Breaking News : ಮೊಹಮ್ಮದ್ ನಲಪಾಡ್‍ಗೆ ಜಾಮೀನು ಮಂಜೂರು ; ಹೈಕೋರ್ಟ್ ನಿಂದ ಷರತ್ತು ಬದ್ಧ ಬೇಲ್ – ಕಹಳೆ ನ್ಯೂಸ್
ಬೆಂಗಳೂರು: ಶಾಂತಿನಗರ ಶಾಸಕ ಹ್ಯಾರೀಸ್ ಪುತ್ರ ಮೊಹಮ್ಮದ್ ನಲಪಾಡ್ ಗೆ ಕೊನೆಗೂ ಹೈಕೋರ್ಟ್ ಷರತ್ತು ಬದ್ಧ ಜಾಮೀನು ಮಂಜೂರು ಮಾಡಿದೆ.
ಇಬ್ಬರ ಶ್ಯೂರಿಟಿಯೊಂದಿಗೆ ಜಾಮೀನು ಮಂಜೂರು ಮಾಡಲಾಗಿದ್ದು, ತನಿಖೆಗೆ ಸಹಕರಿಸಬೇಕು. ಅಲ್ಲದೇ ವಿಚಾರಣೆಗೆ ಕರೆದಾಗಲೆಲ್ಲಾ ಬರಬೇಕು. ಅಧೀನ ನ್ಯಾಯಾಲಯ ನೀಡುವ ಷರತ್ತಿಗೂ ಬದ್ಧವಾಗಿರಬೇಕು ಎಂದು ಹೈಕೋರ್ಟ್ ನ್ಯಾಯಾಧೀಶ ಮೈಕಲ್ ಡಿ.ಕುನ್ಹಾ ಆದೇಶ ನೀಡಿದ್ದಾರೆ.
ಜಾಮೀನು ಮಂಜೂರು ಮಾಡಿದ ನಂತರದ ಪ್ರಕ್ರಿಯೆಗಳನ್ನು ನಲಪಾಡ್ ವಕೀಲರು ಆರಂಭಿಸಿದ್ದು, ಇಂದು ಸಂಜೆಯೊಳಗೆ ನಲಪಾಡ್ ಜೈಲಿನಿಂದ ಹೊರ ಬರುವ ಸಾಧ್ಯತೆಗಳಿವೆ. ಇತ್ತ ಪರಪ್ಪನ ಅಗ್ರಹಾರದಲ್ಲಿರುವ ನಲಪಾಡ್, ಜಾಮೀನು ಸಿಕ್ಕಿರುವ ಸುದ್ದಿ ತಿಳಿಯುತ್ತಿದ್ದಂತೆ ನಿಟ್ಟುಸಿರು ಬಿಟ್ಟಿದ್ದಾನೆ ಎಂದು ಪಬ್ಲಿಕ್ ಟಿವಿಗೆ ಮೂಲಗಳು ತಿಳಿಸಿವೆ.
ಏನಿದು ಪ್ರಕರಣ?
ನಗರದ ಫರ್ಜಿ ಕೆಫೆ ಯಲ್ಲಿ ಫೆಬ್ರವರಿ 17ರ ರಾತ್ರಿ ನಡೆದ ಪಾರ್ಟಿ ಆಯೋಜನೆಗೊಂಡಿತ್ತು. ನಗರದ ಶ್ರೀಮಂತ ಮನೆತನದ ಯುವಕ, ಯುವತಿಯರು ಪಾಲ್ಗೊಂಡಿದ್ದ ಕೆಫೆಯಲ್ಲಿ ಗಾಯಗೊಂಡಿದ್ದ ವಿದ್ವತ್ ಕಾಲು ಚಾಚಿ ಕುಳಿತಿದ್ದರು. ಇದನ್ನು ಕಂಡ ನಲಪಾಡ್ ನನ್ನ ಮುಂದೆ ದರ್ಪದಿಂದ ಕಾಲು ಚಾಚಿಕೊಂಡು ಕೂತಿದ್ದೀಯಾ ಎಂದು ವಿದ್ವತ್ ಮೇಲೆ ಜಗಳಕ್ಕೆ ನಿಂತಿದ್ದಾನೆ. ನಂತರ ಕ್ಷಮೆ ಕೇಳುವಂತೆ ಹೇಳಿದ್ದಕ್ಕೆ ವಿದ್ವತ್ ನಿರಾಕರಿಸಿದ್ದಾರೆ. ಇದರಿದ ರೊಚ್ಚಿಗೆದ್ದ ನಲಪಾಡ್ ಮೊದಲು ವಿದ್ವತ್ ಹೊಟ್ಟೆ ಮತ್ತು ಮುಖದ ಭಾಗಕ್ಕೆ ಏಟು ಕೊಟ್ಟಿದ್ದಾನೆ. ನಲಪಾಡ್ ಹೊಡೆದ ಬಳಿಕ ಆತನ ಗ್ಯಾಂಗ್ ನವರು ವಿದ್ವತ್ ಮೇಲೆ ಮನಸೋ ಇಚ್ಚೇ ಹಲ್ಲೆ ನಡೆಸಿದ್ದಾರೆ. ನಂತರ ಚಿಕಿತ್ಸೆಗೆಂದು ವಿದ್ವತ್ ಮಲ್ಯ ಆಸ್ಪತ್ರೆಗೆ ತೆರಳಿದಾಗ ಅಲ್ಲಿಗೂ ಹೋಗಿ ನಲಪಾಡ್ ಮತ್ತು ತಂಡ ಹಲ್ಲೆ ಮಾಡಿತ್ತು.
ನಲಪಾಡ್ ಮೇಲೆ ಯಾವೆಲ್ಲ ಕೇಸ್ ಹಾಕಲಾಗಿದೆ?
ಐಪಿಸಿ ಸೆಕ್ಷನ್ 307(ಕೊಲೆ ಯತ್ನ) ಜಾಮೀನು ರಹಿತ ಕೇಸಾಗಿದ್ದು ಉಳಿದ ಸೆಕ್ಷನ್ ಗಳಾದ 341(ಅಕ್ರಮ ಬಂಧನ), 504(ಅವ್ಯಾಚ್ಯ ಶಬ್ಧಗಳಿಂದ ನಿಂದನೆ), 143, 144- 146, 147, 149 (ಅಕ್ರಮ ಗುಂಪುಗಾರಿಕೆ), 326(ಗಂಭೀರ ಗಾಯ), 506 ಬಿ (ಪ್ರಾಣಬೆದರಿಕೆ) ಜಾಮೀನು ಸಿಗುವ ಕೇಸುಗಳಾಗಿವೆ.