ಶಿಕ್ಷಣಕ್ಕಿಂತ ಧರ್ಮವೇ ಮುಖ್ಯ : ಉಪ್ಪಿನಂಗಡಿಯಲ್ಲಿ ಪರೀಕ್ಷೆ ನಿರಾಕರಿಸಿ ಕಾಲೇಜಿನಿಂದ ಹೊರನಡೆದ ಮುಸ್ಲಿಂ ವಿದ್ಯಾರ್ಥಿಗಳು – ಕಹಳೆ ನ್ಯೂಸ್
ಮಂಗಳೂರು: ಹಿಜಾಬ್ ವಿವಾದಕ್ಕೆ ಸಂಬಂಧಪಟ್ಟಂತೆ ಕರ್ನಾಟಕ ಹೈಕೋರ್ಟ್ ಸಂವಿದಾನ ಬಂಧವಾಗಿ ತೀರ್ಪು ಪ್ರಕಟಿಸಿದೆ. ಆದರೆ ಮುಸ್ಲಿಂ ವಿದ್ಯಾರ್ಥಿಗಳು ಮಾತ್ರ ಕೋರ್ಟ್ ತೀರ್ಪಿಗೆ ಸ್ವಲ್ಪವೂ ಬೆಲೆ ಕೊಡದೆ ಪಿಯು ಪೂರ್ವ ಸಿದ್ದತಾ ಪರೀಕ್ಷೆಯನ್ನೇ ನಿರಾಕರಿಸಿದ್ದಾರೆ.
ಉಪ್ಪಿನಂಗಡಿಯ ಸರ್ಕಾರಿ ಪದವಿ ಪೂರ್ವ ಕಾಲೇಜಿನ ಕೆಲ ವಿದ್ಯಾರ್ಥಿಗಳು ಶುಕ್ರವಾರ ಹಿಜಾಬ್ ಧರಿಸಿಕೊಂಡು ತರಗತಿಯೊಳಗೆ ಪ್ರವೇಶಿಸಲು ಮುಂದಾಗಿದ್ದು, ಹಿಜಾಬ್ ಕುರಿತಾದ ರಾಜ್ಯ ಉಚ್ಛ ನ್ಯಾಯಾಲಯದ ತೀರ್ಪಿನ ಹಿನ್ನೆಲೆ ಉಪನ್ಯಾಸಕರು ಅದಕ್ಕೆ ಅವಕಾಶ ಕೊಡಲಿಲ್ಲ. ಅದನ್ನು ವಿರೋಧಿಸಿದ ಹಿಜಾಬ್ ಧರಿಸಿದ ವಿದ್ಯಾರ್ಥಿನಿಯರು, ಕಾಲೇಜಿನ ಆವರಣದಲ್ಲಿ ನಿಂತುಕೊಂಡು ಪ್ರತಿಭಟಿಸಿದರು. ಇವರಿಗೆ ಬೆಂಬಲವಾಗಿ ತರಗತಿಯೊಳಗಿದ್ದ ಕೆಲ ವಿದ್ಯಾರ್ಥಿಗಳೂ ತರಗತಿ ಬಹಿಷ್ಕರಿಸಿ ಇವರೊಂದಿಗೆ ಸೇರಿಕೊಂಡರು.
“ಹಿಜಾಬ್ ತೆಗೆದು ತರಗತಿಯೊಳಗೆ ಬನ್ನಿ.. ಪರೀಕ್ಷೆ ಇದ್ದವರು ಹಿಜಾಬ್ ತೆಗೆದು ಬಂದು ಪರೀಕ್ಷೆ ಬರೆಯಿರಿ” ಎಂದು ಉಪನ್ಯಾಸಕರು ವಿದ್ಯಾರ್ಥಿಗಳ ಮನವೊಲಿಕೆಗೆ ಪ್ರಯತ್ನಿಸಿದರೂ, ಅವರು ತಮ್ಮ ನಿರ್ಧಾರದಿಂದ ಹಿಂದೆ ಸರಿಯದೇ ಅಲ್ಲೇ ನಿಂತಿದ್ದರು.
ಬಳಿಕ ಸ್ಥಳೀಯ ಕೆಲ ಪ್ರಮುಖರು ಕಾಲೇಜಿಗೆ ಆಗಮಿಸಿ, ಪ್ರಾಂಶುಪಾಲರೊಂದಿಗೆ ಸಭೆ ನಡೆಸಿದ್ದು, ಈ ಸಂದರ್ಭದಲ್ಲಿ “ಹೈಕೋರ್ಟ್ ತೀರ್ಪು ಹಾಗೂ ಕಾಲೇಜು ಅಭಿವೃದ್ಧಿ ಸಮಿತಿಯ ತೀರ್ಮಾನದಂತೆ ಯಾವುದೇ ಕಾರಣಕ್ಕೂ ಹಿಜಾಬ್ ಧರಿಸಿಕೊಂಡವರಿಗೆ ತರಗತಿ ಪ್ರವೇಶಕ್ಕೆ ಅವಕಾಶ ನೀಡಲು ಸಾಧ್ಯವಿಲ್ಲ”, ಎಂದು ಪ್ರಾಂಶುಪಾಲರು ತಿಳಿಸಿದರು.