Breaking News : ಆರ್.ಎಸ್.ಎಸ್ ಕಾರ್ಯಕರ್ತ ಶರತ್ ಮಡಿವಾಳ ಕೊಲೆ ಪ್ರಕರಣ ; ಆರೋಪಿ ಮೊಹಮ್ಮದ್ ಶರೀಫ್ ಗೆ ಜಾಮೀನು – ಕಹಳೆ ನ್ಯೂಸ್
ಬಂಟ್ವಾಳ, ಜೂ22: ರಾಜ್ಯದಲ್ಲಿ ಭಾರಿ ಸುದ್ದಿ ಮಾಡಿದ್ದ ಶರತ್ ಮಡಿವಾಳ ಕೊಲೆ ಪ್ರಕರಣದ ಆರೋಪಿಯೋರ್ವನಿಗೆ ಹೈಕೋರ್ಟ್ ಜಾಮೀನು ನೀಡಿದೆ. ಮೊಹಮ್ಮದ್ ಶರೀಫ್ ಜಾಮೀನು ಪಡೆದುಕೊಂಡ ಆರೋಪಿ. ಈ ಪ್ರಕರಣದಲ್ಲಿ 18 ಆರೋಪಿಗಳ ಪೈಕಿ ಇಬ್ಬರು ತಲೆಮರೆಸಿಕೊಂಡಿದ್ದು, ಉಳಿದ ಎಲ್ಲಾ ಆರೋಪಿಗಳಿಗೆ ಜಾಮೀನು ಸಿಕ್ಕಿದೆ.
ಘಟನೆಯ ವಿವರ:
ಜೂ.21ರಂದು ಬೆಂಜನಪದವಿನಲ್ಲಿ ಕೊಲೆಯಾದ ಎಸ್‌ಡಿಪಿಐ ಕಾರ್ಯಕರ್ತ ಅಶ್ರಫ್ ಕೊಲೆಗೆ ಪ್ರತೀಕಾರವಾಗಿ ಜು. 4ರಂದು ರಾತ್ರಿ 9.30ಕ್ಕೆ ಬಿ.ಸಿ.ರೋಡಿನಲ್ಲಿ ದುಷ್ಕರ್ಮಿಗಳಿಂದ ಶರತ್ ಮಡಿವಾಳನಿಗೆ ಮಾರಣಾಂತಿಕ ಹಲ್ಲೆ ನಡೆದಿತ್ತು. ಜು.7ರಂದು ಬೆಳಗ್ಗಿನ ಜಾವ 12.30ಕ್ಕೆ ಶರತ್ ಮೃತಪಟ್ಟಿದ್ದ. ಇದಾದ ಬಳಿಕ ಜು.8ರಂದು ಎ.ಜೆ ಆಸ್ಪತ್ರೆಯಿಂದ ಶವಯಾತ್ರೆ ಮಾಡುತ್ತಿದ್ದ ವೇಳೆ ಬಿ.ಸಿ.ರೋಡಿನಲ್ಲಿ ಕಲ್ಲು ತೂರಾಟ, ಗಲಭೆ ನಡೆದಿತ್ತು. ಗಲಭೆ ಸಂಬಂಧಿಸಿ ಐವರನ್ನು ಬಂಧಿಸಲಾಗಿತ್ತು. ಜು.15ರಂದು ಕೊಲೆ ಪ್ರಕರಣಕ್ಕೆ ಸಂಬಂಧಿಸಿ 5 ಮಂದಿಯ ವಿಚಾರಣೆ ನಡೆದಿತ್ತು.
ಇದೇ ವೇಳೆ ಬಂಟ್ವಾಳ ಸಜಿಪಮುನ್ನೂರು ಹಾಲಾಡಿ ಇಂದಿರಾನಗರ ನಿವಾಸಿ ಅಬ್ದುಲ್ ಶಾಫಿ ಯಾನೆ ಶಾಫಿ (36) ಮತ್ತು ಚಾಮರಾಜನಗರ ಗಾಳಿಪುರ ಗ್ರಾಮ ನಿವಾಸಿ ಖಲೀಲ್‌ವುಲ್ಲಾ (30) ಎಂಬವರನ್ನು ಕೂಡ ಬಂಧಿಸಲಾಗಿತ್ತು. ಕೊಲೆಯಲ್ಲಿ ಈ ಆರೋಪಿಗಳು ನೇರವಾಗಿ ಭಾಗಿಯಾಗದೆ, ಕೊಲೆ ಕೃತ್ಯಕ್ಕೆ ಸಂಚು ರೂಪಿಸಿ ನಾನಾ ರೀತಿಯಲ್ಲಿ ಸಹಕರಿಸಿದ್ದಾರೆಂಬ ಆರೋಪ ಇವರ ಮೇಲಿತ್ತು.
ಶರತ್ ಮಡಿವಾಳ ಕೊಲೆ ಪ್ರಕರಣ ಹಾಗೂ ಬಂಟ್ವಾಳದಲ್ಲಿ ನಡೆದ ಘಟನೆಗಳು ಕೋಮುಗಲಭೆಯಲ್ಲ, ಇದು ಪೂರ್ವಯೋಜಿತ ಕೃತ್ಯ ಎಂದು ಡಿಜಿಪಿ ರೂಪಕ್ ಕುಮಾರ್ ದತ್ತಾ ಸರಕಾರಕ್ಕೆ ವರದಿ ನೀಡಿದರೆ, ಇದೀಗ ಆರೋಪಿಗಳ ಬಂಧನದ ಬಳಿಕ ಇದೊಂದು ಕೋಮುಸಂಘರ್ಷ ಕೊಲೆ ಎಂಬುದು ಮೇಲ್ನೋಟಕ್ಕೆ ಸಾಬೀತಾಗಿದೆ.