ವಿವೇಕಾನಂದ ಕಾಲೇಜಿನಲ್ಲಿ ‘ಎಂಟಪ್ರ್ರೈನೆರ್ಷಿಪ್- ಅ ಕ್ಯಾರೀರ್ ಚೊಯ್ಸ್ ಕಾರ್ಯಾಗಾರ: ಸ್ಪಷ್ಟ ಗುರಿಯಿದ್ದಾಗ ಸಾಧನೆಯ ಹಾದಿ ತಲುಪಲು ಸಾಧ್ಯ: ಸುಹಾಸ್ ಮರಿಕೆ – ಕಹಳೆ ನ್ಯೂಸ್
ಪುತ್ತೂರು : ಜೀವನದಲ್ಲಿ ಮುಂದಾಲೋಚನೆ ಅತೀ ಅಗತ್ಯ. ಯಾವುದೇ ವೃತ್ತಿಯನ್ನು ಆಯ್ಕೆಮಾಡುವಾಗ ನಿರ್ದಿಷ್ಟ ಗುರಿಯನ್ನು ಇಟ್ಟುಕೊಂಡು ಮುನ್ನಡೆಯಬೇಕು, ದೃಢಸಂಕಲ್ಪ ಮತ್ತು ಆತ್ಮವಿಶ್ವಾಸ ಸ್ವ ಉದ್ಯಮದ ಯಶಸ್ಸಿನ ಸೂತ್ರಗಳು. ವೃತ್ತಿಯನ್ನು ಆಸಕ್ತಿಯಿಂದ ನಿರ್ವಹಿಸಿದಾಗ ಮಾಡಿದ ಕೆಲಸದಲ್ಲಿ ತೃಪ್ತಿ ಸಿಗುತ್ತದೆ. ಸಮಯ ಪಾಲನೆ ಮತ್ತು ಪರಿಶ್ರಮದ ಮುಖೇನ ಯಶಸ್ಸು ದೊರಯುತ್ತದೆ. ಉದ್ಯೋಗವನ್ನು ಹಿಂಬಾಲಿಸುವ ಬದಲು ಸ್ವ-ಉದ್ಯಮದ ಹಾದಿ ಹಿಡಿದರೆ ಉತ್ತಮ ಉದ್ಯಮದಾರರಾಗಿ ಉದಯಿಸಬಹುದು ಎಂದು ಮರಿಕೆ ನ್ಯಾಚುರಲ್ ಐಸ್‍ಕ್ರೀಮ್ ಸಂಸ್ಥೆಯ ಮಾಲೀಕ ಸುಹಾಸ್ ಮರಿಕೆ ಹೇಳಿದರು.
ಅವರು ಇಲ್ಲಿನ ವಿವೇಕಾನಂದ ಕಾಲೇಜಿನ ಸ್ನಾತಕೋತ್ತರ ವಾಣಿಜ್ಯ ವಿಭಾಗ ಮತ್ತು ಐಕ್ಯೂಎಸಿ ಘಟಕದ ಸಹಯೋಗದಲ್ಲಿ ಆಯೋಜಿಸಲಾದ ‘ಎಂಟಪ್ರ್ರೈನೆರ್ಷಿಪ್- ಅ ಕ್ಯಾರೀರ್ ಚೊಯ್ಸ್ ಕಾರ್ಯಾಗಾರದಲ್ಲಿ ಸಂಪನ್ಮೂಲ ವ್ಯಕ್ತಿಯಾಗಿ ಆಗಮಿಸಿ ಮಾತನಾಡಿದರು.
ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ್ದ ಸ್ನಾತಕೋತ್ತರ ವಾಣಿಜ್ಯ ವಿಭಾಗದ ಮುಖ್ಯಸ್ಥೆ ಡಾ. ವಿಜಯ ಸರಸ್ವತಿ ಮಾತನಾಡಿ, ವ್ಯಾಪಾರದಲ್ಲಿ ಯಶಸ್ಸು ಸಿಗಬೇಕಾದರೆ ಜನರ ಪ್ರೋತ್ಸಾಹ ಮುಖ್ಯ. ಯಾವುದೇ ಉದ್ಯಮದ ಯಶಸ್ಸನ್ನು ನಿರ್ಧರಿಸುವುದು ಗ್ರಾಹಕರೇ ಆಗಿರುತ್ತಾರೆ ಹೀಗಾಗಿ ಸ್ವ ಉದ್ಯಮದಲ್ಲಿ ಸಾಧನೆಗೆ ಹೆಜ್ಜೆ ಇಟ್ಟವರು ಜನರ ಮನಸ್ಸು ಗೆಲ್ಲುವ ಪ್ರಯತ್ನ ಮಾಡಬೇಕು ಎಂದರು. ವೇದಿಕೆಯಲ್ಲಿ ವಿದ್ಯಾರ್ಥಿನಿ ಅಕ್ಷತಾ ಉಪಸ್ಥಿತರಿದ್ದರು. ವಿದ್ಯಾರ್ಥಿನಿಯರಾದ ರೂಪ, ಅನುಶ್ರೀ ಪ್ರಾರ್ಥಿಸಿ, ಮಂಜುಳಾ ಸ್ವಾಗತಿಸಿ, ಅನನ್ಯಶ್ರೀ ವಂದಿಸಿದರು. ಮನೋಜ್ ಕುಮಾರ್ ಕಾರ್ಯಕ್ರಮ ನಿರೂಪಿಸಿದರು.