Friday, September 20, 2024
ದಕ್ಷಿಣ ಕನ್ನಡಪುತ್ತೂರುಸುದ್ದಿ

ಅಂಬಿಕಾ ಮಹಾವಿದ್ಯಾಲಯದ ಪತ್ರಿಕೋದ್ಯಮ ವಿಭಾಗದ ‘ಅನುಪಮ ಟಿವಿ’ ಲೋಕಾರ್ಪಣೆ : ಡಿಜಿಟಲ್ ಮಾಧ್ಯಮ ಸುದ್ದಿ ಪಸರಿಸುವಿಕೆಯಲ್ಲಿ ಪ್ರಮುಖ ಪಾತ್ರ ವಹಿಸುತ್ತಿದೆ : ಸಂಜೀವ ಮಠಂದೂರು – ಕಹಳೆ ನ್ಯೂಸ್

ಪುತ್ತೂರು: ಹಿಂದಿನ ದಿನಗಳಲ್ಲಿ ಪತ್ರಿಕೆಗಳು ಮಾಹಿತಿ ವಿನಿಮಯದ ಮಾಧ್ಯಮವಾಗಿದ್ದರೆ ಇಂದು ಡಿಜಿಟಲ್ ಯುಗಕ್ಕೆ ನಾವು ಅಡಿಯಿಟ್ಟಿದ್ದೇವೆ. ಹಾಗಾಗಿ ನಮ್ಮ ಮೊಬೈಲ್‍ಗಳಲ್ಲೇ ನಮಗೆ ಪತ್ರಿಕಾ ವರದಿ, ಟಿವಿ ಕಾರ್ಯಕ್ರಮಗಳನ್ನು ವೀಕ್ಷಿಸುವುದಕ್ಕೆ ಸಾಧ್ಯವಾಗಿದೆ. ಅಲ್ಲದೆ ಅಸಂಖ್ಯ ಜನರನ್ನು ತಲುಪುವ ಸಾಧ್ಯತೆಯನ್ನು ಇಂದಿನ ಮಾಧ್ಯಮ ಜಗತ್ತು ಸಾಧಿಸಿ ತೋರಿಸಿದೆ ಎಂದು ಪುತ್ತೂರಿನ ಶಾಸಕ ಸಂಜೀವ ಮಠಂದೂರು ಹೇಳಿದರು.

ಅವರು ನಗರದ ನಟ್ಟೋಜ ಪೌಂಢೇಶನ್ ಟ್ರಸ್ಟ್ ಮುನ್ನಡೆಸುತ್ತಿರುವ ಅಂಬಿಕಾ ಮಹಾವಿದ್ಯಾಲಯದ ಪತ್ರಿಕೋದ್ಯಮ ವಿಭಾಗವು ರೂಪಿಸಿದ ‘ಅನುಪಮ ಟಿವಿ ಎಂಬ ಯೂಟ್ಯೂಬ್ ವಾಹಿನಿಯನ್ನು ಬಪ್ಪಳಿಗೆಯ ಅಂಬಿಕಾ ಪದವಿಪೂರ್ವ ವಿದ್ಯಾಲಯದಲ್ಲಿ ಉದ್ಘಾಟಿಸಿ ಗುರುವಾರ ಮಾತನಾಡಿದರು.

ಜಾಹೀರಾತು
ಜಾಹೀರಾತು
ಜಾಹೀರಾತು

ಪ್ರಜಾಪ್ರಭುತ್ವ ವ್ಯವಸ್ಥೆಯ ನಾಲ್ಕನೇಯ ಅಂಗ ಪತ್ರಿಕೋದ್ಯಮವಾಗಿದೆ. ಸಾರ್ವಜನಿಕವಾಗಿ ಪತ್ರಿಕೋದ್ಯಮವು ಪ್ರಭಾವಶಾಲಿ ಮಾಧ್ಯಮವಾಗಿದೆ. ಇಂತಹ ಪತ್ರಿಕೋದ್ಯಮ ಸಮಾಜವನ್ನು ಪರಿವರ್ತನೆಗೊಳಿಸಬೇಕು. ತನ್ಮೂಲಕ ನಮ್ಮ ರಾಷ್ಟ್ರವು ಮತ್ತೊಮ್ಮೆ ಪರಮವೈಭವವನ್ನು ಕಾಣುವಂತಾಗಬೇಕು. ಭಾರತದ ಸಂಸ್ಕ್ರತಿಯನ್ನು ಜಗತ್ತು ಗೌರವಿಸಿ ಅಳವಡಿಸುವಂತಾಗುವಲ್ಲಿ ಮಾಧ್ಯಮದ ಪಾತ್ರ ಬಹಳಷ್ಟಿದೆ ಎಂದು ನುಡಿದರು.

ಜಾಹೀರಾತು

ಪ್ರಸ್ತಾವನೆಗೈದ ಪತ್ರಿಕೋದ್ಯಮ ವಿಭಾಗದ ಮುಖ್ಯಸ್ಥ ರಾಕೇಶ ಕುಮಾರ್ ಕಮ್ಮಜೆ ಮಾತನಾಡಿ ಪತ್ರಿಕೋದ್ಯಮ ವಿದ್ಯಾರ್ಥಿಗಳು ಸಾಕಷ್ಟು ಅನುಭವವನ್ನು ಹೊಂದಿಯೇ ಮಾಧ್ಯಮ ಲೋಕಕ್ಕೆ ಅಡಿಯಿಟ್ಟರೆ ಔದ್ಯೋಗಿಕ ಜೀವನ ಸುಲಭಸಾಧ್ಯವಾಗುತ್ತದೆ. ಪತ್ರಿಕೋದ್ಯಮ ವಿದ್ಯಾರ್ಥಿಗೆ ಕಾಲೇಜಿನಲ್ಲಿ ಕೇವಲ ಕ್ಲಾಸ್ ರೂಂ ಅನುಭವ ದೊರೆತರೆ ಸಾಲದು ಬದಲಾಗಿ ನ್ಯೂಸ್ ರೂಂ ಅನುಭವವೂ ದೊರಕುವಂತಾಗಬೇಕು. ಆ ನೆಲೆಯಲ್ಲಿ ಪ್ರಾಯೋಗಿಕ ಪತ್ರಿಕೆ ಹಾಗೂ ಟೂಟ್ಯೂಬ್ ವಾಹಿನಿಗಳು ಅನುಕೂಲ ಮಾಡಿಕೊಡುತ್ತವೆ ಎಂದರು. ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ್ದ ಅಂಬಿಕಾ ಸಮೂಹ ಶಿಕ್ಷಣ ಸಂಸ್ಥೆಗಳ ಕಾರ್ಯದರ್ಶಿ ಸುಬ್ರಹ್ಮಣ್ಯ ನಟ್ಟೋಜ ಮಾತನಾಡಿ, ನ್ಯಾಯಕ್ಕಾಗಿ ಹಾಗೂ ಅನ್ಯಾಯದ ವಿರುದ್ಧ ಹೋರಾಡುವ ಪತ್ರಕರ್ತರು ಸಿದ್ಧರಾಗಬೇಕಿದೆ. ನಿರ್ಭೀತವಾಗಿ ಅನ್ಯಾಯವನ್ನು ಎದುರಿಸಿ, ಸಮಾಜವನ್ನು ಜಾಗೃತ ಪಥದಲ್ಲಿ ಕೊಂಡೊಯ್ಯುವ ಕಾರ್ಯ ಇಂದು ಪತ್ರಕರ್ತರಿಂದ ನಡೆಯಬೇಕಿದೆ. ರಾಷ್ಟ್ರಕ್ಕಾಗಿ ಸರ್ವವನ್ನೂ ಅರ್ಪಿಸುವ ದೇಶಭಕ್ತ ಪತ್ರಕರ್ತರ ಅಗತ್ಯತೆ ಭಾರತಕ್ಕಿದೆ ಎಂದರು.

ಕಾರ್ಯಕ್ರಮದಲ್ಲಿ ಅಂಬಿಕಾ ಸಮೂಹ ಶಿಕ್ಷಣ ಸಂಸ್ಥೆಗಳ ಕೋಶಾಧಿಕಾರಿ ರಾಜಶ್ರೀ ನಟ್ಟೋಜ ಉಪಸ್ಥಿತರಿದ್ದರು. ಕಾಲೇಜಿನ ವಿದ್ಯಾರ್ಥಿನಿಯರಾದ ಪಂಚಮಿ ಹಾಗೂ ಅಂಕಿತ ಪ್ರಾರ್ಥಿಸಿ, ಕಾಲೇಜಿನ ಪ್ರಾಚಾರ್ಯ ಡಾ.ವಿನಾಯಕ ಭಟ್ಟ ಗಾಳಿಮನೆ ಸ್ವಾಗತಿಸಿದರು.

ಅಂಬಿಕಾ ಸಮೂಹ ಶಿಕ್ಷಣ ಸಂಸ್ಥೆಗಳ ಆಡಳಿತಾಧಿಕಾರಿ ಗಣೇಶ್ ಪ್ರಸಾದ್ ಎ ವಂದಿಸಿ, ಕಾಲೇಜಿನ ಕನ್ನಡ ವಿಭಾಗ ಮುಖ್ಯಸ್ಥ ಗಿರೀಶ್ ಭಟ್ ಕಾರ್ಯಕ್ರಮ ನಿರ್ವಹಿಸಿದರು.