ಮತ್ತಷ್ಟು ಹೊಸ ಉತ್ಪನ್ನಗಳನ್ನು ಜಿಎಸ್‌ಟಿ ವ್ಯಾಪ್ತಿಗೆ ತರಲು ಕೇಂದ್ರ ಸರ್ಕಾರ ನಿರ್ಧರಿಸಿದೆ. ಕೇಂದ್ರ ಹಣಕಾಸು ಸಚಿವೆ ನಿರ್ಮಲಾ ಸೀತಾರಾಮನ್ ಅಧ್ಯಕ್ಷತೆಯಲ್ಲಿ ಮಂಗಳವಾರ ಜಿಎಸ್‌ಟಿ ಕೌನ್ಸಿಲ್ ಸಭೆ ನಡೆಯಿತು. ವಿವಿಧ ರಾಜ್ಯಗಳ ಸಚಿವರ ಸಲಹೆ ಆಧಾರದ ಮೇಲೆ ಕೆಲ ಇತರೆ ಉತ್ಪನ್ನಗಳನ್ನು ಜಿಎಸ್‌ಟಿ ವ್ಯಾಪ್ತಿಗೆ ತರಲಾಗಿದೆ.
ಜಿಎಸ್‌ಟಿ ವ್ಯಾಪ್ತಿಯ ವಿವರಗಳ ಪ್ರಕಾರ ಪ್ಯಾಕ್ ಮಾಡಿದ ಮೀನು, ಮೊಸರು, ಜೇನುತುಪ್ಪ, ಪನ್ನೀರ್, ಮಖಾನಾ, ಗೋಧಿ, ಗೋಧಿ ಹಿಟ್ಟು, ಮಾಂಸ, ಮತ್ತು ಬೆಲ್ಲವು ಜಿಎಸ್‌ಟಿಗೆ ಒಳಪಟ್ಟಿರುತ್ತದೆ. ಇವುಗಳ ಮೇಲೆ ಶೇಕಡ 5ರಷ್ಟು ಜಿಎಸ್ಟಿ ವಿಧಿಸುವ ಸಾಧ್ಯತೆ ಇದೆ. ಮುಖ್ಯವಾಗಿ ಪ್ಯಾಕ್ ಮಾಡಲಾದ ಆಹಾರ ಪದಾರ್ಥಗಳು ಈ ಬಾರಿ ಜಿಎಸ್ ಟಿ ಅಡಿಯಲ್ಲಿ ಬರಲಿವೆ. ಬ್ಯಾಂಕ್‌ಗಳು ನೀಡುವ ಚೆಕ್ ಪುಸ್ತಕಗಳ ಮೇಲೆ ಕೂಡ ಶೇ.18ರಷ್ಟು ಜಿಎಸ್‌ಟಿಗೆ ಒಳಪಡುತ್ತವೆ.
ಹೋಟೆಲ್ ರೂಂ ದರದ ಹೊರೆಯೂ ಹೆಚ್ಚಾಗಲಿದೆ. ಏಕೆಂದರೆ ಒಂದು ಸಾವಿರ ರೂಪಾಯಿಗಿಂತ ಕಡಿಮೆ ಶುಲ್ಕಕ್ಕೆ, ಶೇ 12ರಷ್ಟು ಜಿಎಸ್‌ಟಿ ವಿಧಿಸಲಾಗುತ್ತದೆ. ನಕ್ಷೆ, ಚಾರ್ಟ್ ಮತ್ತು ಅಟ್ಲಾಸ್‌ಗಳ ಮೇಲೆ 12 ಪ್ರತಿಶತ ಜಿಎಸ್‌ಟಿ ವಿಧಿಸಲಾಗುತ್ತದೆ. ಮತ್ತೊಂದೆಡೆ, ಖಾದ್ಯ ತೈಲ, ಕಲ್ಲಿದ್ದಲು, ಎಲ್ಇಡಿ ಬಲ್ಬ್ಗಳು, ಪ್ರಿಂಟಿಂಗ್ / ಡ್ರಾಯಿಂಗ್ ಇಂಕ್, ಚರ್ಮದ ಉತ್ಪನ್ನಗಳು ಮತ್ತು ಸೋಲಾರ್ ವಾಟರ್ ಹೀಟರ್ಗಳ ಮೇಲಿನ ಜಿಎಸ್ಟಿ ಬದಲಾಗಲಿದೆ. ಇವುಗಳ ಕುರಿತು ಬುಧವಾರದ ಸಭೆಯಲ್ಲಿ ಅಂತಿಮ ನಿರ್ಧಾರ ಕೈಗೊಳ್ಳಲಾಗುವುದು.