ಮಂಗಳೂರು ರಾಮಕೃಷ್ಣ ಮಠಕ್ಕೆ 75 ಸಂವತ್ಸರಗಳು ; ಜೂನ್ 3 ಮತ್ತು 4ರಂದು ಅಮೃತ ಮಹೋತ್ಸವ ಕಾರ್ಯಕ್ರಮ – ಸ್ವಾಮಿ ಗೌತಮಾನಂದಜಿ, ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಭಾಗಿ – ಕಹಳೆ ನ್ಯೂಸ್
ಮಂಗಳೂರು: ನಗರದ ಮಂಗಳಾದೇವಿಯಲ್ಲಿರುವ ರಾಮಕೃಷ್ಣ ಮಠಕ್ಕೆ 75 ಸಂವತ್ಸರಗಳು ತುಂಬುತ್ತಿದ್ದು, ಅಮೃತ ಮಹೋತ್ಸವದ ಅಂಗವಾಗಿ ಜೂನ್ 3 ಮತ್ತು 4ರಂದು ಕಾರ್ಯಕ್ರಮ ಹಮ್ಮಿಕೊಳ್ಳಲಾಗಿದೆ ಎಂದು ಮಠದ ಸ್ವಾಮಿ ಜಿತಕಾಮಾನಂದಜಿ ತಿಳಿಸಿದರು.
ಸೋಮವಾರ ಇಲ್ಲಿ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ‘3ರಂದು ಬೆಳಿಗ್ಗೆ 6.30ಕ್ಕೆ ವಿಶೇಷ ಪೂಜೆ, ಹೋಮಹವನ, ಬೆಳಿಗ್ಗೆ 8.15ಕ್ಕೆ ಮಂಗಳಾದೇವಿ ದೇವಸ್ಥಾನದಲ್ಲಿ ವಿಶೇಷ ಪೂಜೆ ಸಲ್ಲಿಸಿದ ಬಳಿಕ, ಸ್ವಾಮಿ ಗೌತಮಾನಂದಜಿ ಮಹಾರಾಜರ ಸಾನ್ನಿಧ್ಯದಲ್ಲಿ ಭಕ್ತರ ಶೋಭಾಯಾತ್ರೆ ಮಠದವರೆಗೆ ನಡೆಯಲಿದೆ. 9.15ಕ್ಕೆ ಮಠದ ನೂತನ ಮಹಾದ್ವಾರದ ಲೋಕಾರ್ಪಣೆ ಜರುಗಲಿದೆ. 9.30ಕ್ಕೆ ‘ಅಮೃತ ಸದನ’ ಸ್ವಾಮಿ ವೀರೇಶ್ವರಾನಂದ ಸಾಧು ನಿವಾಸದ ಉದ್ಘಾಟನೆಯಾಗಲಿದೆ ಎಂದರು. 9.45ಕ್ಕೆ ಉದ್ದೇಶಿತ ಅಮೃತ ಭವನ ವಿವೇಕಾನಂದ ತರಬೇತಿ ಕೇಂದ್ರದ ಕಟ್ಟಡಕ್ಕೆ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಭೂಮಿಪೂಜೆ ಭಾಗವಹಿಸುವರು. ಉದ್ಯಮಿ ದಯಾನಂದ ಪೈ ಭಾಗಿಯಾಗುವರು. 10 ಗಂಟೆಗೆ ಅಮೃತ ಮಹೋತ್ಸವ ಹಾಗೂ ‘ಅಮೃತ ಸಂಗಮ’ ರಾಜ್ಯ ಮಟ್ಟದ ಎರಡು ದಿನಗಳ ಸಾಧು ಭಕ್ತ ಸಮ್ಮೇಳನ ನಡೆಯಲಿದೆ. ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಅಮೃತ ಮಹೋತ್ಸವ ಉದ್ಘಾಟಿಸುವರು. ರಾಮಕೃಷ್ಣ ಮಠದ ವಿಶ್ವಸ್ಥ ಸ್ವಾಮಿ ಮುಕ್ತಿದಾನಂದಜಿ ಉಪಸ್ಥಿತರಿರುವರು ಎಂದರು.
ರಾಮಕೃಷ್ಣ ಮಠದ ಅಮೃತ ಮಹೋತ್ಸವದ ಪ್ರಯುಕ್ತ ಅಂಚೆ ಇಲಾಖೆ ವಿಶೇಷ ಅಂಚೆ ಲಕೋಟೆಯನ್ನು ಹೊರತಂದಿದೆ. ಅದನ್ನು ಕರ್ನಾಟಕದ ಮುಖ್ಯ ಪೋಸ್ಟ್ ಮಾಸ್ಟರ್ ಜನರಲ್ ಎನ್. ರಾಜೇಂದ್ರ ಕುಮಾರ್ ಮಠಕ್ಕೆ ಹಸ್ತಾಂತರಿಸುವರು. ಮಠದ ಸ್ಮರಣ ಸಂಚಿಕೆಯನ್ನು ಸ್ವಾಮಿ ಮುಕ್ತಿದಾನಂದಜಿ, ಸಾಕ್ಷ್ಯಚಿತ್ರವನ್ನು ಡಾ. ಎನ್. ವಿನಯ ಹೆಗ್ಡೆ ಬಿಡುಗಡೆ ಮಾಡುವರು. ನೂತನ ವೆಬ್‌ಸೈಟ್ ಅನ್ನು ಸಂಸದ ನಳಿನ್‌ಕುಮಾರ್ ಕಟೀಲ್ ಲೋಕಾರ್ಪಣೆಗೊಳಿಸುವರು ಎಂದು ತಿಳಿಸಿದರು.
ಏಕಗಮ್ಯಾನಂದ ಸ್ವಾಮೀಜಿ, ಮೇಯರ್ ಪ್ರೇಮಾನಂದ ಶೆಟ್ಟಿ, ಮಂಗಳಾ ರಿಸೋರ್ಸ್ ಮ್ಯಾನೇಜ್‌ಮೆಂಟ್ ನಿರ್ದೇಶಕ ದಿಲ್‌ರಾಜ್ ಆಳ್ವ ಇದ್ದರು.
‘75 ಸನ್ಯಾಸಿಗಳು ಭಾಗಿ’
ಈ ಎರಡು ದಿನಗಳ ಕಾರ್ಯಕ್ರಮದಲ್ಲಿ ದೇಶದ ವಿವಿಧ ಭಾಗಗಳ ರಾಮಕೃಷ್ಣ ಮಠದ ಸುಮಾರು 75 ಸನ್ಯಾಸಿಗಳು ಹಾಗೂ ರಾಜ್ಯದ ಬೇರೆ ಬೇರೆ ಭಾಗಗಳ ಭಕ್ತರು ಭಾಗಿಯಾಗುವರು. ಅಮೃತ ಸಂಗಮ ಚಿಂತನ ಮಂಥನ ಕಾರ್ಯಕ್ರಮದಲ್ಲಿ 6 ಗೋಷ್ಠಿಗಳಿದ್ದು, 18 ಸ್ವಾಮೀಜಿಗಳು, ವಿದ್ವಾಂಸರು ಸರಳತೆಯ ಪರಿಕಲ್ಪನೆಯಲ್ಲಿ ತಮ್ಮ ವಿಚಾರಗಳನ್ನು ಮಂಡಿಸಲಿದ್ದಾರೆ ಎಂದು ಸ್ವಾಮಿ ಜಿತಕಾಮಾನಂದಜಿ ತಿಳಿಸಿದರು.