ಸುಳ್ಯ: ಕೆಲವು ವರ್ಷಗಳಿಂದ ಮಳೆಗಾಲ ಆರಂಭ, ಕೊನೆಯಲ್ಲಿ ದಕ್ಷಿಣ ಕನ್ನಡ ಜಿಲ್ಲೆಯ ಬಹುಭಾಗವನ್ನು ಕಂಗಾಲು ಗೊಳಿಸುತ್ತಿದ್ದ ಡೆಂಗ್ಯೂ ಈ ಬಾರಿಯೂ ತೀವ್ರಗೊಳ್ಳುವ ಆತಂಕ ಎದುರಾಗಿದೆ.
ಸುಳ್ಯ, ಪುತ್ತೂರು ತಾಲೂಕುಗಳಲ್ಲಿ ಈಗಾಗಲೇ ಡೆಂಗ್ಯೂ ಉಲ್ಬಣಿಸಿದ್ದು, ಮೂವ ರನ್ನು ಬಲಿ ಪಡೆದಿದೆ. ಸಾಮಾನ್ಯ ವೈರಲ್ ಜ್ವರ ಬಾಧೆಯೂ ತೀವ್ರಗೊಂಡಿದೆ. ಎಲ್ಲ ಆಸ್ಪತ್ರೆಗಳಲ್ಲಿ ಜ್ವರ ಪೀಡಿತರ ಸಂಖ್ಯೆ ಹೆಚ್ಚಾಗುತ್ತಿದೆ. ಆರೋಗ್ಯ ಇಲಾಖೆ ನಿಯಂತ್ರಣ ಕ್ರಮ ಕೈಗೊಂಡಿ ದ್ದರೂ ಮಳೆ-ಬಿಸಿಲಿನಾಟ ರೋಗ ತೀವ್ರತೆಯನ್ನು ಹೆಚ್ಚಿಸಿದೆ.
ಶಂಕಿತ ಡೆಂಗ್ಯೂ ಪ್ರಕರಣ
ಜನವರಿಯಿಂದ ಜೂನ್ ತನಕ ಏಳು ಡೆಂಗ್ಯೂ ಪ್ರಕರಣ ದೃಢ ಪಟ್ಟಿವೆ. 78 ಶಂಕಿತ ಡೆಂಗ್ಯೂ ಪ್ರಕರಣ ಪತ್ತೆಯಾಗಿದ್ದು, ಎಲಿಸಾ ಟೆಸ್ಟ್ ವರದಿ ಬರಬೇಕಿದೆ. ನಿಫಾ, ಮಲೇರಿಯಾ, ಇಲಿ ಜ್ವರ ಪ್ರಕರಣ ಪತ್ತೆ ಆಗಿಲ್ಲ ಅನ್ನುವುದು ಆರೋಗ್ಯ ಇಲಾಖೆಯ ಮಾಹಿತಿ.
ಖಾಸಗಿ ಆಸ್ಪತ್ರೆಗಳಲ್ಲಿನ ಜ್ವರ ಬಾಧಿತರ ಅಂಕಿ ಅಂಶಗಳನ್ನು ಆರೋಗ್ಯ ಇಲಾಖೆಗೆ ನೀಡಬೇಕು ಎಂದಿದ್ದರೂ ಪಾಲನೆ ಆಗುತ್ತಿಲ್ಲ. ಹೊರ ತಾಲೂಕು, ಜಿಲ್ಲೆಗಳ ಆಸ್ಪತ್ರೆಗಳಲ್ಲಿ ದಾಖಲಾದವರ ಸಂಖ್ಯೆಯೂ ದೊಡ್ಡದಿದೆ.
ಆಸ್ಪತ್ರೆಗಳು ಹೌಸ್‌ಫುಲ್
ಸುಳ್ಯ ತಾಲೂಕು ಆಸ್ಪತ್ರೆಯಲ್ಲಿ ದಿನವೊಂದಕ್ಕೆ 100ಕ್ಕಿಂತ ಅಧಿಕ ಮತ್ತು ಪ್ರಾಥಮಿಕ ಆರೋಗ್ಯ ಕೇಂದ್ರಗಳಲ್ಲಿ 50ರಿಂದ 60ರಷ್ಟು ಮಂದಿ ಚಿಕಿತ್ಸೆಗೆ ಬರುತ್ತಾರೆ. ಸರಕಾರಿ ಆಸ್ಪತ್ರೆಗಳಲ್ಲಿ ದಾಖಲಾತಿಗೆ ಸ್ಥಳಾವಕಾಶದ ಕೊರತೆಯಿದೆ. ಖಾಸಗಿ ಆಸ್ಪತ್ರೆಗಳಲ್ಲೂ ಜ್ವರ ಬಾಧಿತರ ಸಂಖ್ಯೆ ಕಡಿಮೆ ಇಲ್ಲ.
ಎಲ್ಲ ಸರಕಾರಿ ಆಸ್ಪತ್ರೆಗಳಲ್ಲಿ ಪ್ಲೇಟ್ಲೆಟ್, ವೈರಲ್ ಜ್ವರಕ್ಕಾಗಿ ರಕ್ತ ಪರೀಕ್ಷೆ ನಡೆಸಲಾಗುತ್ತಿದೆ. ಡೆಂಗ್ಯೂ ಜ್ವರಕ್ಕೆ ಎಲಿಸಾ ರಕ್ತ ಪರೀಕ್ಷೆ ಸೌಲಭ್ಯ ತಾಲೂಕು ಆಸ್ಪತ್ರೆಗಳಲ್ಲಿಲ್ಲ, ಜಿಲ್ಲಾ ಆಸ್ಪತ್ರೆಗೆ ರಕ್ತದ ಮಾದರಿ ಕಳುಹಿಸಿ, ವರದಿ ಪಡೆಯಬೇಕು. ತಾಲೂಕು ಆಸ್ಪತ್ರೆ ಗಳಲ್ಲೂ ಸೌಲಭ್ಯ ಕಲ್ಪಿಸಿದರೆ ರೋಗ ಉಲ್ಬಣಿಸದಂತೆ ತಡೆಯಬಹುದು ಎನ್ನುವುದು ಜನರ ಅಭಿಮತ.
ಔಷಧ ಲಭ್ಯ
ಎಲ್ಲ ಸರಕಾರಿ ಆಸ್ಪತ್ರೆಗಳಲ್ಲಿ ಔಷಧ ಲಭ್ಯವಿದೆ. ವೈರಲ್ ಜ್ವರ ಪ್ರಮಾಣ ಅಧಿಕವಾಗಿದ್ದು, ಜ್ವರ ಬಂದ ತತ್‌ಕ್ಷಣ ಆಸ್ಪತ್ರೆಗೆ ಭೇಟಿ ನೀಡುವಂತೆ ಮನವಿ ಮಾಡಲಾಗಿದೆ. ರೋಗ ಪೀಡಿತರ ಮನೆಗೆ ತೆರಳಿ ಫಾಗಿಂಗ್ ಮೊದಲಾದ ಸುರಕ್ಷಾ ಕ್ರಮ ಕೈಗೊಳ್ಳಲಾಗುತ್ತಿದೆ ಎಂದು ತಾಲೂಕು ಆರೋಗ್ಯ ಇಲಾಖೆ ತಿಳಿಸಿದೆ.
ಒಂದು ಮಾತ್ರ ದೃಢ
ಮಂಗಳೂರು: ಜಿಲ್ಲೆಯಲ್ಲಿ ಶಂಕಿತ ಡೆಂಗ್ಯೂ ಜ್ವರದ ಕಾರಣದಿಂದ ಮೂವರು ಮೃತಪಟ್ಟಿದ್ದಾರೆ. ಆದರೆ ಈ ಪೈಕಿ ಓರ್ವರಿಗೆ ಡೆಂಗ್ಯೂ ದೃಢಪಟ್ಟಿದ್ದು, ಇನ್ನೆರಡು ಪ್ರಕರಣಗಳಲ್ಲಿ ಓರ್ವರಿಗೆ ಶಂಕಿತ ಡೆಂಗ್ಯೂ ಇದ್ದು, ಮತ್ತೋರ್ವ ಸಾಮಾನ್ಯ ಜ್ವರ ತೀವ್ರಗೊಂಡು ಸಾವನ್ನಪ್ಪಿದ್ದಾರೆ ಎಂದು ಜಿಲ್ಲಾ ಆರೋಗ್ಯ ಇಲಾಖೆ ಅಧಿಕಾರಿಗಳು ಸ್ಪಷ್ಟಪಡಿಸಿದ್ದಾರೆ.
ಸುಳ್ಯ ತಾಲೂಕಿನ ಎಣ್ಮೂರು ಗ್ರಾಮದ ಕುಳಾಯಿತ್ತೋಡಿ ನಿವಾಸಿ ಆದರ್ಶ್ (14) ಡೆಂಗ್ಯೂನಿಂದ ಮೃತಪಟ್ಟ ವಿದ್ಯಾರ್ಥಿ. ಪುತ್ತೂರಿನ ಸರಕಾರಿ ಮತ್ತು ಖಾಸಗಿ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದ ಆದರ್ಶ್ ಜ್ವರ ಉಲ್ಬಣಗೊಂಡ ಹಿನ್ನೆಲೆಯಲ್ಲಿ ನಗರದ ಸರಕಾರಿ ವೆನಾÉಕ್ ಆಸ್ಪತ್ರೆಗೆ ಜೂನ್ 4ರಂದು ದಾಖಲಾಗಿದ್ದರು. ಆದರೆ ಚಿಕಿತ್ಸೆಗೆ ಸ್ಪಂದಿಸದೆ ಜೂ. 9ರಂದು ನಿಧನ ಹೊಂದಿದ್ದಾರೆ.
ಈತನ ಸಹೋದರ ಕೂಡ ಡೆಂಗ್ಯೂನಿಂದ ಆಸ್ಪತ್ರೆಗೆ ದಾಖಲಾಗಿದ್ದ. ಆತನ ಆರೋಗ್ಯ ಸುಧಾರಿಸಿದ್ದು, ಬಿಡುಗಡೆಗೊಂಡಿದ್ದಾನೆ ಎಂದು ಆಸ್ಪತ್ರೆ ಮೂಲಗಳು ತಿಳಿಸಿವೆ.
ಪುತ್ತೂರಿನಲ್ಲೂ ತೀವ್ರ
ಪುತ್ತೂರು ತಾಲೂಕಿನಲ್ಲಿ ಈಗಾಗಲೇ ಹಲವರು ಜ್ವರದಿಂದ ನರಳು ತ್ತಿದ್ದಾರೆ. 3 ಡೆಂಗ್ಯೂ ಪ್ರಕರಣಗಳು ಖಚಿತವಾಗಿವೆ. ಖಾಸಗಿ ಆಸ್ಪತ್ರೆ ಗಳಲ್ಲಿ ಈಗಾಗಲೇ 118ರಷ್ಟು ಶಂಕಿತ ಡೆಂಗ್ಯೂ ಪ್ರಕರಣಗಳು ದಾಖಲಾಗಿವೆ. ಇದುವರೆಗೆ ಪಾಣಾಜೆ, ಕಾಣಿಯೂರುಗಳಲ್ಲಿ ತಲಾ ಒಂದು ಹಾಗೂ ಪುತ್ತೂರು ನಗರದಲ್ಲಿ 2 ಮಲೇರಿಯಾ ಪ್ರಕರಣ ಪತ್ತೆಯಾಗಿವೆ.
ಪೂರ್ಣಕಾಲಿಕ ವೈದ್ಯರಿಲ್ಲ
ಸುಳ್ಯದಲ್ಲಿ ತಾಲೂಕು ಆಸ್ಪತ್ರೆ, 6 ಪ್ರಾಥಮಿಕ ಆರೋಗ್ಯ ಕೇಂದ್ರ, ಒಂದು ಸಂಚಾರಿ ಆರೋಗ್ಯ ಘಟಕಗಳಿವೆ. ಸುಬ್ರಹ್ಮಣ್ಯ ಮತ್ತು ಪಂಜ ಪ್ರಾ. ಆರೋಗ್ಯ ಕೇಂದ್ರದಲ್ಲಿ ವೈದ್ಯರಿದ್ದಾರೆ. ಕೊಲ್ಲಮೊಗ್ರು, ಗುತ್ತಿಗಾರಿನಲ್ಲಿ ಆಯುರ್ವೇದ ವೈದ್ಯರಿದ್ದಾರೆ. ಅತೀ ಹೆಚ್ಚು ಜನರು ಭೇಟಿ ನೀಡುವ ಬೆಳ್ಳಾರೆ ಹಾಗೂ ಡೆಂಗ್ಯೂ ಪ್ರಕರಣ ಅಧಿಕ ಸಂಖ್ಯೆಯಲ್ಲಿ ಕಂಡುಬಂದಿರುವ ಅರಂತೋಡು ಪ್ರಾ. ಆರೋಗ್ಯ ಕೇಂದ್ರದಲ್ಲಿ ಪೂರ್ಣಕಾಲಿಕ ವೈದ್ಯರೇ ಇಲ್ಲ. ಈ ಎರಡು ಆಸ್ಪತ್ರೆಗಳಿಗೆ ವಾರದ ಮೂರು ದಿನ ತಾತ್ಕಾಲಿಕ ನೆಲೆಯಲ್ಲಿ ವೈದ್ಯರನ್ನು ನಿಯೋಜಿಸಲಾಗಿದೆ. ತಾಲೂಕು ಆಸ್ಪತ್ರೆ ಸಹಿತ ಎಲ್ಲ ಆರೋಗ್ಯ ಕೇಂದ್ರ ಗಳಲ್ಲಿ ಸಿಬಂದಿ ಕೊರತೆ ತೀವ್ರವಾಗಿ ಕಾಡುತ್ತಿದೆ.
ಡೆಂಗ್ಯೂ ದೃಢಪಟ್ಟಿಲ್ಲ
ಮಂಗಳೂರಿನ ಖಾಸಗಿ ಆಸ್ಪತ್ರೆಯಲ್ಲಿ ಜೂ. 9ರಂದು ಮೃತಪಟ್ಟ ಕೊçಲ ಏಣಿತಡ್ಕ ನಿವಾಸಿ ಅಶ್ವಿತಾ (26) ಅವರಿಗೆ ಡೆಂಗ್ಯೂ ಬಾಧಿಸಿರುವುದು ದೃಢಪಟ್ಟಿಲ್ಲ. ಜೂ. 8ರಂದು ಖಾಸಗಿ ಆಸ್ಪತ್ರೆಗೆ ದಾಖಲಾಗಿದ್ದು, ಡೆಂಗ್ಯೂ ಲಕ್ಷಣಗಳಿಲ್ಲವಾದರೂ ಚಿಕಿತ್ಸೆಗೆ ಸ್ಪಂದಿಸದೆ ಶನಿವಾರ ಮೃತಪಟ್ಟಿದ್ದರು.
ಇನ್ನೊಂದು ಪ್ರಕರಣದಲ್ಲಿ ಉಬರಡ್ಕ ಮಿತ್ತೂರು ಗ್ರಾಮದ ಅಜಿತ್ (25) ಜ್ವರದಿಂದ ಬಳಲುತ್ತಿದ್ದು, ಸುಳ್ಯದ ಸರಕಾರಿ ಆಸ್ಪತ್ರೆಯಿಂದ ಮಂಗಳೂರಿನ ಖಾಸಗಿ ಆಸ್ಪತ್ರೆಗೆ ಕರೆತರುವಾಗ ದಾರಿ ಮಧ್ಯೆ ಕೊನೆಯುಸಿರೆಳೆದಿದ್ದಾರೆ. ಆದರೆ ಅವರಿಗೆ ಡೆಂಗ್ಯೂ ಲಕ್ಷಣ ಕಂಡು ಬಂದಿಲ್ಲ. ಫಿಟ್ಸ್ ಕೂಡ ಇದ್ದಿದ್ದರಿಂದ ಜ್ವರ ತೀವ್ರಗೊಂಡು ನಿಧನ ಹೊಂದಿದ್ದಾರೆ ಎನ್ನುತ್ತಾರೆ ಆರೋಗ್ಯ ಇಲಾಖೆ ಅಧಿಕಾರಿಯೊಬ್ಬರು.
ಮಾರಣಾಂತಿಕ ಅಲ್ಲ
ಡೆಂಗ್ಯೂ ಮಾರಣಾಂತಿಕ ಅಲ್ಲ. ಭಯ ಬೇಡ. ಡೆಂಗ್ಯೂ ಖಾತರಿಯಾದರೆ ರೋಗಿಯ ರಕ್ತದ ಪ್ಲೇಟ್ಲೆಟ್ ಹೆಚ್ಚಳಕ್ಕೆ ಬೇಕಾದ ಚಿಕಿತ್ಸೆ ನೀಡಿದರೆ ಗುಣಮುಖರಾಗುತ್ತಾರೆ. ಶಂಕಿತ ಡೆಂಗ್ಯೂ ಬಾಧಿತರ ಆರೋಗ್ಯದಲ್ಲಿ ಪೂರ್ಣ ಸುಧಾರಣೆ ಕಂಡಿದೆ. ವೈರಲ್ ಜ್ವರ ಹೆಚ್ಚಾಗಿದ್ದು, ಚಿಕಿತ್ಸೆ ನೀಡಲಾಗುತ್ತಿದೆ. ಎಲ್ಲ ಆಸ್ಪತ್ರೆಗಳಲ್ಲಿ ಔಷಧ ಲಭ್ಯವಿದೆ. ಸ್ವತ್ಛತೆಯ ಬಗ್ಗೆ ಜಾಗೃತಿ ಮೂಡಿಸಲಾಗುತ್ತಿದೆ.
– ಡಾ| ಸುಬ್ರಹ್ಮಣ್ಯ ಎಂ.ಆರ್. ತಾಲೂಕು ಆರೋಗ್ಯಾಧಿಕಾರಿ, ಸುಳ್ಯ
ಅಶ್ವಿತಾ ಅವರಿಗೆ ಲೋ ಬಿಪಿ ಆಗಿದ್ದು, ಮಂಗಳೂರು ಕೆಎಂಸಿಯಲ್ಲಿ ದಾಖಲಾಗಿದ್ದರು. ಹೃದಯ ಸಂಬಂಧಿ ಸಮಸ್ಯೆ ಇದ್ದು, ಸಾವಿಗೆ ಕಾರಣ ಆಗಿರಬಹುದು ಎಂಬ ಶಂಕೆ ಇದೆ. ಇದರ ಜತೆಗೆ ಶಂಕಿತ ಡೆಂಗ್ಯೂ ಜ್ವರವೂ ಇತ್ತು. ವರದಿ ಬಂದ ಬಳಿಕವಷ್ಟೇ ಖಚಿತ ಮಾಹಿತಿ ನೀಡಲು ಸಾಧ್ಯ.
– ಡಾ| ಅಶೋಕ್ ಕುಮಾರ್ ರೈ, ತಾಲೂಕು ಆರೋಗ್ಯಾಧಿಕಾರಿ