ಭಗವದ್ಗೀತೆಯನ್ನು ಪಠ್ಯಪುಸ್ತಕದಲ್ಲಿ ಸೇರಿಸಲು ಸಿಎಂಗೆ ಒತ್ತಾಯಿಸುವೆ ; ಮಾಜಿ ಮುಖ್ಯಮಂತ್ರಿ ಬಿ.ಎಸ್. ಯಡಿಯೂರಪ್ಪ – ಕಹಳೆ ನ್ಯೂಸ್
ಬೆಂಗಳೂರು: ಭಗವದ್ಗೀತೆಯನ್ನು ಪಠ್ಯಪುಸ್ತಕದಲ್ಲಿ ಸೇರಿಸಲು ಕ್ರಮಕೈಗೊಳ್ಳಿ ಎಂದು ಮುಖ್ಯಮಂತ್ರಿ ಅವರಿಗೆ ಒತ್ತಾಯ ಮಾಡುವೆ ಎಂದು ಮಾಜಿ ಮುಖ್ಯಮಂತ್ರಿ ಬಿ.ಎಸ್. ಯಡಿಯೂರಪ್ಪ ತಿಳಿಸಿದರು.
ನೆಲಮಂಗಲದಲ್ಲಿ ಅವೇರಹಳ್ಳಿಯಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಚಿಕ್ಕ ವಯಸ್ಸಿನಲ್ಲೇ ಭಗವದ್ಗೀತೆಯಲ್ಲಿ ಬರುವ ಎಲ್ಲಾ ವಿಚಾರವನ್ನು ಮಕ್ಕಳು ತಮ್ಮ ಜೀವನದಲ್ಲಿ ಅಳವಡಿಸಿಕೊಳ್ಳಬೇಕು. ಹೀಗಾಗಿ ಗುಜರಾತ್ ರಾಜ್ಯದಲ್ಲಿ ಭಗವದ್ಗೀತೆಯನ್ನು ಪಠ್ಯದಲ್ಲಿ ಅಳವಡಿಸಲು ಜಾರಿಗೆ ತಂದಿದ್ದಾರೆ. ಕೆಲವೇ ದಿನಗಳಲ್ಲಿ ಮುಖ್ಯಮಂತ್ರಿ ಅವರ ಜೊತೆ ತೀರ್ಮಾನ ಮಾಡಿ ಕರ್ನಾಟಕದಲ್ಲೂ ಭಗವದ್ಗೀತೆಯನ್ನು ಪಠ್ಯ ಪುಸ್ತಕ ಸೇರಿಸಲು ವಿನಂತಿ ಮಾಡುವೆ ಎಂದು ಹೇಳಿದರು.
ಪ್ರತಿಪಕ್ಷ ವಿರೋಧ ಹಿನ್ನೆಲೆ ವಿಚಾರವಾಗಿ ಪ್ರತಿಕ್ರಿಯಿಸಿದ ಅವರು, ಭಗವದ್ಗೀತೆ ಧರ್ಮ, ಸಂಸ್ಕೃತಿ, ಪರಂಪರೆ, ಆಚಾರ-ವಿಚಾರ ತಿಳಿಸುತ್ತೆ. ಇದರ ಬಗ್ಗೆ ಟೀಕೆ- ಟಿಪ್ಪಣಿ ಮಾಡಿದರೆ ಹೇಗೆ ಎಂದು ಪ್ರಶ್ನಿಸಿದ ಅವರು, ಅನೇಕ ಕಾಂಗ್ರೆಸ್ ಮುಖಂಡರು ಸ್ವಾಗತ ಮಾಡಿದ್ದಾರೆ. ವಿರೋಧ ಮಾಡುವವರಿಗೆ ದಯಮಾಡಿ ಒಳ್ಳೆಯ ಕೆಲಸಕ್ಕೆ ಅವಕಾಶ ಮಾಡಿ ಎಂದು ವಿನಂತಿ ಮಾಡುವೆ ಎಂದರು.
ರಾಜ್ಯ ಪ್ರವಾಸ ವಿಚಾರವಾಗಿ ಮಾತನಾಡಿದ ಅವರು, ಅಧಿವೇಶನ ಮುಗಿದ ನಂತರ ರಾಜ್ಯದ ಎಲ್ಲಾ ಜಿಲ್ಲೆಗಳಲ್ಲೂ ಪ್ರವಾಸ ಮಾಡುತ್ತೇನೆ. ಮುಂದಿನ ವಿಧಾನಸಭಾ ಚುನಾವಣೆಯಲ್ಲಿ ಬಿಜೆಪಿ 160 ಕ್ಷೇತ್ರ ಗೆಲ್ಲಲು ಕಾರ್ಯಕ್ರಮ ರೂಪಿಸಲಾಗಿದೆ ಎಂದ ಅವರು, ಸಂಪುಟ ಪುನರ್ ರಚನೆ ವಿಚಾರ ಮುಖ್ಯಮಂತ್ರಿಗೆ ಬಿಟ್ಟಿದ್ದು, ಅದರ ಬಗ್ಗೆ ನಾನು ಚರ್ಚೆ ಮಾಡಲ್ಲ ಎಂದು ತಿಳಿಸಿದರು.