ಮಂಗಳೂರು: ನಗರದ ಹೊರವಲಯ ಉಳ್ಳಾಲದ ಬಟ್ಟಪ್ಪಾಡಿ ಹತ್ತಿರದ ಸಮುದ್ರದಲ್ಲಿ ಮುಳುಗಿದ ಸಿರಿಯಾ ದೇಶದ ಪ್ರಿನ್ಸೆಸ್ ಮಿರಾಲ್ ಹಡಗಿನಿಂದ ತೈಲ ಸೋರಿಕೆ ಆರಂಭವಾಗಿದೆ. ಈ ಹಿನ್ನೆಲೆ ಮೀನುಗಾರಿಕೆ ನಿಷೇಧಿಸಿದ ಜಿಲ್ಲಾಡಳಿತ ಆದೇಶ ಹೊರಡಿಸಿದೆ.
ಲೆಬನಾನ್ಗೆ ಟಿಯಾಂಜಿನ್ನಿಂದ 8000 ಟನ್ ಉಕ್ಕಿನ ಕಾಯಿಲ್ಗಳನ್ನು ತುಂಬಿಸಿಕೊಂಡು ಸಾಗಿಸುತ್ತಿದ್ದ ಸಂದರ್ಭ ಚೀನಾದ ಎಂ ವಿ ಪ್ರಿನ್ಸಸ್ ಮಿರಾಲ್ ಹಡಗು ಮಂಗಳೂರಿನ ಬಟ್ಟಪ್ಪಾಡಿ ಸಮೀಪದ ಸಮುದ್ರದಲ್ಲಿ ಮುಳುಗಡೆಗೊಂಡಿತ್ತು.
ಪ್ರಿನ್ಸೆಸ್ ಮಿರಾಲ್ ಸರಕು ಸಾಗಾಟದ ಹಡಗಿನಲ್ಲಿ 150 ಮೆಟ್ರಿಕ್ ಟನ್ ತೈಲ ಇದ್ದು, ತೈಲ ಸೋರಿಕೆಯಾಗುವುದನ್ನು ತಡೆಯಲು ಪ್ರಯತ್ನ ಮಾಡಲಾಗಿತ್ತು.
ಹಡಗಿನಿಂದ ತೈಲ ಸೋರಿಕೆಯಾಗದಂತೆ ತಡೆಯಲು ಗುಜರಾತ್ ನ ಪೋರ ಬಂದರಿನಿಂದ ‘ಸಮುದ್ರ ಪಾವಕ್’ ಎಂಬ ವಿಶೇಷ ತಂತ್ರಜ್ಞ ಹಡಗು ಕೂಡ ಆಗಮಿಸಿತ್ತು.
ಕೋಸ್ಟ್ ಗಾರ್ಡ್ ನೌಕೆ, 9 ಹಡಗುಗಳು, 3 ಕೋಸ್ಟ್ ಗಾರ್ಡ್ ಕಾಪ್ಟರ್ಗಳು ನಿಗಾ ಇರಿಸಿದ್ದವು. ಇದೀಗ ಹಡಗಿನ ಡರ್ಟಿ ವಾಟರ್ ಟ್ಯಾಂಕಿನಿಂದ ಸಣ್ಣ ಪ್ರಮಾಣದಲ್ಲಿ ತೈಲ ಸೋರಿಕೆಯಾಗುತ್ತಿದೆ. ಈ ಹಿನ್ನೆಲೆಯಲ್ಲಿ ಮುಂಜಾಗ್ರತಾ ಕ್ರಮವಾಗಿ ಉಳ್ಳಾಲ ವಲಯದ ಸುತ್ತಮುತ್ತಲಿನ ಸಮುದ್ರದಲ್ಲಿ ಮೀನುಗಾರಿಕೆ ನಿಷೇಧಿಸಲಾಗಿದೆ.
ಇದನ್ನು ಉಲ್ಲಂಘಿಸಿದ್ದಲ್ಲಿ ಸಂಬಂಧಿಸಿದವರ ವಿರುದ್ಧ ಕಾನೂನು ಕ್ರಮ ಕೈಗೊಳ್ಳಲಾಗುವುದು ಎಂದು ಮೀನುಗಾರಿಕೆ ಇಲಾಖೆಯ ಜಂಟಿ ನಿರ್ದೇಶಕರು ಎಚ್ಚರಿಸಿದ್ದಾರೆ.