ಅಯೋ ಕೃಷ್ಣ ಕಷ್ಣ !!! ಇದು ಉಡುಪಿ ಕೆಎಸ್.ಆರ್.ಟಿ.ಸಿ. ಬಸ್ ನಿಲ್ದಾಣವೋ ? ಕುಡುಕ ಕಾಮುಕರ ತಾಣವೋ ? – ಕಹಳೆ ನ್ಯೂಸ್
ಉಡುಪಿ: ರಾಜ್ಯದ ಹಲವು ಜಿಲ್ಲೆಗಳಿಗೆ ಸಂಪರ್ಕ ಕಲ್ಪಿಸುವ KSRTC ಬಸ್ ನಿಲುಗಡೆ ತಾಣ ಇಲ್ಲಿನದು. ದಿನಕ್ಕೆ 250ಕ್ಕೂ ಅಧಿಕ ಬಸ್ ಗಳು ಈ ನಿಲ್ದಾಣಕ್ಕೆ ಬಂದು ಹೋಗುತ್ತವೆ. ನಗರದ ಕೇಂದ್ರ ಭಾಗದಲ್ಲೇ ಈ ಬಸ್ ನಿಲ್ದಾಣವಿದೆ. ಆದರೆ ಇಲ್ಲಿನ ಪರಿಸರ ಮಾತ್ರ ಪುಂಡರ ತಾಣವಾಗಿದೆ. ಸ್ವಚ್ಛತೆಯೂ ಇಲ್ಲದೆ ಸ್ಥಳ ಸೊರಗಿದೆ.
ಬಸ್ ಗಳಿಗೂ, ಪ್ರಯಾಣಿಕರಿಗೂ ಕಷ್ಟ
ಈ ಬಸ್ ನಿಲ್ದಾಣದಲ್ಲಿ ಬಸ್ ಗಳಿಗೂ ನಿಲ್ಲುವುದಕ್ಕೆ ಸೂಕ್ತ ಸ್ಥಳವಿಲ್ಲ. ಪ್ರಯಾಣಿಕರು ಕುಳಿತುಕೊಳ್ಳುವುದಕ್ಕೆ, ಕೊನೆಪಕ್ಷ ನಿಲ್ಲುವುದಕ್ಕೂ ಯೋಗ್ಯವಾಗಿಲ್ಲ. ಆಸನಗಳಿರುವುದೇ 10-12. ಇದು ಯಾವುದಕ್ಕೂ ಸಾಲದು.
ಈ ಬಸ್ ನಿಲ್ದಾಣದಲ್ಲಿ ಪಡ್ಡೆಗಳು, ಕುಡುಕರ ಹಾವಳಿ. ಇವರ ನಡುವೆ ಭಿಕ್ಷಕರು, ತಿರುಗಾಡಿಗಳು. ಪದೇ ಪದೇ ಗಲಾಟೆ. ವಿಪರೀತ ಬೊಬ್ಬೆ, ಗಲಾಟೆ. ಪ್ರಯಾಣಿಕರಿಗೆ ಕಿರಿಯಾಗುವಂತ ಸನ್ನಿವೇಶ. ಇದರೊಂದಿಗೆ ಕೀಟಲೆ, ಕಳ್ಳತನಕ್ಕೆ ಹೊಂಚು ಹಾಕುವುದು ಇತ್ಯಾದಿಗಳೆಲ್ಲ ನಿತ್ಯ ನಡೆಯುತ್ತಿವೆ.
ವ್ಯಾಪಾರವೂ ಇಲ್ಲ, ನೆಮ್ಮದಿಯೂ ಇಲ್ಲ
ಬಸ್ ನಿಲ್ದಾಣದೊಳಗೆ ಇರುವ ಅಂಗಡಿಯವರು ಅವರ ಅಂಗಡಿಯೆದುರು (ನಿಲ್ದಾಣದೊಳಗೆ) ಮಲಗಿರುವವರನ್ನು ಎಬ್ಬಿಸಲು ಪದೇ ಪದೇ ನೀರು ಚುಮುಕಿಸುತ್ತಾರೆ. ಆದರೆ ಅದು ಪ್ರಯೋಜನವಾಗುವುದಿಲ್ಲ. ಅನೇಕ ಮಂದಿ ಕುಡುಕರು ಅಂಗಡಿಯವರ ಮೇಲೆ ಹರಿಹಾಯುತ್ತಾರೆ. ‘ಕರೆಂಟ್ ಇಲ್ಲದ ಸಮಯವಂತೂ ಭಯಾನಕ. ಈ ಹಿಂದೆ ಪೊನ್ನುರಾಜ್ ಜಿಲ್ಲಾಧಿಕಾರಿಯಾಗಿದ್ದಾಗ ಇಲ್ಲಿ ಓರ್ವ ಕಾವಲುಗಾರನನ್ನು ನೇಮಿಸಿದ್ದರು. ಆ ಸಂದರ್ಭದಲ್ಲಿ ಕಳ್ಳರ, ಕುಡುಕರ ಹಾವಳಿ ಸ್ವಲ್ಪ ಕಡಿಮೆಯಾಗಿತ್ತು. ಆದರೆ ಈಗ ಯಾರೂ ಕೇಳುವವರೇ ಇಲ್ಲ ಎನ್ನುವಂತಾಗಿದೆ’ ಎನ್ನುತ್ತಾರೆ ಇಲ್ಲಿನ ಅಂಗಡಿಯವರು.
ತ್ಯಾಜ್ಯದ ರಾಶಿಯಲ್ಲಿ ಕಾಂಡೋಮ್ ಪ್ಯಾಕೇಟುಗಳು
ಎಳೆದು ಬಿಸಾಡಿದ ಬೀಡಿ, ಸಿಗರೇಟಿನ ತುಂಡುಗಳು, ಮದ್ಯದ ಬಾಟಲಿಗಳು, ಹಳೆಯ ಬಟ್ಟೆಗಳು, ಇತರ ತ್ಯಾಜ್ಯಗಳು ಸೇರಿ ಇದೊಂದು ತ್ಯಾಜ್ಯ ಕೊಂಪೆಯಂತಾಗಿದೆ. ಅಕ್ರಮ ದಂಧೆಗಳಿಗೂ ಪ್ರಶಸ್ತ ತಾಣದಂತಿದೆ. ಅಲ್ಲ ಅಲ್ಲಿ ಉಪಯೋಗಿಸಿದ ಕಾಂಡೋಮ್ ಪ್ಯಾಕೇಟುಗಳ ರಾಶಿಗಳನ್ನು ಕಂಡರೆ ಬೇರೇನು ಹೇಳಬೇಕಿಲ್ಲ. ರಾತ್ರಿ ಅಂಗಡಿಗಳು ಬಾಗಿಲು ಹಾಕಿದ ಮೇಲೆ ಪ್ರಯಾಣಿಕರ ಸ್ಥಿತಿ ಕಷ್ಟಕರ.
ರಾತ್ರಿ ನರಕ
ರಾತ್ರಿ ಬಸ್ ಗೆ ಕಾಯುವುದು ಇಲ್ಲಿ ಹಿಂಸೆ, ನರಕ ಯಾತನೆ. ನಾನು ಬೆಂಗಳೂರಿಗೆ ಹೋಗುವುದಕ್ಕಾಗಿ ಒಮ್ಮೆ ರಾತ್ರಿ ಗೆಳತಿಯೊಂದಿಗೆ ಬಸ್ ಕಾಯುವಾಗ ಅತ್ಯಂತ ಕೆಟ್ಟ ಅನುಭವ ಆಗಿದೆ. ಆ ಭಯ ಈಗಲೂ ಹೋಗಿಲ್ಲ. ಅನಂತರ ನಾನು ರಾತ್ರಿ ಬಸ್‌ಗೆ ಇಲ್ಲಿ ನಿಲ್ಲುವುದೇ ಇಲ್ಲ.
– ಚೈತ್ರಾ, ಪ್ರಯಾಣಿಕರು
ಸಿಬಂದಿಗೂ ಸುರಕ್ಷೆ ಇಲ್ಲ
ಇಲ್ಲಿ ನಡೆಯುವ ಗಲಾಟೆಗಳು ಪ್ರಯಾಣಿಕರು ಮಾತ್ರವಲ್ಲ, ನಮ್ಮಲ್ಲಿಯೂ ಭಯ ಮೂಡಿಸುತ್ತದೆ. ಪ್ರಶ್ನಿಸಿದರೆ ನಮ್ಮ ಮೇಲೇರಿ ಬರುತ್ತಾರೆ. ಇಲ್ಲಿ ಪೊಲೀಸರನ್ನು ನಿಯೋಜಿಸದಿದ್ದರೆ ಪ್ರಯಾಣಿಕರು, ಸಿಬಂದಿಗೂ ಸುರಕ್ಷೆಯೂ ಇಲ್ಲ.
– ಬಸ್ ನಿರ್ವಾಹಕರು, KSRTC
ಸಿ.ಸಿ ಕೆಮರಾ ಅಳವಡಿಸಿ
ಬಸ್ ನಿಲ್ದಾಣ ಪಕ್ಕ ವಾಹನಗಳನ್ನು ಅಡ್ಡಾದಿಡ್ಡಿ ಇಡಲಾಗುತ್ತದೆ. ತರಕಾರಿ ವ್ಯಾಪಾರಿಗಳ ವಿರುದ್ಧವೂ ಕ್ರಮ ಕೈಗೊಳ್ಳುತ್ತಿಲ್ಲ. ಬಸ್ ನಿಲ್ದಾಣದಲ್ಲಿ ಪರ್ಸ್ ಎಗರಿಸುವ ಘಟನೆಗಳು ಕೂಡ ನಡೆಯುತ್ತವೆ. ಇಲ್ಲಿ ಸಿಸಿ ಕೆಮರಾ ಅಳವಡಿಸಬೇಕು. ದೂರದ ಊರುಗಳಿಗೆ ಹೋಗಲು ಬಸ್ ಸಿಗದವರು ಬಸ್ ನಿಲ್ದಾಣಗಳಲ್ಲೇ ಉಳಿಯುತ್ತಾರೆ. ಅವರಿಗೆ ಯಾವ ಸುರಕ್ಷತೆಯೂ ಇಲ್ಲವಾಗಿದೆ. ಲೈಟ್ ವ್ಯವಸ್ಥೆಯೂ ಸರಿಯಾಗಿಲ್ಲ.
– ಶಿವಾನಂದ ಮೂಡಬೆಟ್ಟು