ರಾಯಚೂರು : ಖಾಸಗಿ ಆಸ್ಪತ್ರೆಯಲ್ಲಿ ಸಾವನಪ್ಪಿದ ಮಗು ಸ್ಮಶಾನದಲ್ಲಿ ಅಂತ್ಯಸಂಸ್ಕಾರದ ವೇಳೆ ಜೀವಂತವಾಗಿರುವ ಘಟನೆ ರಾಯಚೂರು ಜಿಲ್ಲೆಯ ತುರ್ವಿಹಾಳ ಪಟ್ಟಣದಲ್ಲಿ ನಡೆದಿದೆ.
ಮೇ 7 ರಂದು ತುರ್ವಿಹಾಳದ ಸರ್ಕಾರಿ ಆಸ್ಪತ್ರೆಯಲ್ಲಿ ಈರಪ್ಪ ಅವರ ಪತ್ನಿ ಅಮರಮ್ಮ ಅವರು ಹೆಣ್ಣು ಮಗುವಿಗೆ ಜನ್ಮ ನೀಡಿದ್ದರು. ನವಜಾತ ಶಿಶು ರಕ್ತಹೀನತೆಯಿಂದ ಬಳಲುತ್ತಿತ್ತು. ಆಸ್ಪತ್ರೆಯಲ್ಲಿ ಸೌಲಭ್ಯದ ಕೊರತೆಯಿರುವ ಹಿನ್ನೆಲೆಯಲ್ಲಿ ವೈದ್ಯರು ದಂಪತಿಗೆ ಮಗುವನ್ನು ಸಿಂಧನೂರು ತಾಲ್ಲೂಕು ಸರ್ಕಾರಿ ಆಸ್ಪತ್ರೆಗೆ ಕರೆದೊಯ್ಯುವಂತೆ ಸಲಹೆ ನೀಡಿದ್ದರು. ಆದರೆ ದಂಪತಿ ಮೇ 10ರಂದು ನವಜಾತ ಶಿಶುವನ್ನು ಖಾಸಗಿ ಆಸ್ಪತ್ರೆಗೆ ದಾಖಲಿಸಿದ್ದರು. ಮೇ 14ರವರೆಗೆ (ಶನಿವಾರ) ಮಗುವಿಗೆ ಚಿಕಿತ್ಸೆ ನೀಡಿದ ಬಳಿಕ ವೈದ್ಯರು ಮಗು ಮೃತಪಟ್ಟಿರುವುದಾಗಿ ತಿಳಿಸಿದ್ದರು. ವೈದ್ಯರ ಸಲಹೆಯಂತೆ ಸ್ವಗ್ರಾಮ ತುರ್ವಿಹಾಳಕ್ಕೆ ತೆಗೆದುಕೊಂಡು ಹೋಗಿ ಅಂತ್ಯಸಂಸ್ಕಾರದ ಸಂದರ್ಭದಲ್ಲಿ ಮಗು ಬದುಕಿರುವುದು ತಿಳಿದು ಬಂದಿದೆ.