ಯುವಕಲಾವಿದೆ ಅದಿತಿ ಎಂಎಸ್ ಅವರ ಆನ್‍ಲೈನ್ ಚಿತ್ರ ತಾಣ ಉದ್ಘಾಟನೆ: ಹೆತ್ತವರ ಬೆಂಬಲವಿದ್ದಾಗ ಪ್ರತಿಭೆಗಳ ಅನಾವರಣ ಸಾಧ್ಯ : ಡಾ.ಎಚ್.ಮಾಧವ ಭಟ್ – ಕಹಳೆ ನ್ಯೂಸ್
ಪುತ್ತೂರು: ನಮ್ಮ ಮಕ್ಕಳು ಇಂತಹದ್ದನ್ನೇ ಓದಬೇಕು, ಇದೇ ರೀತಿ ಆಗಬೇಕು ಎಂಬ ಹೆತ್ತವರ ಸಂಕಲ್ಪಗಳಿಂದಾಗಿ ಮಕ್ಕಳಲ್ಲಿನ ಅನೇಕ ಪ್ರತಿಭೆಗಳು ಸದ್ದಿಲ್ಲದೆ ಸಾಯುತ್ತಿವೆ. ಪ್ರತಿಯೊಂದು ಮಗುವಿನಲ್ಲೂ ವಿಶಿಷ್ಟವಾದ ಪ್ರತಿಭೆ ಇದೆ ಎಂಬುದನ್ನು ಮನಗಂಡು ಅಂತಹ ಪ್ರತಿಭೆಗಳಿಗೆ ಅನುಕೂಲಕರವಾದ ವಾತಾವರಣವನ್ನು ಕಲ್ಪಿಸಿಕೊಡುವ ಹೆತ್ತವರು ದೊರಕಿದಾಗ ಹಲವು ಬಗೆಯ ಸಾಧನೆಗಳು ಸಾಕಾರಗೊಳ್ಳುವುದಕ್ಕೆ ಸಾಧ್ಯ ಎಂದು ಅಂಬಿಕಾ ಸಮೂಹ ಶಿಕ್ಷಣ ಸಂಸ್ಥೆಗಳ ಆಡಳಿತ ಮಂಡಳಿ ಸದಸ್ಯ ಡಾ.ಎಚ್.ಮಾಧವ ಭಟ್ ಹೇಳಿದರು.
ಅವರು ನಗರದ ದರ್ಬೆಯ ಶಾರದಾ ಕಲಾ ಕೇಂದ್ರ ಟ್ರಸ್ಟ್‍ನ ಸಭಾಂಗಣದಲ್ಲಿ ಅಂಬಿಕಾ ಪದವಿ ಕಾಲೇಜಿನ ವಿದ್ಯಾರ್ಥಿನಿ ಅದಿತಿ ಎಂ.ಎಸ್ ಅವರ ಚಿತ್ರಕಲಾ ವೀಕ್ಷಣಾ ಮತ್ತು ಮಾರಾಟದ ಆನ್‍ಲೈನ್ ತಾಣ msadithi.in ನ ಉದ್ಘಾಟನಾ ಸಮಾರಂಭದ ಮುಖ್ಯ ಅತಿಥಿಯಾಗಿ ಭಾಗವಹಿಸಿ ಮಾತನಾಡಿದರು.
ಕಲಾವಿದನಾದವನಲ್ಲಿ ವಿನಯವಂತಿಕೆ ಅತ್ಯಂತ ಅಗತ್ಯ. ತನ್ನ ಅತ್ಯುತ್ಕøಷ್ಟ ಸಾಧ್ಯತೆ ಇನ್ನಷ್ಟೇ ಬರಬೇಕಿದೆ ಎಂಬ ಭಾವನೆ ಸದಾ ಆತನಲ್ಲಿರಬೇಕು. ಅಂತಹ ಗುಣವೇ ಆತನನ್ನು ಉನ್ನತ ಮಟ್ಟಕ್ಕೆ ಒಯ್ಯುತ್ತದೆ. ಆದರೆ ತಾನೀಗಾಗಲೇ ಅದ್ಭುತವಾದದ್ದನ್ನು ನೀಡಿದ್ದೇನೆ ಎಂಬ ಭಾವ ಮೂಡಿದ ತಕ್ಷಣವೇ ಆತನ ಗುಣಮಟ್ಟ ಕುಸಿಯತೊಡಗುತ್ತದೆ. ಪುತ್ತೂರಿನ ಪ್ರತಿಭೆ ಅದಿತಿಯಲ್ಲಿ ಕಲಿಯುವ ವಿನಯ ಹಾಗೂ ಹಂಬಲ ಸಾಕಷ್ಟಿರುವುದೇ ಬೆಳೆಯುವ ಲಕ್ಷಣವಾಗಿ ಗೋಚರಿಸುತ್ತದೆ ಎಂದರು.
ಕಾರ್ಯಕ್ರಮವನ್ನು ಉದ್ಘಾಟಿಸಿದ ಯುವಗಾಯಕಿ ಅಖಿಲಾ ಪಜಿಮಣ್ಣು ಮಾತನಾಡಿ ಅದಿತಿ ಓರ್ವ ವಿಶಿಷ್ಟ ಪ್ರತಿಭೆ. ಆಕೆಯಲ್ಲಿ ಕಲೆಯ ಶಕ್ತಿ ಅಮೋಘವಾದದ್ದು. ಅದಿತಿ ರೂಪಿಸಿದ ಚಿತ್ರಗಳೇ ಆಕೆಯ ಗುಣಮಟ್ಟವನ್ನು ವಿಸ್ತರಿಸಿ ಹೇಳುತ್ತವೆ ಎಂದು ನುಡಿದರು.
ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ್ದ ಅಂಬಿಕಾ ಸಮೂಹ ಶಿಕ್ಷಣ ಸಂಸ್ಥೆಗಳ ಕಾರ್ಯದರ್ಶಿ ಸುಬ್ರಹ್ಮಣ್ಯ ನಟ್ಟೋಜ ಮಾತನಾಡಿ ಭಾರತದ ಶಕ್ತಿಯನ್ನು, ಸಾಂಸ್ಕøತಿಕ, ಕಲಾತ್ಮಕ ಹಿರಿಮೆಗಳನ್ನು ಪ್ರಾಪಂಚಿಕವಾಗಿ ತೆರೆದಿಡಬೇಕಾದ ಅಗತ್ಯವಿದೆ. ಪ್ರತಿಯೊಬ್ಬರೂ ಭಾರತದ ರಾಯಭಾರಿಗಳಾಗಿ ಕಾರ್ಯನಿರ್ವಹಿಉವಂತಹ ಅಗತ್ಯವಿದೆ. ಇಲ್ಲಿನ ಶ್ರೇಷ್ಟತೆ ಜಾಗತಿಕವಾಗಿ ಅರ್ಥ ಮಾಡಿಕೊಳ್ಳುವಂತಾಗಬೇಕು. ಆ ನೆಲೆಯಲ್ಲಿ ಆನ್ ಲೈನ್ ವೀಕ್ಷಣಾ ಮತ್ತು ಮಾರಾಟದ ವೆಬ್ ಸೈಟ್ ಒಂದು ಉತ್ತಮ ಮಾರ್ಗವಾಗಿ ಪರಿಣಮಿಸಲಿದೆ ಎಂದರು.
ಕಲಾವಿದೆ ಅದಿತಿ ಎಂ.ಎಸ್ ಸ್ವಾಗತಿಸಿ ಪ್ರಸ್ತಾವನೆಗೈದರು. ಹೆತ್ತವರಾದ ಸುಧಾಕರ್ ಎಂ.ಎಚ್ ವಂದಿಸಿ, ಸೋದರಿ ಅನನ್ಯಾ ಕಾರ್ಯಕ್ರಮ ನಿರ್ವಹಿಸಿದರು.
ಇಪ್ಪತ್ತೈದು ಸಾವಿರ ಪ್ರೋತ್ಸಾಹ ಧನ: ಅದಿತಿಯ ವೆಬ್ ಸೈಟ್ ವಿಸ್ತಾರವಾಗಿ ಬೆಳೆಯುವ ನೆಲೆಯಲ್ಲಿ ಸುಬ್ರಹಣ್ಯ ನಟ್ಟೋಜ ಅವರು ಇಪ್ಪತ್ತೈದು ಸಾವಿರ ಪ್ರೋತ್ಸಾಹ ಧನವನ್ನು ಘೋಷಿಸಿದರು. ಈ ವೆಬ್ ಸೈಟ್ ದೇಶವನ್ನು ವಿದೇಶಗಳೆದುರು ಧನಾತ್ಮಕವಾಗಿ ಬಿಂಬಿಸುವುದಕ್ಕೆ ಕಾರಣವಾಗುತ್ತದೆ. ಆದ್ದರಿಂದ ದೇಶಕ್ಕೆ ಒಳ್ಳೆಯ ಹೆಸರು ತರಬಹುದಾದ ಕಾರ್ಯ ಇದಾದ್ದರಿಂದ ಈ ಮೊತ್ತವನ್ನು ಘೋಷಿಸುತ್ತಿರುವುದಾಗಿ ತಿಳಿಸಿದರು.