ಕಲ್ಲಡ್ಕ ಶ್ರೀರಾಮ ಹಿರಿಯ ಪ್ರಾಥಮಿಕ ಶಾಲೆಯಲ್ಲಿ 2022-23 ನೇ ಶೈಕ್ಷಣಿಕ ವರ್ಷದಲ್ಲಿ ನೂತನವಾಗಿ ಸೇರಿದ ವಿದ್ಯಾರ್ಥಿಗಳ ಪ್ರವೇಶೋತ್ಸವ ಕಾರ್ಯಕ್ರಮ – ಕಹಳೆ ನ್ಯೂಸ್
ಕಲ್ಲಡ್ಕ : ಶ್ರೀರಾಮ ಹಿರಿಯ ಪ್ರಾಥಮಿಕ ಶಾಲೆಯ ವೇದವ್ಯಾಸ ಧ್ಯಾನಮಂದಿರದಲ್ಲಿ 2022-23 ನೇ ಶೈಕ್ಷಣಿಕ ವರ್ಷದಲ್ಲಿ ನೂತನವಾಗಿ ಸೇರಿದ ವಿದ್ಯಾರ್ಥಿಗಳ ಪ್ರವೇಶೋತ್ಸವ ಕಾರ್ಯಕ್ರಮ ನಡೆಯಿತು.
ಕಾರ್ಯಕ್ರಮದಲ್ಲಿ ಪುತ್ತೂರು ವಿವೇಕಾನಂದ ವಿದ್ಯಾವರ್ಧಕ ಸಂಘದ ಅಧ್ಯಕ್ಷರಾದ ಡಾ| ಪ್ರಭಾಕರ್ ಭಟ್ ಕಲ್ಲಡ್ಕ ತಮ್ಮ ಪ್ರಾಸ್ತಾವಿಕ ನುಡಿಗಳನ್ನಾಡುತ್ತಾ, ಶಾಲೆಯ ಸ್ಥಾಪನೆ, ಬೆಳವಣಿಗೆಯ ಬಗ್ಗೆ ತಿಳಿಸುತ್ತಾ, “42 ವರ್ಷಗಳ ಹಿಂದೆ ಬಿತ್ತಿದ ಶಿಕ್ಷಣದ ಬೀಜ ಇಂದು ಬೃಹದಾಕಾರವಾಗಿ ಬೆಳೆದು ನಿಂತ ಶ್ರೀರಾಮ ವಿದ್ಯಾಕೇಂದ್ರದಲ್ಲಿ 3500ಕ್ಕೂ ಹೆಚ್ಚು ವಿದ್ಯಾರ್ಥಿಗಳನ್ನು ಒಳಗೊಂಡು ಈ ಮಟ್ಟಕ್ಕೆ ಬೆಳೆದು ನಿಂತಿದೆ. ಮಾತೃಭಾಷೆಯಲ್ಲಿ ಶಿಕ್ಷಣ ದೊರೆತಾಗ ವಿದ್ಯಾರ್ಥಿಗಳು ಹೆಚ್ಚು ಅರ್ಥೈಸಿಕೊಳ್ಳುವ ಜೊತೆಗೆ, ನಮ್ಮ ಸಂಸ್ಕೃತಿ, ಧರ್ಮ, ಜೀವನ ಮೌಲ್ಯಗಳನ್ನು ಬಲು ಸುಲಭವಾಗಿ ಅರ್ಥಮಾಡಿಕೊಳ್ಳುತ್ತಾರೆ. ನಾನು ಎಂಬ ಅಹಂನ್ನು ತೊಡೆದು ಹಾಕಿ ನಾವು, ನಾವೆಲ್ಲರೂ ಎಂಬ ಭಾವನೆಯನ್ನು ಬೆಳೆಸುವ ಕಾರ್ಯವನ್ನು ಈ ಸಂಸ್ಥೆ ಮಾಡುತ್ತಿದೆ. ವಿದ್ಯಾರ್ಥಿಗಳು ಸಂಸ್ಕಾರ, ಆಧ್ಯಾತ್ಮ ಚಿಂತನೆಯ ಜೊತೆಜೊತೆಗೆ ಜಗತ್ತಿನ ಆಧುನಿಕ ಸವಾಲುಗಳನ್ನು ಎದುರಿಸಲು ಪೂರಕವಾದ ವಿಜ್ಞಾನ ಪ್ರಾಯೋಗಿಕ ತರಗತಿ ಮತ್ತು ಕಂಪ್ಯೂಟರ್ ಲ್ಯಾಬ್‌ನ್ನು ಹೊಂದಿದೆ. ಶ್ರೀರಾಮ ಶಾಲೆಯು ರಾಜ್ಯದಲ್ಲಿ ಕನ್ನಡ ಮಾಧ್ಯಮದಲ್ಲಿಯೇ ಅತೀ ಹೆಚ್ಚು ವಿದ್ಯಾರ್ಥಿಗಳನ್ನು ಹೊಂದಿರುವ ಏಕೈಕ ಶಾಲೆ ಎಂಬ ಹೆಗ್ಗಳಿಕೆಗೆ ಪಾತ್ರವಾಗಿದೆ.” ಎಂದು ಹೇಳಿದರು.
ಕಾರ್ಯಕ್ರಮದ ಮೊದಲಿಗೆ ಅತಿಥಿಗಳು ದೀಪಪ್ರಜ್ವಲನೆ ಮತ್ತು ಭಾರತ ಮಾತೆಗೆ ಪುಷ್ಪಾರ್ಚನೆ ಮಾಡಿದರು. ದಕ್ಷಿಣ ಕನ್ನಡ ಜಿಲ್ಲಾ ಪಂಚಾಯತ್‌ನ ಕಾರ್ಯ ನಿರ್ವಹಣಾಧಿಕಾರಿ ಡಾ| ಕುಮಾರ್ ಮಾತನಾಡುತ್ತಾ, “ಇಂದಿನ ಪೀಳಿಗೆಗೆ ನೈತಿಕ ಹಾಗೂ ಮೌಲ್ಯಧಾರಿತ ಶಿಕ್ಷಣದ ಅಗತ್ಯವಿದೆ. ಇಂತಹ ಶಿಕ್ಷಣ ನೀಡಿ ಮಕ್ಕಳನ್ನು ಸತ್ಪçಜೆಯಾಗಿ ಬೆಳೆಸುವ ಕಾರ್ಯದಲ್ಲಿ ತೊಡಗಿರುವುದು ಸಂತಸ ತಂದಿದೆ. ಅಂಕಪಟ್ಟಿಯ ಅಂಕಗಳಿಗಿAತ ಜೀವನದ ಅಂಕ ಉತ್ತಮವಾಗಿರಬೇಕು. ಜೀವನ ಎನ್ನುವುದು ಸ್ಪರ್ಧೆ, ಆ ಸ್ಪರ್ಧೆಯಲ್ಲಿ ನಮ್ಮ ಜೀವನ ಹೇಗೆ ಕಟ್ಟಿಕೊಳ್ಳುತ್ತೇವೆ ಹಾಗೂ ಸಮಾಜಕ್ಕೆ ಆದರ್ಶ ವ್ಯಕ್ತಿಗಳಾಗಿ ಕಲಿಸಿಕೊಡುವುದೇ ಶಿಕ್ಷಣ. ಮಕ್ಕಳಲ್ಲಿ ಭಕ್ತಿ, ಶ್ರದ್ಧೆ, ವಿನಯತೆ, ರಾಷ್ಟçದ ಬಗ್ಗೆ ಒಳ್ಳೆಯ ಭಾವನೆ ಇವೆಲ್ಲವೂ ತುಂಬಾ ಮುಖ್ಯ. ನಂಬಿಕೆ ಶಿಕ್ಷಣದ ಒಂದು ಭಾಗವಾಗಬೇಕು. ನಂಬಿಕೆ ಇಲ್ಲದ ಶಿಕ್ಷಣ, ಶಿಕ್ಷಣವೇ ಅಲ್ಲ. ವ್ಯಕ್ತಿಯೊಬ್ಬ ಎತ್ತರವನಾಗುವುದು ಮುಖ್ಯವಲ್ಲ, ಸಮಾಜಕ್ಕೆ ಮತ್ತು ಆತನ ಕುಟುಂಬಕ್ಕೆ ಹತ್ತಿರದವನಾಗಬೇಕು. ಅವನು ನಿಜವಾಗಿ ಸತ್ಪçಜೆಯಾಗಲು ಸಾಧ್ಯ. ದಾನದಲ್ಲಿ ಶ್ರೇಷ್ಟ ದಾನ ವಿದ್ಯಾದಾನ. ವಿದ್ಯಾದಾನದಿಂದ ಬದುಕಿನ ಹಸಿವನ್ನು ನೀಗಿಸಬಹುದು. ದೇಶದ ಹಿತವನ್ನು ಕಾಪಾಡುವ, ದೇಶಭಕ್ತಿಯನ್ನು ಹೆಚ್ಚಿಸುವ, ಆರೋಗ್ಯಕರ ಸಮಾಜ ನಿರ್ಮಿಸುವ ಮೌಲ್ಯಧಾರಿತ ಶಿಕ್ಷಣ ನೀಡುತ್ತಿರುವ ಶ್ರೀರಾಮ ವಿದ್ಯಾಸಂಸ್ಥೆಯ ಬಗ್ಗೆ ಹೆಮ್ಮೆಯಿದೆ.” ಎಂದರು
ನ0ತರ ಭವಿಷ್ಯದ ದಿಟ್ಟ ಭರವಸೆಯೊಂದಿಗೆ ಪುಟ್ಟ ಹೆಜ್ಜೆಗಳನ್ನಿಟ್ಟು ಶಾಲೆಯತ್ತ ಬಂದ 1ನೇ ತರಗತಿಯ ಪುಟಾಣಿಗಳನ್ನು ಅಧ್ಯಾಪಕ ವೃಂದದವರು ಪೂರ್ಣಕುಂಭ ಸ್ವಾಗತದೊಂದಿಗೆ ಕರೆತಂದರು. ನಂತರ ನೂತನವಾಗಿ ಸೇರಿದ ವಿದ್ಯಾರ್ಥಿಗಳಿಗೆ ಅಧ್ಯಾಪಕ ವೃಂದದವರು ಆರತಿ ಬೆಳಗಿ, ಅಕ್ಷತೆ ಹಾಕಿ, ತಿಲಕವನ್ನಿಟ್ಟು, ಮಧುವ ತಿನ್ನಿಸಿ ಬಾಳು ಬೆಳಕಾಗಲಿ ಎಂದು ಆಶೀರ್ವದಿಸಿದರು.
ಕಾರ್ಯಕ್ರಮದ ಮುಂದಕ್ಕೆ ಅತಿಥಿ ಗಣ್ಯರು ಅಗ್ನಿ ಪ್ರಜ್ವಲನೆ ಮಾಡಿ ಘೃತಾಹುತಿ ಮಾಡಿದರು. ನಂತರ ಹೊಸದಾಗಿ ಸೇರಿದ ವಿದ್ಯಾರ್ಥಿಗಳಿಂದ ಘೃತಾಹುತಿ ನಡೆಯಿತು. ಈ ಸಂದರ್ಭದಲ್ಲಿ ವಿದ್ಯಾರ್ಥಿಗಳಾದ ಅಕ್ಷತಾಲಕ್ಷ್ಮೀ, ಚಿನ್ಮಯಿ, ತ್ರಿಶಾ, ಪ್ರೇರಣಾ, ಶ್ರಮಿಕಾ, ಗೌತಮ್ ಮತ್ತು ಆದಿತ್ಯ ವೇದಮಂತ್ರ ಪಠಿಸಿದರು.
ವೇದಿಕೆಯಲ್ಲಿ ಉಪ್ಪಿನಂಗಡಿ ಶ್ರೀರಾಮ ಮತ್ತು ಇಂದ್ರಪ್ರಸ್ಥ ವಿದ್ಯಾಸಂಸ್ಥೆಯ ಸಂಚಾಲಕ ಯು.ಜಿ. ರಾಧ, ಹೈದರಾಬಾದ್ ಮೆಡಿಹಾಕ್ಸ್ ಪ್ರೈವೇಟ್ ಲಿಮಿಟೆಡ್‌ನ ವ್ಯವಸ್ಥಾಪಕ ನಿರ್ದೇಶಕ ಗಿರೀಶ್ ಭಟ್, ನಿದೇರ್ಶಕ ಮನೋಹರ್, ಪುತ್ತೂರು ಸಹಾಯಕ ಆಯುಕ್ತರಾದ ಗಿರೀಶ್ ನಂದನ್, ಉಪ್ಪಿನಂಗಡಿ ಶ್ರೀರಾಮ ಶಾಲೆಯ ಆಡಳಿತ ಮಂಡಳಿಯ ಸದಸ್ಯ ಸುಧೀರ್ ಟಿ.ಎಸ್, ಶ್ರೀರಾಜ್ ಗೋಪಾಲ್ ಉಡುಪಿ, ಕಲ್ಲಡ್ಕ ಶ್ರೀರಾಮ ವಿದ್ಯಾಕೇಂದ್ರದ ಅಧ್ಯಕ್ಷ ನಾರಾಯಣ ಸೋಮಯಾಜಿ, ಸಂಚಾಲಕ ವಸಂತ ಮಾಧವ, ಸಹಸಂಚಾಲಕರಾದ ರಮೇಶ್ ಎನ್, ರಾಷ್ಟç ಸೇವಿಕಾ ಸಮಿತಿಯ ಕಾರ್ಯಕಾರಿಣಿ ಸದಸ್ಯೆ ಡಾ| ಕಮಲಾ ಪ್ರಭಾಕರ್ ಭಟ್ ಹಾಗೂ ಮುಖ್ಯೋಪಾಧ್ಯಾಯರಾದ ರವಿರಾಜ್ ಕಣಂತೂರು ಉಪಸ್ಥಿತರಿದ್ದರು. ಕಾರ್ಯಕ್ರಮವನ್ನು ವಿದ್ಯಾರ್ಥಿಗಳಾದ ಅಂಕಿತ ಸ್ವಾಗತಿಸಿ, ರಮ್ಯ ಭಟ್ ನಿರೂಪಿಸಿ, ಆಕಾಶ್ ಕೆ ವಂದಿಸಿದನು