‘ ಸುಂದರ್ ನಗರದ ಫ್ಲಾಟ್‍ಗೆ ಕರೆದೊಯ್ದು ಒಪ್ಪಿಗೆಯಿಲ್ಲದೆ ದಲಿತ ಮಹಿಳೆಯ ಮೇಲೆ ಅತ್ಯಾಚಾರ ‘ ; ಕಾಂಗ್ರೆಸ್ ಮುಖ್ಯಸ್ಥೆ ಸೋನಿಯಾ ಗಾಂಧಿ ಆಪ್ತ ಸಹಾಯಕನ ವಿರುದ್ಧ ಲೈಂಗಿಕ ದೌರ್ಜನ್ಯ ಮತ್ತು ಅತ್ಯಾಚಾರ ಪ್ರಕರಣ ದಾಖಲು – ಕಹಳೆ ನ್ಯೂಸ್
ನವದೆಹಲಿ: ಕಾಂಗ್ರೆಸ್ ಮುಖ್ಯಸ್ಥೆ ಸೋನಿಯಾ ಗಾಂಧಿ ಅವರ ಆಪ್ತ ಸಹಾಯಕನ ವಿರುದ್ಧ ಪೊಲೀಸರು ಅತ್ಯಾಚಾರ ಪ್ರಕರಣ ದಾಖಲಿಸಿಕೊಂಡಿದ್ದಾರೆ.
ಮಹಿಳೆಯೊಬ್ಬರ ದೂರಿನ ಮೇರೆಗೆ ಸೋನಿಯಾ ಗಾಂಧಿ ಅವರ ಆಪ್ತ ಸಹಾಯಕ ಪಿಪಿ ಮಾಧವನ್(71) ವಿರುದ್ಧ ದೆಹಲಿ ಪೊಲೀಸರು ಅತ್ಯಾಚಾರ ಮತ್ತು ಕ್ರಿಮಿನಲ್ ಬೆದರಿಕೆ ಆರೋಪಗಳ ಅಡಿ ಕೇಸ್ ದಾಖಲಿಸಿಕೊಂಡಿದ್ದಾರೆ. ಪಿಪಿ ಮಾಧವನ್ ಮದುವೆಯ ನೆಪದಲ್ಲಿ ತನ್ನ ಮೇಲೆ ಅತ್ಯಾಚಾರ ಮತ್ತು ಲೈಂಗಿಕ ಶೋಷಣೆ ಮಾಡಿದ್ದಾರೆ ಎಂದು ಮಹಿಳೆ ದೂರಿದ್ದಾರೆ.
ವಿಷಯ ತಿಳಿದ ತಕ್ಷಣ ಮಾಧ್ಯಮಗಳು ಮಾಧವನ್ ಅವರನ್ನು ಸಂಪರ್ಕ ಮಾಡಲು ಪ್ರಯತ್ನ ಮಾಡಿದಾಗ ಅವರು ಸಭೆಯಲ್ಲಿದ್ದರು. ಈ ಹಿನ್ನೆಲೆ ಅವರ ಆಪ್ತ ಸಹಾಯಕರು ಪ್ರತಿಕ್ರಿಯಿಸಿದ್ದು, ಅತ್ಯಾಚಾರ ಮತ್ತು ಲೈಂಗಿಕ ದೌರ್ಜನ್ಯದ ಆರೋಪಗಳು ಒಂದು ಪಿತೂರಿಯಾಗಿದೆ. ಇದಕ್ಕೆ ಯಾವುದೇ ರೀತಿಯ ಆಧಾರವಿಲ್ಲ ಎಂದು ಹೇಳಿದ್ದಾರೆ.
ದೂರಿನಲ್ಲಿ ಏನಿದೆ?
ನನ್ನ ಪತಿ ಕಾಂಗ್ರೆಸ್ ಕಚೇರಿಯಲ್ಲಿ ಹೋರ್ಡಿಂಗ್ ಕೆಲಸ ಮತ್ತು ಇತರ ಕೆಲಸ ಮಾಡುತ್ತಿದ್ದರು. ಆದರೆ ಫೆಬ್ರವರಿ 2020 ರಲ್ಲಿ ಮೃತಪಟ್ಟಿದ್ದರು. ಪತಿಯ ಮರಣದ ನಂತರ, ನಾನು ಕೆಲಸ ಹುಡುಕಲು ಪ್ರಾರಂಭಿಸಿದೆ. ಈ ವೇಳೆ ಮಾಧವನ್ ಅವರ ಸಂಪರ್ಕ ಸಿಕ್ಕಿತ್ತು. ಅವರು ಮೊದಲು ಸಂದರ್ಶನಕ್ಕೆ ಕರೆದರು. ನಂತರ ವಾಟ್ಸಪ್‍ನಲ್ಲಿ ನನ್ನೊಂದಿಗೆ ವೀಡಿಯೋ ಕರೆ ಮತ್ತು ಚಾಟ್ ಮಾಡಲು ಪ್ರಾರಂಭ ಮಾಡಿದರು.
ಒಂದು ದಿನ ನನ್ನನ್ನು ಅವರು ಉತ್ತಮ್ ನಗರ ಮೆಟ್ರೋ ನಿಲ್ದಾಣದ ಬಳಿಯಿರುವ ಪ್ರತ್ಯೇಕ ಸ್ಥಳಕ್ಕೆ ಕರೆದುಕೊಂಡು ಹೋಗಿದ್ದರು. ಅವರ ಕಾರಿನೊಳಗೆ ನನ್ನ ಮೇಲೆ ಲೈಂಗಿಕ ಸಂಬಂಧಕ್ಕೆ ಒಪ್ಪಿಕೊಳ್ಳುವಂತೆ ಬಲವಂತ ಮಾಡಿದರು. ಫೆಬ್ರವರಿ 2022 ರಲ್ಲಿ, ಅವರು ನನ್ನನ್ನು ಸುಂದರ್ ನಗರದ ಫ್ಲಾಟ್‍ಗೆ ಕರೆದೊಯ್ದು ನನ್ನ ಒಪ್ಪಿಗೆಯಿಲ್ಲದೆ ನನ್ನ ಮೇಲೆ ಅತ್ಯಾಚಾರ ಮಾಡಿದ್ದಾರೆ ಎಂದು ದೂರು ನೀಡಿದ್ದಾರೆ.