Breaking News : ಕಾಶ್ಮೀರವೇನು ಗೌರಿ ಲಂಕೇಶ್ ಅಪ್ಪನದಾ? ಕಾರ್ಯಕ್ರಮವೊಂದರಲ್ಲಿ ಮುತಾಲಿಕ್ ಘರ್ಜನೆ – ಕಹಳೆ ನ್ಯೂಸ್
ಬೆಂಗಳೂರು(ಜೂನ್.17): ರಾಜ್ಯದಲ್ಲಿ ನಾಯಿ ಸತ್ತರೂ ಅದಕ್ಕೆ ಮೋದಿ ಕಾರಣ? ಎಂದು ಬುದ್ಧಿ ಜೀವಿಗಳು ಪ್ರಧಾನಿ ಮೋದಿ ಕಡೆಗೆ ಬೆಟ್ಟು ಮಾಡುತ್ತಾರೆ ಎಂದು ಶ್ರೀರಾಮಸೇನೆ ಅಧ್ಯಕ್ಷ ಪ್ರಮೋದ್ ಮುತಾಲಿಕ್ ಅವರು ನಾಲಿಗೆ ಹರಿಬಿಟ್ಟಿದ್ದಾರೆ. ರಸ್ತೆಯಲ್ಲಿ ನಾಯಿ ಸತ್ತರೂ ಮೋದಿ ಉತ್ತರ ನೀಡಬೇಕಾ? ಕಾಶ್ಮೀರ ಏನು ಗೌರಿ ಲಂಕೇಶ್ ಅವರ ಅಪ್ಪನದಾ? ಎಂದು ಪ್ರಮೋದ್ ಮುತಾಲಿಕ್ ಅವರು ವ್ಯಂಗ್ಯವಾಡಿದ್ದಾರೆ.
ಪತ್ರಕರ್ತೆ ಗೌರಿ ಲಂಕೇಶ್ ಹತ್ಯೆಯಲ್ಲಿ ಪರಶುಮಾರ ವಾಗ್ಮರೆ ಬಂಧನವಾಗಿದೆ. ಈ ಹತ್ಯೆ ಹಿಂದೆ ಹಿಂದೂಪರ ಸಂಘಟನೆಗಳ ಕೈವಾಡವಿದೆ ಎಂದು ವರದಿಗಳು ಬರುತ್ತಿರುವೆ. ಈ ಹಿನ್ನೆಲೆಯಲ್ಲಿ ಬೆಂಗಳೂರಿನ ರಾಜಾಜಿನಗರದ ರಾಮಮಂದಿರ ದೇವಸ್ಥಾನದಲ್ಲಿ ಹಿಂದೂ ಜನಜಾಗೃತಿ ಸಮಿತಿಯಿಂದ ಕಾರ್ಯಕ್ರಮ ಹಮ್ಮಿಕೊಳ್ಳಲಾಗಿತ್ತು.
‘ಎಡಪಂಥೀಯರು ಹಿಂದೂ ವಿರೋಧಿಗಳು’ ಎಂಬ ಸಂವಾದ ಕಾರ್ಯಕ್ರಮದಲ್ಲಿ ಮುತಾಲಿಕ್, ಬಾಯಿಗೆ ಬಂದಂತೆ ಮಾತನಾಡಿ ವಿವಾದಕ್ಕೆ ಗುರಿಯಾಗಿದ್ದಾರೆ. ಬುದ್ದಿ ಜೀವಿಗಳು ಕಾಂಗ್ರೆಸ್ ಸರಕಾರದ ಅವಧಿಯಲ್ಲಿ ಆದ ಹತ್ಯೆಯನ್ನು ಪ್ರಶ್ನಿಸುವುದು ಬಿಟ್ಟು ಮೋದಿ ಬಗ್ಗೆ ಬೊಗಳುತ್ತಾರೆ ಎಂದು ಮುತಾಲಿಕ್ ನಾಲಿಗೆ ಹರಿಬಿಟ್ಟಿದ್ದಾರೆ.
ಈ ವೇಳೆ ಗೌರಿ ಹತ್ಯೆ ಬಲಪಂಥೀಯರಿಗೆ ತಳಕು ಹಾಕಲಾಗುತ್ತಿದೆ. ಕಾಂಗ್ರೆಸ್ ಅಧಿಕಾರದಲ್ಲಿ ಗೌರಿ ಹತ್ಯೆಯಾಗಿದೆ. ಆದರೆ ಬುದ್ಧಿಜೀವಿಗಳು ಕಾಂಗ್ರೆಸ್ ಕಡೆ ಬೊಟ್ಟು ಮಾಡದೇ ಮೋದಿ ಬಾಯಿ ಬೀಡ್ತಿಲ್ಲ ಅಂತ ಆರೋಪಿಸುತ್ತಿದ್ದಾರೆ. ಕರ್ನಾಟಕದಲ್ಲಿ ಒಂದು ನಾಯಿ ಸತ್ರೂ ಅದಕ್ಕೂ ಮೋದಿ ಕಾರಣ ಆಗ್ತಾರಾ? ಎಂದು ಮುತಾಲಿಕ್ ಪ್ರಶ್ನಿಸಿದ್ದಾರೆ.
ಗೌರಿ ಹತ್ಯೆ ತನಿಖೆಯನ್ನು ಆರಂಭದಲ್ಲೆ ದಿಕ್ಕು ತಪ್ಪಿಸಲಾಯ್ತು. ಆರಂಭದಿಂದಲೂ ಬಲಪಂಥೀಯರ ಮೇಲೆ ಗೂಬೆ ಕೂರಿಸಲಾಯ್ತು. ಆದರೆ ಮಹಾರಾಷ್ಟ್ರದಲ್ಲಿ ಇಬ್ಬರು ಮತ್ತು ಕರ್ನಾಟಕದಲ್ಲಿ ಇಬ್ಬರ ಹತ್ಯೆಯಾಗಿದೆ. ಎಲ್ಲಾ ಹತ್ಯೆಗಳಿಗೂ ಮೋದಿಯನ್ನು ಪ್ರಶ್ನೆ ಮಾಡಲಾಗುತ್ತೆ. ಗೌರಿ ಹತ್ಯೆಗೆ ಮೋದಿಗೂ ಏನು ಸಂಬಂಧ? ರಸ್ತೆಯಲ್ಲಿ “ನಾಯಿ” ಸತ್ತರೂ ಮೋದಿ ಮಾತನಾಡಬೇಕಾ ಎಂದು ಕಿಡಿಕಾರಿದರು.
ಬುದ್ಧಿಜೀವಿಗಳು ಕಾಂಗ್ರೆಸ್ ಏಜೆಂಟ್ಗಳು. ಕಾಂಗ್ರೆಸ್ ಪಕ್ಷವನ್ನು ಪ್ರಶ್ನೆ ಮಾಡುವುದಿಲ್ಲ. ಮೋದಿಯನ್ನು ವಿರೋಧಿಸಿ ಪ್ರಶಸ್ತಿಗಳನ್ನು ವಾಪಾಸ್ ಮಾಡಿದರು. ಆದರೆ ಯಾರೂ ಕೂಡ ಪ್ರಶಸ್ತಿ ಜೊತೆಗೆ ಲಭಿಸಿದ ಚೆಕ್ ವಾಪಾಸ್ ಮಾಡಲಿಲ್ಲ ಎಂದು ಟೀಕಿಸಿದರು.
ಗೌರಿ ಲಂಕೇಶ್ ಕನ್ಹಯ್ಯ ಅವರನ್ನು ದತ್ತು ತೆಗೆದುಕೊಂಡಿದ್ದರು. ಕನ್ಹಯ್ಯ ದೇಶದ ವಿರುದ್ಧವೆ ಮಾತನಾಡಿದ್ದರು. ಅಂತಹ ದೇಶದ್ರೋಹಿಯನ್ನು ದತ್ತು ತೆಗೆದುಕೊಂಡಿದ್ದ ಗೌರಿ ಲಂಕೇಶ್ ಗೆ ಮರಣೋತ್ತರ ಪ್ರಶಸ್ತಿ ಕೊಡಲಾಯ್ತು. ಗೌರಿ ಲಂಕೇಶ್ ಕಾಶ್ಮೀರಕ್ಕೆ ಸ್ವಾತಂತ್ರ್ಯ ಕೊಡಬೇಕೆಂದು ಪ್ರತಿಪಾದಿಸಿದ್ದರು. ಕಾಶ್ಮೀರ ಭಾರತದ ಭಾಗ. ಕಾಶ್ಮೀರ ಏನು ಗೌರಿ ಲಂಕೇಶ್ “ಅಪ್ಪನದ್ದಾ” ಎಂದು ಮುತಾಲಿಕ್ ನಾಲಿಗೆ ಹರಿಬಿಟ್ಟಿದ್ದಾರೆ.