ಪರಾತ್ಪರ ಗುರು ಡಾ. ಜಯಂತ ಆಠವಲೆಯವರ ಜನ್ಮ ದಿನದ ನಿಮಿತ್ತ ಮಂಗಳೂರಿನಲ್ಲಿ ಹಿಂದೂ ಐಕ್ಯತಾ ಮೆರವಣಿಗೆ ! – ಕಹಳೆ ನ್ಯೂಸ್
ಮಂಗಳೂರು : ಸನಾತನ ಸಂಸ್ಥೆಯ ಸಂಸ್ಥಾಪಕರಾದ ಪರಾತ್ಪರ ಗುರು ಡಾ. ಜಯಂತ ಆಠವಲೆಯವರ ಜನ್ಮೋತ್ಸವದ ಅಂಗವಾಗಿ ದೇಶದಲ್ಲೆಡೆ ಹಿಂದೂ ರಾಷ್ಟ್ರ ಜಾಗೃತಿ ಅಭಿಯಾನವನ್ನು ಹಮ್ಮಿಕೊಳ್ಳಲಾಗಿದ್ದು, ಮಂಗಳೂರಿನಲ್ಲಿ ಗುರುವಾರ ಹಿಂದೂ ಐಕ್ಯತಾ ಮೆರವಣಿಗೆ ನಡೆಯಿತು. ಬಲ್ಮಠದಲ್ಲಿ ಕದ್ರಿ ಕಾರ್ಪೊರೇಟರ್ ಶ್ರೀ ಮನೋಹರ ಶೆಟ್ಟಿ, ಇವರು ಧ್ವಜ ಪೂಜೆಯ ಮೂಲಕ ಐಕ್ಯತಾ ಮೆರವಣಿಗೆಗೆ ಚಾಲನೆ ನೀಡಿದರು.
ಸನಾತನ ಸಂಸ್ಥೆಯ ಸಂತರಾದ ಪೂಜನೀಯ ರಮಾನಂದ,ಪೂಜ್ಯ ವಿನಾಯಕ ಕರ್ವೆ,ಪೂಜ್ಯ ರಾಧಾ ಪ್ರಭು ಇವರು ಮಂಗಳಾದೇವಿ ಮತ್ತು ಸನಾತನ ಸಂಸ್ಥೆಯ ಸಂಸ್ಥಾಪಕರಾದ ಪರಮ ಪೂಜ್ಯ ಜಯಂತ ಆಠವಲೆಯವರ ಭಾವ ಚಿತ್ರಕ್ಕೆ ಆರತಿ ಬೆಳಗಿಸಿದರು.
ಈ ಮೆರವಣಿಗೆಯು ಬಂಟ್ಸ್ ಹಾಸ್ಟೆಲ್ ಮಾರ್ಗವಾಗಿ PVS ಮೂಲಕ ಮಂಗಳೂರು ಮಹಾನಗರ ಪಾಲಿಕೆಯ ಬಳಿಯಲ್ಲಿ ಸಭಾ ಕಾರ್ಯಕ್ರಮದೊಂದಿಗೆ ಸಂಪನ್ನಗೊಂಡಿತು. ಮೆರವಣಿಗೆಯಲ್ಲಿ ನಗರದ ಪ್ರಮುಖ ಸ್ಥಳಗಳಲ್ಲಿ ಸ್ವಸಂರಕ್ಷಣೆಯ ಮಹತ್ವ ತಿಳಿಸುವ ಲಾಠಿ, ನಾನ್ ಚಾಕು ಗಳ ಪ್ರದರ್ಶನ ಮತ್ತು ಭರತನಾಟ್ಯ ಮಾಡಿ ತೋರಿಸಲಾಯಿತು.
ಆಕರ್ಷಕ ಮೆರವಣಿಗೆ:
ವಾದ್ಯ ಮೇಳ, ಡಾ. ಜಯಂತ ಆಠವಲೆಯವರ ಭಾವಚಿತ್ರದ ಅಲಂಕೃತ ರಥ, ಮಂಗಳಾದೇವಿಯ ಭಾವಚಿತ್ರದ ಅಲಂಕೃತ ವಾಹನ, ಜಾಗೃತಿ ಭಿತ್ತಿ ಪತ್ರಗಳನ್ನು ಹಿಡಿದು ಘೋಷಣೆಗಳನ್ನು ನೀಡುವ ಮಹಿಳೆಯರು ಮೆರವಣಿಗೆಯ ವಿಶೇಷತೆಯಾಗಿತ್ತು. ವಿವಿಧ ಧಾರ್ಮಿಕ ಸಂಸ್ಥೆಗಳು, ಹಿಂದೂ ಸಂಘಟನೆಗಳು, ಭಜನಾ ಮಂಡಳಿಗಳ ಸದಸ್ಯರು ಮೆರವಣಿಗೆಯಲ್ಲಿ ಪಾಲ್ಗೊಂಡರು. ಮೆರವಣಿಗೆಯಲ್ಲಿ ಅನೇಕ ಭಜನಾ ಮಂಡಳಿ, ಕದ್ರಿ ಕಾರ್ಪೊರೇಟ್ ಮನೋಹರ್, ಪತಂಜಲಿ ಯೋಗಸಮಿತಿಯ ಶ್ರೀ ಜಗದೀಶ್ , ಹರೇ ರಾಮ, ಹರೇ ಕೃಷ್ಣ ರಾಧಾ ಗೋವಿಂದ ನಂತೂರು ತಂಡ, ಹಿಂದೂ ಮಹಾಸಭಾದ ಪ್ರೇಮನಾಥ ಪೊಳಲಿ ಮತ್ತಿತರ ಗಣ್ಯ ವ್ಯಕ್ತಿಗಳು ಹಾಗೂ ಹಿಂದೂ ಸಂಘಟನೆಗಳ ಘನ ಉಪಸ್ಥಿತಿಯಲ್ಲಿ ಮೆರವಣಿಗೆಯು ಜರುಗಿತು.
ಪರಾತ್ಪರ ಗುರು ಡಾ. ಆಠವಲೆಯವರ ಜನ್ಮದಿನದ ನಿಮಿತ್ತ ನಡೆದ ಈ ಕಾರ್ಯಕ್ರಮದಲ್ಲಿ ಪಾಲ್ಗೊಂಡು ನಾವು ಧನ್ಯರಾದೆವು ! – ಶ್ರೀ. ಮಧುಸೂದನ್ ಅಯ್ಯರ್
ಸಭಾ ಕಾರ್ಯಕ್ರಮದ ಮುಖ್ಯ ಅತಿಥಿಯಾಗಿ ಆಗಮಿಸಿದ್ದ ಪ್ರತಿಷ್ಠಿತ ಉದ್ಯಮಿಗಳಾದ ಮಧುಸೂದನ್ ಅಯ್ಯರ್ ಇವರು ಸನಾತನ ಸಂಸ್ಥೆಯು ಮಾಡುತ್ತಿರುವ ಧರ್ಮಪ್ರಸಾರ ಕಾರ್ಯಕ್ಕೆ ಅಭಿನಂದನೆಯನ್ನು ನೀಡಿದರು. ಅವರು ತಾನು ಉದ್ಯಮಿಯಾಗಿದ್ದರೂ ತನ್ನಿಂದ ಆಗುವಷ್ಟು ಸೇವೆ ಮಾಡುತ್ತಿದ್ದೇನೆ ಮತ್ತೆ ಅದೇ ರೀತಿ ಎಲ್ಲಾ ಹಿಂದೂ ಬಾಂಧವರು ಈ ಧರ್ಮಪ್ರಸಾರ ಕಾರ್ಯದಲ್ಲಿ ತಮ್ಮ ಕೈ ಜೋಡಿಸಲು ಕರೆ ನೀಡಿದರು.
ಹಿಂದೂ ರಾಷ್ಟ್ರದ ಸ್ಥಾಪನೆಗೆ ಹಿಂದೂ ಐಕ್ಯತೆಯೇ ಅವಶ್ಯಕ ! – ಶ್ರೀ. ಗುರುಪ್ರಸಾದ ಗೌಡ.
ಹೇಗೆ ಶಿವಾಜಿ ಮಹಾರಾಜರು ಸಾಧನೆಯ ಬಲದಿಂದ ಮೊಗಲರನ್ನು ಹಿಮ್ಮೆಟ್ಟಿ ಹಿಂದವೀ ಸ್ವರಾಜ್ಯ ಸ್ಥಾಪನೆ ಮಾಡಿದ್ದಾರೋ, ಪಾಂಡವರು ಭಗವಾನ್ ಶ್ರೀ ಕೃಷ್ಣ ನ ಸಹಾಯದಿಂದ ಧರ್ಮ ಸಂಸ್ಥಾಪನೆ ಮಾಡಿದ್ದಾರೋ ಅದೇ ರೀತಿಯಲ್ಲಿ ನಾವು ಸಾಧನೆಯನ್ನು ಮಾಡಿದರೆ ಮಾತ್ರ ಹಿಂದೂ ರಾಷ್ಟ್ರ ಸ್ಥಾಪನೆಯಲ್ಲಿ ಸಹಭಾಗ ನೀಡಬಹುದು. ಹಿಂದೂ ರಾಷ್ಟ್ರ ಸ್ಥಾಪನೆಯ ಸಂಕಲ್ಪನೆಗೆ ಎಲ್ಲರ ಸಹಭಾಗ ಅತೀ ಅವಶ್ಯಕ ಎಂದು ಉಪಸ್ಥಿತರಿಗೆ ತಿಳಿಸಿದರು.
ಸನಾತನ ಸಂಸ್ಥೆಯ ಗುರುಗಳಾದ ಪರಾತ್ಪರ ಗುರು ಡಾ. ಜಯಂತ ಬಾಲಾಜಿಯವರ ಕಾರ್ಯವು ಅದ್ವಿತೀಯವಾಗಿದೆ. – ಸೌ. ಲಕ್ಷ್ಮೀ ಪೈ
ಸನಾತನ ಸಂಸ್ಥೆಯ ಸಂಸ್ಥಾಪಕರಾದ ಡಾ. ಜಯಂತ ಬಾಲಾಜಿ ಆಠವಲೆಯವರ ವೈಶಿಷ್ಟ ಪೂರ್ಣ ವಿಚಾರ ಮತ್ತು ಅವರು ಹಿಂದೂ ರಾಷ್ಟ್ರ ಸ್ಥಾಪನೆಗೆ ಕಟಿಬದ್ಧರಾಗಿ ಹಿಂದೂಗಳಿಗೆ ಧರ್ಮಶಿಕ್ಷಣವನ್ನು ನೀಡುವ ಮೂಲಕ ಅತ್ಯಂತ ಅವಶ್ಯಕವಾದ ಕಾರ್ಯವನ್ನು ಮಾಡುತ್ತಿದ್ದಾರೆ ಎಂದು ತಿಳಿಸಿದರು.