Wednesday, November 27, 2024
ದಕ್ಷಿಣ ಕನ್ನಡಸುದ್ದಿ

ಅಶ್ಲೀಲ ಪತ್ರ ಹಾಗೂ ಪೋಸ್ಟರ್‌ ಹಂಚುವ ಮೂಲಕ ಮಹಿಳಾ ಪ್ರಾಧ್ಯಾಪಕಿಯ ತೇಜೊವಧೆ ; ದ.ಕ. ಜಿಲ್ಲೆಯ ಪ್ರತಿಷ್ಠಿತ ಕಾಲೇಜಿನ ಸಂಚಾಲಕ ಹಾಗೂ ಇಬ್ಬರು ಪ್ರಾಧ್ಯಾಪಕರ ಬಂಧನ-ಕಹಳೆ ನ್ಯೂಸ್

ಮಂಗಳೂರು: ಎ 20 : ಕಾಲೇಜಿನ ಪ್ರಾಧ್ಯಾಪಕಿಯೋರ್ವರ ಬಗ್ಗೆ ಕೀಳು ಮಟ್ಟದ ಭಾಷೆಯಲ್ಲಿ , ಮಾನಹಾನಿಕರವಾಗಿ ಪತ್ರ ಹಾಗೂ ಪೋಸ್ಟರ್ ಗಳನ್ನು ಬರೆದು ಹಂಚುತ್ತಿದ್ದ ಹಾಗೂ ಸಾರ್ವಜನಿಕ ಸ್ಥಳದಲ್ಲಿ ಅವುಗಳನ್ನು ಅಂಟಿಸಿ ಕಿರುಕುಳ ನೀಡುತ್ತಿದ್ದ ಪ್ರಕರಣಕ್ಕೆ ಸಂಬಂಧಿಸಿದಂತೆ ದ.ಕ. ಜಿಲ್ಲೆಯ ಪ್ರತಿಷ್ಠಿತ ಕಾಲೇಜಿನ ಸಂಚಾಲಕ ಹಾಗೂ ಇಬ್ಬರು ಪ್ರಾಧ್ಯಾಪಕರನ್ನು ಮಂಗಳೂರು ನಗರ ಪೊಲೀಸರು ದಸ್ತಗಿರಿ ಮಾಡಿದ್ದಾರೆ.

ಬೆಳ್ತಂಗಡಿ ತಾಲೂಕಿನ ಲಾಯಿಲ ಮನೆ ನಿವಾಸಿ ಪ್ರಕಾಶ್ ಶೆಣೈ (44), ಬಂಟ್ವಾಳ ತಾಲೂಕು ಸಿದ್ದಕಟ್ಟೆ ನಿವಾಸಿ ಮೇಗಿನ ಉಳಿರೋಡಿ ನಿವಾಸಿ ಪ್ರದೀಪ್ ಪೂಜಾರಿ (36) ಹಾಗೂ ಉಡುಪಿ ಜಿಲ್ಲೆಯ ಹೆಬ್ರಿ ತಾಲೂಕು,ಸೀತಾನದಿ ನಡ್ಪಾಲು ಮನೆಯ ತಾರಾನಾಥ ಬಿ ಎಸ್ ಶೆಟ್ಟಿ (32) ಬಂಧಿತ ಆರೋಪಿಗಳು.
ದಕ್ಷಿಣ ಕನ್ನಡ ಜಿಲ್ಲೆಯ ಬಂಟ್ವಾಳದ ಪ್ರತಿಷ್ಠಿತ ಕಾಲೇಜ್ ವೊಂದರ ಆಡಳಿತ ಮಂಡಳಿ ಹಾಗೂ ಶಿಕ್ಷಕ ವೃಂದ ನಡುವೆ ಪ್ರಾದ್ಯಾಪಕರ ನೇಮಕಾತಿ ಹಾಗೂ ಆಡಳಿತ ವಿಚಾರಕ್ಕೆ ಸಂಬಂಧಿಸಿದಂತೆ ಮನಸ್ತಾಪ ಉಂಟಾಗಿತ್ತು . ಬಳಿಕದ ಬೆಳವಣಿಗೆಯಲ್ಲಿ ಕಿಡಿಗೇಡಿಗಳ ತಂಡವೊಂದು ಆ ಕಾಲೇಜಿನ ಮಹಿಳಾ ಪ್ರಾಧ್ಯಾಪಕಿಯೊಬ್ಬರ ಕುರಿತಾಗಿ ಮಾನಹಾನಿಕರವಾದ ಪತ್ರವನ್ನು , ಪೋಸ್ಟರ್ ಗಳನ್ನು ತಯಾರಿಸಿ ಅಂಚೆ ಮೂಲಕ ಕಳುಹಿಸುತ್ತಿತ್ತು ಎನ್ನಲಾಗಿದೆ.

ಜಾಹೀರಾತು
ಜಾಹೀರಾತು
ಜಾಹೀರಾತು

ಈ ಪತ್ರಗಳನ್ನು ಸಹೋದ್ಯೋಗಿ ಪ್ರಾಧ್ಯಾಪಕರಿಗೆ, ಕಾಲೇಜಿನ ಮುಖ್ಯಸ್ಥರಿಗೆ, ಶಿಕ್ಷಣ ಇಲಾಖೆಯ ಉನ್ನತ ದರ್ಜೆಯ ಅಧಿಕಾರಿಗಳಿಗೆ ಕಳುಹಿಸಿ ಮಾನಹಾನಿ, ಜೀವ ಬೆದರಿಕೆ ಹಾಗೂ ಮಾನಸಿಕ ಕಿರುಕುಳ ನೀಡುತ್ತಿದ್ದಾರೆಂದು ಸಂತ್ರಸ್ತ ಮಹಿಳಾ ಪ್ರಾದ್ಯಾಪಕಿಯೂ ಪೊಲೀಸ್ ಠಾಣೆಗೆ ದೂರು ನೀಡಿದ್ದರು. ಅದರಂತೆ ಮಂಗಳೂರು ಮಹಿಳಾ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿತ್ತು.

ಜಾಹೀರಾತು
ಜಾಹೀರಾತು
ಜಾಹೀರಾತು

ಪ್ರಕರಣದ ತನಿಖೆ ನಡೆಸಿದ ಪೊಲೀಸರು ಆರೋಪಿಗಳಾದ ಪ್ರಕಾಶ್ ಶೆಣೈ, ಪ್ರದೀಪ್ ಪೂಜಾರಿ ಹಾಗೂ ತಾರಾನಾಥ ಬಿ ಎಸ್ ಶೆಟ್ಟಿ ರವರನ್ನು ಬಂದಿಸಿದ್ದಾರೆ, ಆರೋಪಿಗಳು ಕಾಲೇಜಿನ ಸಂಚಾಲಕ ಹಾಗೂ ಪ್ರಾಧ್ಯಾಪಕರಾಗಿದ್ದು, ಅವರು ಅಕ್ರಮ ಕೂಟ ರಚಿಸಿ ಕೃತ್ಯ ಎಸಗಿದ್ದಾರೆ . ಆರಂಭದಲ್ಲಿ ಮಹಿಳಾ ಪ್ರಾಧ್ಯಾಪಕಿಯ ಕುರಿತಾಗಿ ಆಖೆಯ ಫೋಟೊ ಬಳಸಿ ಮಾನಹಾನಿಕರವಾದ ಬರಹವನ್ನು ಬರೆದು ಪೋಸ್ಟ್ ಕಾರ್ಡ್, ಇನ್ ಲ್ಯಾಂಡ್ ಲೆಟರ್ ಮೂಲಕ ಸಹೋದ್ಯೋಗಿ ಪ್ರಾಧ್ಯಾಪಕರಿಗೆ, ಕಾಲೇಜಿನ ಮುಖ್ಯಸ್ಥರಿಗೆ, ಶಿಕ್ಷಣ ಇಲಾಖೆಯ ಉನ್ನತ ದರ್ಜೆಯ ಅಧಿಕಾರಿಗಳಿಗೆ ಅಂಚೆ ಮೂಲಕ ಕಳುಹಿಸಿಕೊಡುತ್ತಿದ್ದರು ಎನ್ನಲಾಗಿದೆ.

ಬಳಿಕದ ದಿನಗಳಲ್ಲಿ ಮಹಿಳಾ ಪ್ರಾಧ್ಯಾಪಕಿಯ ಮೊಬೈಲ್ ನಂಬ್ರ ಹಾಗೂ ಇ-ಮೇಲ್ ಐಡಿಯನ್ನು ನಮೂದಿಸಿ ಅಶ್ಲೀಲವಾಗಿ ಬರೆದು ಪೋಸ್ಟರ್ ಗಳನ್ನು ತಯಾರಿಸಿ ಸುಳ್ಯ, ಸುಬ್ರಹ್ಮಣ್ಯ, ಸಂಪಾಜೆ, ಮಡಿಕೇರಿ, ಮೈಸೂರು, ಚಿಕ್ಕಮಗಳೂರು, ಮೂಡಿಗೆರೆ, ಬಾಳೆಹೊನ್ನೂರು, ಎನ್ ಆರ್ ಪುರ, ಶಿವಮೊಗ್ಗ ಮುಂತಾದ ಬಸ್ ಸ್ಟಾಂಡ್ ಗಳ ಸಾರ್ವಜನಿಕ ಶೌಚಾಲಯಗಳಲ್ಲಿ ಅಂಟಿಸಿದ್ದಾರೆ. ಇದನ್ನು ನೋಡಿದ ಸಾರ್ವಜನಿಕರು ಮಹಿಳಾ ಪ್ರಾದ್ಯಾಪಕಿಗೆ ಕರೆ ಮಾಡಿ ಅಶ್ಲೀಲವಾಗಿ ಮಾನಹಾನಿಕರವಾಗಿ ಮಾತನಾಡಿ ಮಾನಸಿಕ ಕಿರುಕುಳ ನೀಡುತ್ತಿದ್ದರು ಎಂದು ದೂರಿನಲ್ಲಿ ತಿಳಿಸಲಾಗಿದೆ

ಆರೋಪಿಗಳ ಪೈಕಿ ಪ್ರದೀಪ್ ಪೂಜಾರಿ ಎಂಬವರ ವಿರುದ್ಧ ಈ ಹಿಂದೆ 2019 ನೇ ಇಸವಿಯಲ್ಲಿ ಕಾಲೇಜ್ ಪ್ರಾದ್ಯಪಕಿಯೊಬ್ಬರಿಗೆ ಮಾನಹಾನಿಗೆ ಯತ್ನಿಸಿದ ಪ್ರಕರಣ ದಾಖಲಾಗಿರುತ್ತದೆ. ಈ ಪ್ರಕರಣದಲ್ಲಿ ಇನ್ನೂ ಹಲವರು ಭಾಗಿಯಾಗಿದ್ದು, ಅವರುಗಳ ಪತ್ತೆ ಕಾರ್ಯ ಮುಂದುವರಿದಿದೆ. ಆರೋಪಿಗಳಿಂದ 3 ಮೊಬೈಲ್ ಫೋನುಗಳನ್ನು ಸ್ವಾಧೀನಪಡಿಸಿಕೊಳ್ಳಲಾಗಿರುತ್ತದೆ ಎಂದು ಪೊಲೀಸರು ತಿಳಿಸಿದ್ದಾರೆ.