ಹಿಜಾಬ್ ಧರಿಸದೆ ತರಗತಿಗೆ ಹಾಜರಾಗಲು ಒಪ್ಪಿದ ಉಪ್ಪಿನಂಗಡಿ ಪಿಯು ಕಾಲೇಜಿನ ಮುಸಲ್ಮಾನ ವಿದ್ಯಾರ್ಥಿನಿಯರು – ಕಹಳೆ ನ್ಯೂಸ್
ಉಪ್ಪಿನಂಗಡಿ, ಮಾ 21 : ಹಿಜಾಬ್ ಧರಿಸಿಯೇ ತರಗತಿಗೆ ಹಾಜರಾಗುತ್ತೇನೆ ಎಂಬ ನಿಲುವಿಗೆ ಅಂಟಿಕೊಂಡಿದ್ದ ಉಪ್ಪಿನಂಗಡಿಯ ಸರಕಾರಿ ಪಿಯು ಕಾಲೇಜಿನ ದ್ವಿತೀಯ ಪಿಯುಸಿ ವಿದ್ಯಾರ್ಥಿನಿಯರು ಇದೀಗ ಕಾಲೇಜಿನ ಸಮವಸ್ತ್ರ ನಿಯಮಾವಳಿಗಳನ್ನು ಪಾಲಿಸಿ ಇಂದಿನಿಂದಲೇ ತರಗತಿಗಳಿಗೆ ಹಾಜರಾಗಲು ಒಪ್ಪಿಗೆ ಸೂಚಿಸಿದ್ದಾರೆ ಎಂದು ತಿಳಿದುಬಂದಿದೆ.
ಹೈಕೋರ್ಟ್‌ನ ಆದೇಶಕ್ಕೆ ಅನುಗುಣವಾಗಿ ವಿದ್ಯಾರ್ಥಿಗಳು ಹಿಜಾಬ್ ಧರಿಸಿ ತರಗತಿಗೆ ಹಾಜರಾಗಬಾರದೆಂದು ಕಾಲೇಜು ಆಡಳಿತದ ತಿಳಿಸಿದ್ದು, ಇದಕ್ಕೆ ವಿದ್ಯಾರ್ಥಿಗಳು ವಿರೋಧಿಸಿ ತರಗತಿ ಮತ್ತು ಪರೀಕ್ಷೆಗಳನ್ನು ಬಹಿಷ್ಕರಿಸಿದ್ದರು. ಇತ್ತ ಪ್ರತಿಭಟನಾ ನಿರತ ವಿದ್ಯಾರ್ಥಿಗಳ ಪರ ಮಾತುಕತೆ ನಡೆಸಿದ ಮುಖಂಡರಿಗೆ ಕಾಲೇಜಿನ ಆಡಳಿತ ಮಂಡಳಿಯು ನಾವು ನ್ಯಾಯಾಲಯದ ತೀರ್ಪನ್ನು ಉಲ್ಲಂಘಿಸುವುದಿಲ್ಲ ಎಂದು ಸ್ಪಷ್ಟಪಡಿಸಿತ್ತು.
ಇನ್ನು ಈ ಹಿನ್ನಲೆಯಲ್ಲಿ ಪ್ರತಿಭಟನಾ ನಿರತ ವಿದ್ಯಾರ್ಥಿಗಳೊಂದಿಗೆ ಮುಖಂಡರು ಮಾತುಕತೆ ನಡೆಸಿ ವಿದ್ಯಾರ್ಥಿಗಳ ಭವಿಷ್ಯಕ್ಕೆ ತೊಂದರೆಯಾಗಬಾರದು ಎಂದು ಇಂದಿನಿಂದ ಕಾಲೇಜಿನ ಸಮವಸ್ತ್ರ ನಿಯಮಾವಳಿಗಳನ್ನು ಪಾಲಿಸಿ ತರಗತಿಗಳಿಗೆ ಹಾಜರಾಗುವ ನಿರ್ಧಾರಕ್ಕೆ ಬಂದಿರುವ ಮಾಹಿತಿ ಬಂದಿದೆ ಎಂದು ಕಾಲೇಜಿನ ಆಡಳಿತ ಸಮಿತಿ ಕಾರ್ಯಧ್ಯಕ್ಷ ಸುರೇಶ್ ಅತ್ರಮಜಲು ತಿಳಿಸಿದ್ದಾರೆ.