ಪುತ್ತೂರು ಶ್ರೀ ಮಹಾಲಿಂಗೇಶ್ವರ ದೇವಸ್ಥಾನಕ್ಕೆ ಭೇಟಿ ನೀಡಿದ ರಾಜ್ಯ ಉಚ್ಚ ನ್ಯಾಯಾಲಯದ ಮತ್ತು ದ.ಕ.ಜಿಲ್ಲಾ ಆಡಳಿತಾತ್ಮಕ ನ್ಯಾಯಾಧೀಶ ನ್ಯಾಯಮೂರ್ತಿ ಕೆ ಸೋಮಶೇಖರ್ – ಕಹಳೆ ನ್ಯೂಸ್
ಪುತ್ತೂರು: ಮೇ.7ರಂದು ಪುತ್ತೂರು ಶ್ರೀ ಮಹಾಲಿಂಗೇಶ್ವರ ದೇವಸ್ಥಾನಕ್ಕೆ ರಾಜ್ಯ ಉಚ್ಛ ನ್ಯಾಯಾಲಯದ ನ್ಯಾಯಾಧೀಶ ಮತ್ತು ದಕ್ಷಿಣ ಕನ್ನಡ ಆಡಳಿತಾತ್ಮಕ ನ್ಯಾಯಾಧೀಶ ನ್ಯಾಯಮೂರ್ತಿ ಕೆ ಸೋಮಶೇಖರ್ ಅವರು ಕುಟುಂಬ ಸಮೇತ ಭೇಟಿ ನೀಡಿ ಶ್ರೀ ದೇವರ ಮಹಾಪೂಜೆಯಲ್ಲಿ ಭಾಗವಹಿಸಿ ಪ್ರಸಾದ ಸ್ವೀಕರಿಸಿದರು.
ಈ ಹಿಂದೆ ಪುತ್ತೂರಿನಲ್ಲಿ ನ್ಯಾಯಾಧೀಶರಾಗಿದ್ದು ಇದೀಗ ಬೆಂಗಳೂರು ಲೋಕಾಯುಕ್ತ ನ್ಯಾಯಾಧೀಶರಾಗಿರುವ ಬಸವರಾಜ್, ಪುತ್ತೂರು 5ನೇ ಹೆಚ್ಚುವರಿ ಜಿಲ್ಲಾ ಮತ್ತು ಸತ್ರ ನ್ಯಾಯಾಧೀಶ ರುಡಾಲ್ಫ್ ಪಿರೇರಾ ಜೊತೆಯಲ್ಲಿದ್ದರು. ದೇವಳಕ್ಕೆ ಭೇಟಿ ನೀಡಿದ ನ್ಯಾಯಾಧೀಶರುಗಳು ದೇವಳದ ಚರಿತ್ರೆಯ ಮಾಹಿತಿ ಪಡೆದ ಬಳಿಕ ದೇವಳದ ಪುಷ್ಕರಣಿಗೆ ತೆರಳಿ ಮತ್ಸ್ಯಗಳಿಗೆ ಆಹಾರ ನೀಡಿದರು. ದೇವಳದ ಸತ್ಯ ಧರ್ಮ ನಡೆಯಲ್ಲಿ ದೇವಳದ ವ್ಯವಸ್ಥಾಪನಾ ಸಮಿತಿ ಸದಸ್ಯರಾದ ಶೇಖರ್ ನಾರಾವಿ, ರವೀಂದ್ರನಾಥ ರೈ ಬಳ್ಳಮಜಲು, ರಾಮದಾಸ್ ಗೌಡ ಮತ್ತು ಕಾರ್ಯನಿರ್ವಹಣಾಧಿಕಾರಿ ನವೀನ್ ಭಂಡಾರಿ ಅವರು ನ್ಯಾಯಾಧೀಶರುಗಳಿಗೆ ಶಾಲು ಹೊದಿಸಿ ಗೌರವಿಸಿದರು. ದೇವಳದ ಪ್ರಧಾನ ಅರ್ಚಕ ವಸಂತ ಕೆದಿಲಾಯ ಅವರು ಪ್ರಸಾದ ವಿತರಿಸಿದರು.
ಈ ಸಂದರ್ಭದಲ್ಲಿ ದೇವಳದ ಮಾಜಿ ಅಡಳಿತ ಮೊಕ್ತೇಸರ ಎನ್.ಕೆ.ಜಗನ್ನಿವಾಸ ರಾವ್, ವಕೀಲರ ಸಂಘದ ಅಧ್ಯಕ್ಷ ಮನೋಹರ್ ಕೆ.ವಿ. ಉಪಾಧ್ಯಕ್ಷ ಕೃಷ್ಣಪ್ಪ ಗೌಡ ಕಕ್ವೆ, ಕೋಶಾಧಿಕಾರಿ ಶ್ಯಾಮಪ್ರಸಾದ್ ಕೈಲಾರ್, ನ್ಯಾಯವಾದಿಗಳಾದ ನಾಗರಾಜ್, ಶ್ಯಾಮ ಪಾಣತ್ತಿಲ, ನ್ಯಾಯಾಲಯದ ಸಿಬ್ಬಂದಿಗಳು ಮತ್ತಿತರರು ಉಪಸ್ಥಿತರಿದ್ದರು.