Thursday, January 23, 2025
ದಕ್ಷಿಣ ಕನ್ನಡಪುತ್ತೂರುರಾಜಕೀಯರಾಜ್ಯಸುದ್ದಿ

ಗುಣರಂಜನ್ ಶೆಟ್ಟಿ ಹತ್ಯೆಗೆ ಸಂಚು ಪ್ರಕರಣ | ಮೆಲ್ಲ ಮೆಲ್ಲಗೆ ‘ ಮಲ್ಲಿ ‘ ಹೆಸರು ಮುನ್ನೆಲೆಗೆ…! ರೌಡಿ ಶೀಟರ್ ಪಟ್ಟಿಯಿಂದ ಮಲ್ಲಿ ನಾಟ್ ಔಟ್, ನೋ ಎಂದ ಹೈಕೋರ್ಟು..! – ಕಹಳೆ ನ್ಯೂಸ್

ಮಂಗಳೂರು/ ಪುತ್ತೂರು : ಭೂಗತ ಲೋಕದ ಮಾಜಿ ಡಾನ್, ಜಯಕರ್ನಾಟಕ ಸಂಘಟನೆಯ ಸಂಸ್ಥಾಪಕರಾದ ಪುತ್ತೂರು ಕೆಯ್ಯೂರಿನ ಎನ್. ಮುತ್ತಪ್ಪ ರೈಯವರ ಆಪ್ತರೂ, ಮುತ್ತಪ್ಪ ರೈಯವರ ಜೀವಿತದ ಕೊನೆಯ ಕಾಲದವರೆಗೂ ಅವರೊಂದಿಗೆ ಇದ್ದ ಗುಣರಂಜನ್ ಶೆಟ್ಟಿಯವರನ್ನು ಮುಗಿಸಲೇ ಬೇಕು ಎಂದು ಪಣ ತೊಟ್ಟಿರುವ ಗ್ಯಾಂಗ್ ಸ್ಟರ್ ಗಳು ಕೊಲೆಗೆ ಸಂಚು ರೂಪಿಸಿರುವುದನ್ನು ಪೊಲೀಸ್ ಅಧಿಕಾರಿಗಳು ಖಾತರಿ ಪಡಿಸಿದ್ದರು. ಬೆಂಗಳೂರಿನಲ್ಲಿ ಉದ್ಯಮಿಯಾಗಿ, ಸಮಾಜ ಸೇವಕನಾಗಿ, ಪರಿಸರವಾದಿಯಾಗಿ ಗುರುತಿಸಿಕೊಂಡಿರುವ ಗುಣರಂಜನ್ ಶೆಟ್ಟಿಯವರು ಈಗಾಗಲೇ ನಾಲ್ವರು ಅಂಗ ರಕ್ಷಕರನ್ನು ಹೊಂದಿದ್ದಾರೆ. ಖಾಸಗಿ ಏಜೆನ್ಸಿ ಮೂಲಕ ಭದ್ರತೆ ಪಡೆದುಕೊಂಡಿರುವ ಗುಣರಂಜನ್ ಶೆಟ್ಟಿಯವರಿಗೆ ಅನಿವಾರ್ಯವಾದರೆ ಪೊಲೀಸ್ ಇಲಾಖೆಯಿಂದಲೂ ಭದ್ರತೆ ನೀಡಲು ಅಧಿಕಾರಿಗಳು ಮುಂದಾಗಿದ್ದರಲ್ಲದೆ ಎಚ್ಚರಿಕೆಯಿಂದ ಇರುವಂತೆ ತಿಳಿಸಿದ್ದರು. ಇದುವರೆಗೆ ಯಾವುದೇ ಕ್ರಿಮಿನಲ್ ಚಟುವಟಿಕೆಯಲ್ಲಿ ಗುರುತಿಸಿಕೊಳ್ಳದ ಗುಣರಂಜನ್ ಶೆಟ್ಟಿಯವರನ್ನು ಯಾವ ಕಾರಣಕ್ಕೆ ಟಾರ್ಗೆಟ್ ಮಾಡಲಾಗಿದೆ ಎಂಬುದರ ಬಗ್ಗೆ ಪೊಲೀಸರು ಮಾಹಿತಿ ಕಲೆ ಹಾಕಿದ್ದರು. ಮುತ್ತಪ್ಪ ರೈಯವರು ಭೂಗತ ಜಗತ್ತಿನ ದೊರೆಯಾಗಿದ್ದಾಗ ಅವರ ಬಂಟನಾಗಿದ್ದ ರಾಕೇಶ್ ಮಲ್ಲಿಯವರು ಪಾತಕ ಪ್ರಪಂಚದಿಂದ ಹೊರ ಬಂದು ಹಲವು ವರ್ಷಗಳು ಸಂದಿದೆ. ಆ ಬಳಿಕ ಇಂಟಕ್, ಕಬಡ್ಡಿ ಅಸೋಸಿಯೇಶನ್ ಸಹಿತ ವಿವಿಧ ಸಂಘಟನೆಗಳ ಮೂಲಕ ಸಮಾಜ ಸೇವೆಯಲ್ಲಿ ತೊಡಗಿಸಿಕೊಂಡಿರುವ ಮಲ್ಲಿ ಕಳೆದ ವಿಧಾನಸಭಾ ಚುನಾವಣೆಯಲ್ಲಿ ಕುಂದಾಪುರ ವಿಧಾನಸಭಾ ಕ್ಷೇತ್ರದಲ್ಲಿ ಸ್ಪರ್ಧಿಸಿ ಪರಾಜಿತರಾಗಿದ್ದರೂ ಆ ಬಳಿಕ ಪಕ್ಷದಲ್ಲಿ ಪ್ರಭಾವಿಯಾಗಿದ್ದಾರೆ. ವೈಯುಕ್ತಿಕವಾಗಿ ಖಾಸಗಿ ಗನ್ ಮ್ಯಾನ್ ಗಳ ಬಿಗಿ ಭದ್ರತೆಯಲ್ಲಿದ್ದರೂ ಇಂಟಕ್ ಮೂಲಕ ಜನ ಸಾಮಾನ್ಯರ ಜತೆ ಬೆರೆಯುತ್ತಿರುವ ರಾಕೇಶ್ ಮಲ್ಲಿ ಸದ್ಯ ಯಾವುದೇ ಭೂಗತ ಚಟುವಟಿಕೆಯಲ್ಲಿ ತೊಡಗಿಸಿಕೊಂಡಿಲ್ಲ. ಆದರೂ ಅವರ ಹೆಸರು ಗುಣರಂಜನ್ ಅವರ ಹತ್ಯಾ ಸಂಚು ಪ್ರಕರಣದಲ್ಲಿ ಕೇಳಿಬಂದ ಹಿನ್ನೆಲೆಯಲ್ಲಿ ವಿಚಾರಣೆ ನಡೆಸಿ ಪೊಲೀಸ್ ಅಧಿಕಾರಿಗಳು ಮಾಹಿತಿ ಸಂಗ್ರಹಿಸಿದ್ದಾರೆ ಎಂದು ಮಾಹಿತಿ ಲಭ್ಯವಾಗಿದೆ.

ಮುತ್ತಪ್ಪ ರೈಯವರು ಉದ್ಯಮಿಯಾಗಿ, ಜಯಕರ್ನಾಟಕ ಸಂಘಟನೆಯ ಮೂಲಕ ಸಮಾಜ ಸೇವಕನಾಗಿ ಗುರುತಿಸಿಕೊಂಡಿದ್ದಾಗ ಅವರ ನಂಬಿಕಸ್ಥ ಶಿಷ್ಯ ರಾಕೇಶ್ ಮಲ್ಲಿಯವರು ಗುಣರಂಜನ್ ಶೆಟ್ಟಿಯವರಿಗೂ ಆಪ್ತರಾಗಿದ್ದರು. ಬಿ.ಸಿ.ರೋಡ್ ಸಮೀಪದ ಭೂ ವಿವಾದಕ್ಕೆ ಸಂಬಂಧಿಸಿ ಮುತ್ತಪ್ಪ ರೈ ಜತೆ ಮುನಿಸಿಕೊಂಡಿದ್ದ ರಾಕೇಶ್ ಮಲ್ಲಿ ಇದೀಗ ಗುಣರಂಜನ್ ಶೆಟ್ಟಿ ಹತ್ಯೆಗೆ ಸಂಚು ರೂಪಿಸಿದ್ದಾರೆ ಎಂದು ಹೇಳಲಾಗುತ್ತಿರುವುದು ಮಲ್ಲಿ ಮತ್ತು ಗುಣರಂಜನ್ ಆಪ್ತರಿಗೆ ದಿಗ್ಬ್ರಮೆ ಮೂಡಿಸಿದೆ. ಅಲ್ಲದೆ, ವಿವಿಧ ಮಾಧ್ಯಮಗಳಲ್ಲಿ ಚರ್ಚೆಗೆ ಕಾರಣವಾಗಿದೆ. ಮುತ್ತಪ್ಪ ರೈ ನಿಧನದ ಬಳಿಕ ಜಯಕರ್ನಾಟಕ ಸಂಘಟನೆ ಇಬ್ಬಾಗ ಆಗಿರುವುದು, ಭೂಗತ ದೊರೆಯ ಸ್ಥಾನಕ್ಕೆ ಪೈಪೋಟಿ ನಡೆಯುತ್ತಿರುವುದು, ವಿಶೇಷವಾಗಿ ಬೆಂಗಳೂರಿನಲ್ಲಿ ಮುತ್ತಪ್ಪ ರೈಯವರ ಉತ್ತರಾಧಿಕಾರಿ ಸ್ಥಾನಕ್ಕೆ ಹವಣಿಸುತ್ತಿರುವುದು, ಭೂಮಿ ಮತ್ತು ಹಣಕಾಸು ವ್ಯವಹಾರಗಳು ಈ ಬೆಳವಣಿಗೆಗಳಿಗೆ ಕಾರಣ ಎಂದು ಹೇಳಲಾಗುತ್ತಿದೆ.

ಜಾಹೀರಾತು
ಜಾಹೀರಾತು
ಜಾಹೀರಾತು

ಗುಣರಂಜನ್ ಅವರನ್ನು ಹತ್ಯೆ ಮಾಡಲು ಸ್ಕೆಚ್ ಹಾಕಿರುವ ಭೂಗತ ಪಾತಕಿಗಳ ತಂಡದಲ್ಲಿ ಪುತ್ತೂರು ಓಲೆಮುಂಡೋವು ನಿವಾಸಿಯಾಗಿದ್ದು ಪ್ರಸ್ತುತ ಥೈಲ್ಯಾಂಡ್‌ನಲ್ಲಿರುವ ಯುವ ಉದ್ಯಮಿ ಮನ್ಮಿತ್ ರೈಯವರ ಹೆಸರು ಕೇಳಿ ಬರುತ್ತಿದೆಯಾದರೂ ಅವರು ಇದನ್ನು ಈಗಾಗಲೇ ನಿರಾಕರಿಸಿದ್ದಾರೆ. ರಾಕೇಶ್ ಮಲ್ಲಿಯವರು ಪ್ರತಿಕ್ರಿಯೆಗೆ ಲಭ್ಯರಾಗಿಲ್ಲ.

ಜಾಹೀರಾತು
ಜಾಹೀರಾತು
ಜಾಹೀರಾತು

ರೌಡಿ ಶೀಟರ್ ಪಟ್ಟಿಯಿಂದ ಮಲ್ಲಿ ನಾಟ್ ಔಟ್, ನೋ ಎಂದ ಹೈಕೋರ್ಟು

ರಾಕೇಶ್ ಮಲ್ಲಿ ಅರ್ಜಿ ತಿರಸ್ಕರಿಸಿದ್ದ ಹೈಕೋರ್ಟ್

ತನ್ನನ್ನು ರೌಡಿ ಶೀಟರ್ ಪಟ್ಟಿಯಿಂದ ಕೈ ಬಿಡಬೇಕು ಎಂದು ಆಗ್ರಹಿಸಿ ರಾಕೇಶ್ ಮಲ್ಲಿ ಸಲ್ಲಿಸಿದ್ದ ಅರ್ಜಿಯನ್ನು ಹೈಕೋರ್ಟ್ ಇತ್ತೀಚೆಗಷ್ಟೇ ತಿರಸ್ಕರಿಸಿತ್ತು. ನಾನು ಯಾವುದೇ ಭೂಗತ ಚಟುವಟಿಕೆಯಲ್ಲಿ ಇಲ್ಲ, ಸದ್ಯ ನನ್ನ ವಿರುದ್ಧ ಯಾವುದೇ ಕ್ರಿಮಿನಲ್ ಕೇಸ್ ಇಲ್ಲ. ಆದರೂ ನನ್ನ ಹೆಸರು ರೌಡಿಶೀಟರ್ಸ್ ಪಟ್ಟಿಯಲ್ಲಿದೆ. ಆದ್ದರಿಂದ ರೌಡಿ ಶೀಟರ್ಸ್ ಪಟ್ಟಿಯಿಂದ ನನ್ನ ಹೆಸರು ತೆಗೆದು ಹಾಕಲು ಪೊಲೀಸ್ ಇಲಾಖೆಗೆ ಆದೇಶಿಸಬೇಕು ಎಂದು ರಾಕೇಶ್ ಮಲ್ಲಿ ಸಲ್ಲಿಸಿದ್ದ ಅರ್ಜಿಯನ್ನು ತಿರಸ್ಕರಿಸಿದ್ದ ಹೈಕೋರ್ಟ್, ಕ್ರಿಮಿನಲ್ ಕೃತ್ಯದಲ್ಲಿ ಇಲ್ಲದಿದ್ದರೂ, ಯಾವುದೇ ಕೇಸ್ ದಾಖಲು ಆಗದೇ ಇದ್ದರೂ ವ್ಯಕ್ತಿಯೊಬ್ಬನ ವಿರುದ್ಧ ರೌಡಿ ಶೀಟ್ ತೆರೆಯಬಹುದಾಗಿದೆ. ಗುಪ್ತಚರ ಇಲಾಖೆಯ ಮಾಹಿತಿ ಆಧಾರದಲ್ಲಿ ಅಥವಾ ಪೊಲೀಸ್ ಇಲಾಖೆಯವರು ಹೊಂದಿರುವ ಮಾಹಿತಿಯ ಆಧಾರದಲ್ಲಿ ವ್ಯಕ್ತಿಯೊಬ್ಬನ ವಿರುದ್ಧ ಕೇಸ್ ಇಲ್ಲದಿದ್ದರೂ ರೌಡಿಶೀಟ್ ತೆರೆಯಬಹುದು, ಆಕ್ಷೇಪ ಇದ್ದರೆ ಪೊಲೀಸ್ ಪ್ರಾಧಿಕಾರಕ್ಕೆ ಮೇಲ್ಮನವಿ ಸಲ್ಲಿಸಬಹುದು ಎಂದು ಹೇಳಿತ್ತು.