಲ ಡೆಮೋ ತೋರಿಸಿದೆ, ಕಾಶ್ಮೀರಿ ಪಂಡಿತರ ಮೇಲಾಗಿದ್ದ ದೌರ್ಜನ್ಯ ಊಹೆಗೂ ಮೀರಿದಷ್ಟು ಕ್ರೂರ ” ಕಾಶ್ಮೀರದ ಕರಾಳ ಕಥೆಯನ್ನು ಬಿಚ್ಚಿಟ್ಟ ಬೆಲಾ ಝೂಷಿ – ಕಹಳೆ ನ್ಯೂಸ್
ಬೆಂಗಳೂರು: ಇತ್ತೀಚೆಗೆ ಬಿಡುಗಡೆಯಾದ ಸಿನಿಮಾ ದಿ ಕಾಶ್ಮೀರ್ ಫೈಲ್ಸ್ ಕಾಶ್ಮೀರದಿಂದ ದಕ್ಷಿಣಕ್ಕೆ ಮಹಾ ವಲಸೆ ಬಂದ ಕಾಶ್ಮೀರಿ ಪಂಡಿತರ ಕಥೆ ಹೇಳುತ್ತದೆ. ಸಿನಿಮಾದಲ್ಲಿರುವ ಕಥೆ ಪ್ರತಿಯೊಬ್ಬರ ರಕ್ತ ಕುದಿಯುವಂತೆ ಮಾಡುತ್ತದೆ. ಇದೀಗ ಕಾಶ್ಮೀರದಿಂದ ವಲಸೆ ಬಂದಿದ್ದ ಮಹಿಳೆಯೊಬ್ಬರು ತಮ್ಮ ಜೀವನದಲ್ಲಿ ನಡೆದ ಕರಾಳ ಘಟನೆ ಹಾಗೂ ನೆನಪನ್ನು ಎಳೆ ಎಳೆಯಾಗಿ ಬಿಚ್ಚಿಟ್ಟಿದ್ದಾರೆ.
ಕಾಶ್ಮೀರದಿಂದ ವಲಸೆ ಬಂದಿದ್ದ ಮಹಿಳೆ ಬೆಲಾ ಝೂಷಿ ದಿ ಕಾಶ್ಮೀರ್ ಫೈಲ್ಸ್ ಸಿನಿಮಾ ಕೇವಲ ಡೆಮೋ ತೋರಿಸಿದೆ. ಕಾಶ್ಮೀರಿ ಪಂಡಿತರ ಮೇಲಾಗಿದ್ದ ದೌರ್ಜನ್ಯ ಊಹೆಗೂ ಮೀರಿದಷ್ಟು ಕ್ರೂರವಾಗಿತ್ತು ಎಂದು ವಿವರಿಸಿದರು.
ಆ ಕಾಲದಲ್ಲಿ ಕಾಶ್ಮೀರಿ ಪಂಡಿತರನ್ನು ಓಡಿಸಲು ಭಯಾನಕವಾಗಿ ಚಿತ್ರ ಹಿಂಸೆ ನೀಡುತ್ತಿದ್ದರು. ಅವಮಾನ, ಹಿಂಸೆ, ಮಹಿಳೆಯರ ಮೇಲೆ ದೌರ್ಜನ್ಯ, ಅತ್ಯಾಚಾರ, ಕೊಲೆ, ಬೆದರಿಕೆ ಹೀಗೆ ಅಂದಿನ ದಿನಗಳು ಅತ್ಯಂತ ಕ್ರೂರವಾಗಿತ್ತು ಎಂದು ತಮ್ಮ ನೆನಪನ್ನು ತಿಳಿಸಿದರು.
ನನ್ನ ಸ್ನೇಹಿತನ ಪತ್ನಿ ಗಿರಿಜಾ ಎಂಬ ಮಹಿಳೆಯ ನಿಜ ಕಥೆಯನ್ನು ಸಿನಿಮಾದಲ್ಲಿ ತೋರಿಸಲಾಗಿದೆ. ಆಕೆಯ ಮೇಲೆ ಅತ್ಯಾಚಾರ ಮಾಡಿ, ಮರವನ್ನು ಕತ್ತರಿಸುವ ಯಂತ್ರದಲ್ಲಿ ಹಾಕಿ ದೇಹವನ್ನು ತುಂಡು ತುಂಡು ಮಾಡಿ ರಸ್ತೆಯಲ್ಲಿ ಎಸೆದಿರುವ ಘಟನೆ ನಿಜವಾಗಿಯೂ ನಡೆದಿದೆ ಎಂದು ಭಯಾನಕ ವಿಚಾರವನ್ನು ತಿಳಿಸಿದರು.
ಜನರು ಮಾತು ಎತ್ತಿದರೂ ಅವರನ್ನು ಶೂಟ್ ಮಾಡಿ ಕೊಲ್ಲಲಾಗುತ್ತಿತ್ತು. ಭಯೋತ್ಪಾದಕರ ಗುರಿ ಕಾಶ್ಮೀರಿ ಪಂಡಿತ ಕುಟುಂಬದ ಗಂಡಸರನ್ನು ಓಡಿಸುವುದೇ ಆಗಿತ್ತು. ಕುಟುಂಬದ ಆಧಾರವಾಗಿರುವ ಗಂಡಸರನ್ನು ಓಡಿಸಿ ಅಥವಾ ಕೊಲೆ ಮಾಡಿ ಮಹಿಳೆ, ಮಕ್ಕಳನ್ನು ಅನಾಥರನ್ನಾಗಿ ಮಾಡಿ ಅವರ ಮೇಲೆ ಅತ್ಯಾಚಾರ ಮಾಡುತ್ತಿದ್ದರು.
ಮಹಿಳೆಯರಿಗೆ ಅತ್ಯಾಚಾರ ಮಾಡಿದ್ದಲ್ಲದೇ ಅದೆಷ್ಟೋ ಮಕ್ಕಳ ತಲೆಗೆ ಶೂಟ್ ಮಾಡಿ ಕೊಂದಿದ್ದಾರೆ. 70 ಸಾವಿರಕ್ಕೂ ಹೆಚ್ಚು ಜನರನ್ನು ರಾತ್ರೋರಾತ್ರಿ ಕಾಶ್ಮೀರದಿಂದ ಓಡಿಸಿದ್ದಾರೆ. ಅಲ್ಲಿ ಕಾಶ್ಮೀರಿ ಪಂಡಿತರು ಬದುಕಬೇಕೆಂದಿದ್ದರೆ ಮತಾಂತರವಾಗಬೇಕು ಎಂಬ ಆಯ್ಕೆ ನೀಡಿದ್ದರು. ಇದು ಬಿಟ್ಟು ಒಂದೋ ಸಾಯುವುದು ಇಲ್ಲವೇ ಕಾಶ್ಮೀರ ಬಿಟ್ಟು ಓಡಿಹೋಗುವುದು ಎಂಬ ಆಯ್ಕೆ ನೀಡಿದ್ದರು. ನಮ್ಮನ್ನು ಕಾಪಾಡಲು ಆ ಸಮಯದಲ್ಲಿ ಯಾರೂ ಇರಲಿಲ್ಲ. ಪೊಲೀಸರು, ಅಧಿಕಾರಿಗಳು ಎಲ್ಲರೂ ಕೈ ಚೆಲ್ಲಿ ಕೂತಿದ್ದರು. ಕೇವಲ ಭಯೋತ್ಪಾದಕರ ಅಟ್ಟಹಾಸ ಮಾತ್ರ ನಡಿಯುತ್ತಿತ್ತು. ಭಾರತೀಯ ನಾಯಿಗಳು ಕಾಶ್ಮೀರ ಬಿಟ್ಟು ತೊಲಗಿ ಎಂದು ಮಕ್ಕಳಿಗೂ ಹೇಳಿಕೊಡುತ್ತಿದ್ದರು.
ಇದೀಗ ಕಾಶ್ಮೀರದಿಂದ ವಲಸೆ ಬಂದಿರುವ ಪಂಡಿತ ಕುಟುಂಬ ಸಂಖ್ಯೆಯಲ್ಲಿ ಕಡಿಮೆಯಿದ್ದರೂ ಇಡೀ ದೇಶದಲ್ಲಿ ಹರಡಿದ್ದಾರೆ. ಕರ್ನಾಟಕದಲ್ಲಿ ವಲಸೆ ಬಂದಿರುವ ಸುಮಾರು 500 ಕುಟುಂಬಗಳಿವೆ. ದೆಹಲಿಯಲ್ಲಿ ಸಾವಿರ ಕುಟುಂಬಗಳಿವೆ. ಜಮ್ಮುವಿನಲ್ಲಿ 2 ಸಾವಿರ ಕುಟುಂಬಗಳಿವೆ ಎಂದು ತಿಳಿಸಿದರು.
ನಮ್ಮ ಎಲ್ಲಾ ಧಾರ್ಮಿಕ ಆಚರಣೆಗಳು ಕಾಶ್ಮೀರದಲ್ಲೇ ನಡಿಯುತ್ತಿದ್ದವು. ಆದರೆ ನಾವು ಇಲ್ಲಿ ಬಂದ ಬಳಿಕ ಅದೆಲ್ಲವನ್ನೂ ಉಗ್ರರು ಸುಟ್ಟು ಸರ್ವನಾಶ ಮಾಡಿದ್ದಾರೆ. ನಮಗೆ ನಾವು ಹುಟ್ಟಿರುವ ಕಾಶ್ಮೀರಕ್ಕೆ ಹೋಗಲು ಇಂದಿಗೂ ಆಸೆ ಇದೆ. ಆದರೆ ಅಲ್ಲಿಯವರು ಎಲ್ಲಿ ನಮ್ಮನ್ನು ಸಾಯಿಸಿ ಬಿಡುತ್ತಾರೆ ಎನ್ನುವ ಭಯ ಇದೆ. ಸದ್ಯ ನನ್ನ ಕುಟುಂಬದಲ್ಲಿ ಹಿರಿಯರು ಹಾಗೂ ಹೆಚ್ಚಿನವರು ವಿದ್ಯಾವಂತರು ಇದ್ದರು. ಹೀಗಾಗಿ ನಾವು ಎಲ್ಲಿ ಬೇಕಾದರೂ ಹೋಗಿ ಬದುಕಲು ಸಾಧ್ಯವಾಯಿತು. ಇಲ್ಲವೆಂದರೆ ನಾವೂ ಅವರಂತೆ ಅಲ್ಲಿ ಸಾಯಬೇಕಿತ್ತು. ಇಲ್ಲವೇ ಬೇರೆಡೆಗೆ ವಲಸೆ ಹೋಗಿ ಭಿಕ್ಷೆ ಬೇಡಬೇಕಿತ್ತು ಎಂದರು.
ಅಲ್ಲಿಂದ ಮಹಾವಲಸೆ ಕೈಗೊಂಡಿದ್ದ ಅದೆಷ್ಟೋ ಜನರಿಗೆ ಸರಿಯಾಗಿ ಊಟ, ವಸತಿ ಸಿಕ್ಕಿರಲಿಲ್ಲ. ಎಲ್ಲರೂ ಟೆಂಟ್ ಹಾಕಿಕೊಂಡು ಕಷ್ಟದ ದಿನಗಳನ್ನು ಕಳೆದಿದ್ದಾರೆ. ಸಿನಿಮಾದಲ್ಲಿ ಎಲ್ಲವನ್ನೂ ನಿಜವೇ ತೋರಿಸಿದ್ದಾರೆ ಆದರೆ ಅಲ್ಲಿನ ಕ್ರೌರ್ಯ ಇದಕ್ಕಿಂತಲೂ ಭಯಾನಕವಾಗಿತ್ತು.