ಕಿಡ್ನಾಪ್ ಮಾಡಿದ್ದಾರೆ ಎಂದು 5 ಲಕ್ಷ ರು. ಬೇಡಿಕೆ ಇಟ್ಟು, ಗೋವಾದಲ್ಲಿ ಮಜಾಮಾಡುತ್ತಿದ್ದ ಉಡುಪಿಯ ಯುವಕ…! ; ಪೋಷಕರನ್ನು ವಂಚಿಸಿದ ಮಗ ಅಂದರ್..! – ಕಹಳೆ ನ್ಯೂಸ್
ಉಡುಪಿ (ಜೂ. 29): ಮೋಜು ಮಸ್ತಿಗಾಗಿ ಮಗನೇ ತಂದೆತಾಯಿಯರಲ್ಲಿ ಅಪಹರಣಕ್ಕೊಳಗಾದ ನಾಟಕವಾಡಿ 5 ಲಕ್ಷ ರು. ಬೇಡಿಕೆ ಇಟ್ಟಿದ್ದ ಘಟನೆ ಇಲ್ಲಿನ ಅಂಬಾಗಿಲಿನಲ್ಲಿ ನಡೆದಿದೆ. ಆರೋಪಿ ಮಗ ವರುಣ್ ನಾಯಕ್ (26) ಸಿಕ್ಕಿಬಿದ್ದು ಈಗ ಜೈಲು ಪಾಲಾಗಿದ್ದಾನೆ.
ಏನಾಯ್ತು ಗೊತ್ತಾ?
ಜೂನ್ 26 ರಂದು ಮುಂಜಾನೆ ಮೂರು ಗಂಟೆ ಸುಮಾರಿಗೆ ವರುಣ್ ತನ್ನ ತಂದೆ ತಾಯಿಗೆ ತನ್ನದೇ ಮೊಬೈಲ್ ನಂಬರ್ ನಿಂದ ಕರೆ ಮಾಡಿ ಆತಂಕದಿಂದ ಮಾತನಾಡಿದ್ದಾನೆ. ಯಾರೋ ದುಷ್ಕರ್ಮಿಗಳು ನನ್ನನ್ನು ಅಪಹರಿಸಿದ್ದಾರೆ, ಬಿಡುಗಡೆ ಮಾಡಲು ಐದು ಲಕ್ಷ ರುಪಾಯಿ ಕೊಡುವಂತೆ ಬೇಡಿಕೆ ಇಟ್ಟಿದ್ದಾರೆ.ಕೂಡಲೇ ಐದು ಲಕ್ಷ ಕಳುಹಿಸುವಂತೆ ಪೋಷಕರಲ್ಲಿ ಗಾಬರಿಯಲ್ಲಿ ಹೇಳಿಕೊಂಡಿದ್ದಾನೆ,
ಇದರಿಂದ ಭಯ ಭೀತರಾದ ಪೋಷಕರು ಕಂಗಾಲಾಗಿದ್ದಾರೆ. ಹಣ ಕೊಡೋದೇ ಬೇಡವೇ ಎಂದು ಚಿಂತಿತರಾಗಿದ್ದಾರೆ. ಹಣ ಕೊಡುವ ಮೊದಲು ಪೊಲೀಸರಿ ಗೆ ತಿಳಿಸೋಣ ಎಂದು ನಿರ್ಧರಿಸಿದ್ದಾರೆ .ಉಡುಪಿ ನಗರ ಠಾಣೆಯಲ್ಲಿ ಮಗನ ಅಪಹರಣ ಕುರಿತು ದೂರು ನೀಡಿದ್ದಾರೆ.
ದೂರು ದಾಖಲಿಸಿಕೊಂಡ ನಗರ ಠಾಣೆ ಪೊಲೀಸ್ ಅಧಿಕಾರಿಗಳು ಮೇಲಾಧಿಕಾರಿಗಳ ಸೂಚನೆಯಂತೆ ಯುವಕನ ಪತ್ತೆಗೆ ವಿಶೇಷ ತಂಡವನ್ನು ರಚಿಸಿದ್ದಾರೆ. ತಕ್ಷಣವೇ ಕಾರ್ಯಪ್ರವೃತ್ತರಾದ ಪೊಲೀಸರ ತಂಡ, ಯುವಕನ ಮೊಬೈಲ್ ಲೊಕೇಷನ್ ಪತ್ತೆ ಮಾಡಿದ್ದಾರೆ. ಕರೆ ಮಾಡಿದ ಯುವಕ ದೂರದ ಗೋವಾದಲ್ಲಿರುವುದು ಗೊತ್ತಾಗಿದೆ ಕೂಡಲೇ ಗೋವಾಕ್ಕೆ ಇಬ್ಬರು ಸಿಬ್ಬಂದಿಗಳನ್ನು ಕಳುಹಿಸಲಾಗಿದೆ,
ಈ ವೇಳೆ ಮೊಬೈಲ್ ಲೊಕೇಷನ್ ಪರಿಶೀಸಿ ಆ ಸ್ಥಳಕ್ಕೆ ಹೋದಾಗ ಪೊಲೀಸರಿಗೆ ಶಾಕ್ ಆಗಿತ್ತು! ಅಪಹರಣಕ್ಕೊಳಗಾಗಿದ್ದೇನೆ ಎಂದು ಪೋಷಕರಿಗೆ ಕರೆ ಮಾಡಿದ್ದ ಯುವಕ ತನ್ನ ಗೆಳೆಯರೊಂದಿಗೆ ಗೋವಾದ ಕ್ಯಾಸಿನೋ ಒಂದರಲ್ಲಿ ಮೋಜು ಮಸ್ತಿಯಲ್ಲಿ ತೊಡಗಿದ್ದನ್ನು ಕಂಡು ಪೊಲೀಸರೇ ಬೆಚ್ಚಿಬಿದ್ದಿದ್ದಾರೆ.
ಬಳಿಕ ಪೊಲೀಸರು ಯುವಕನನ್ನು ವಶಕ್ಕೆ ಪಡೆದು ಠಾಣೆಗೆ ಕರೆತಂದು ವಿಚಾರಿಸಿದಾಗ ತಾನು ವಿದ್ಯಾಭ್ಯಾಸವನ್ನು ಅರ್ಧಕ್ಕೆ ನಿಲ್ಲಿಸಿ, ಸರಿಯಾದ ಕೆಲಸವಿಲ್ಲದೆ ತನ್ನ ಗೆಳೆಯರೊಂದಿಗೆ ಮೋಜು ಮಸ್ತಿ ಮಾಡುತ್ತಿದ್ದೆ. ಮಜಾ ಮಾಡಲು ಕೈಯಲ್ಲಿ ಹಣವಿಲ್ಲದಿದ್ದಾಗ ನನಗೆ ಈ ಉಪಾಯ ಹೊಳೆಯಿತು ಎಂದಿದ್ದಾನೆ. ತನ್ನ ಪೋಷಕರ ಬಳಿ ಇರುವ ಹಣವನ್ನು ಹೇಗಾದರೂ ಮಾಡಿ ಲಪಟಾಯಿಸುವ ಉದ್ದೇಶದಿಂದ ಈ ನಾಟಕವಾಡಿದ್ದಾಗಿ ಒಪ್ಪಿಕೊಂಡಿದ್ದಾನೆ.
ನಾನು ಅಪಹರಣದ ನಾಟಕವಾಡಿ ನನ್ನದೇ ಮೊಬೈಲ್ ನಿಂದ ತಾಯಿಗೆ ಕರೆ ಮಾಡಿ ನನ್ನನ್ನು ಯಾರೋ ಅಪಹರಿಸಿದ್ದಾರೆ ಅವರು ಐದು ಲಕ್ಷಕ್ಕೆ ಬೇಡಿಕೆ ಇಟ್ಟಿದ್ದಾರೆ ಅಲ್ಲದೆ ಹಣ ನೀಡದಿದ್ದಲ್ಲಿ ನನ್ನನ್ನು ಕೊಲೆ ಮಾಡುತ್ತಾರೆ ಎಂದು ಅಳುತ್ತಾ ಹೇಳಿದೆ ಎಂದು ತನ್ನ ತಪ್ಪನ್ನು ಪೊಲೀಸರ ಬಳಿ ಒಪ್ಪಿಕೊಂಡಿದ್ದಾನೆ.
ಪೋಷಕರ ಹಣ ಎಗರಿಸುವ ಉದ್ದೇಶ ಹಾಗೂ ಪೊಲೀಸರ ಸಮಯವನ್ನು ವ್ಯರ್ಥಪಡಿಸಿದ ಹಿನ್ನೆಲೆಯಲ್ಲಿ ಪೊಲೀಸರು ಯುವಕನ ವಿರುದ್ಧ ಕ್ರಮ ಕೈಗೊಂಡಿದ್ದು ಯುವಕನನ್ನು ನ್ಯಾಯಾಲಯಕ್ಕೆ ಹಾಜರುಪಡಿಸಿದ್ದು ನ್ಯಾಯಾಲಯ ಯುವಕನಿಗೆ 15 ದಿನಗಳ ನ್ಯಾಯಾಂಗ ಬಂಧನ ವಿಧಿಸಿದೆ.