ಪ್ರತೀ ವರ್ಷ ಬರುತ್ತದೀ ಸಂತಸ ತರುವ ಮಳೆ. ರವಿಯ ಕ್ರೋದಕ್ಕೆ ಬಳಲಿ ಬೆಂಡಾಗಿದ್ದ ಇಳೆಗೆ ತಂಪು ಪಾನಿಯವನ್ನಿತ್ತು ಖುಷಿಯ ತರುತ್ತದೆ. ತೃಷೆಗೆ ಕಂದು ಬಣ್ಣಕ್ಕೆ ಬದಲಾಗಿದ್ದ ಗಿಡ ಮರದೆಲೆಗಳು ಮುತ್ತಿನ ಹನಿಯ ಚುಂಬನದಿಂದ ಹಸಿರಾಗಿ ನವಿಲಂತೆ ನಾಟ್ಯವಾಡಲು ಸಿದ್ದವಾಗಿದೆ. ಇತ್ತ ಮಳೆಯೇ ದೇವರೆಂದಿದ್ದ ಕರ್ಮಯೋಗಿ ನಾಟಿ ಮಾಡಲು ತಲೆಗೆ ಮುಂಡಾಸು ಸುತ್ತಿ ತಯಾರಾಗಿ ನಿಂತಿದ್ದಾನೆ. ಈಜಲು ನೀರಿಲ್ಲದೆ ತನ್ನ ಅಸ್ತಿತ್ವವನ್ನೇ ಕಳೆದುಕೊಳ್ಳುವೆನೇನೋ ಎಂದು ಕಣ್ಹನಿ ಸುರಿಸುತ್ತಿದ್ದ ಮೀನು ಮರಳಿ ಸಹಜ ಸ್ಥಿತಿಗೆ ಬರುವೆನೆಂದು ಸುರಿಸಿತು ಆನಂದ ಭಾಷ್ಪ. ಸರ್ವರಿಗೂ ಸಂತಸ ಮರಳಿ ಬರುತ್ತಿದೆ, ಯೌವ್ವನದ ನಂತರ ವೃದ್ಧಾಪ್ಯ, ರಕ್ತ ತಂಪಾಗಿ ಆಕಾಶದ ಕಂಪನ ಕೇಳುವ ಸಮಯ,ಬಂದೇ ಬಿಡ್ತು,ಮಳೆಎಂಬ ವಾರ್ಷಿಕ ಹಬ್ಬ.
ಮಳೆ ನಾಡಿಗೆ ರಂಗನ್ನು ತುಂಬುತ್ತಿತ್ತು, ಮರುಭೂಮಿಗೆ ತಂಪೆರೆಚುತಿತ್ತು, ಬಾಯಾರಿದ ಜೀವಕ್ಕೆ ನೀರುಣಿಸುತಿತ್ತು. ಆದರೆ ಮಾತೃ ಸಮಾನಳಾದ ಮಳೆಯ ಕೊಂದೇ ಬಿಟ್ಟ ಹುಲು ಮಾನವ, ಹಸಿದ ಹೊಟ್ಟೆಯ ಮೇಲೆ ತಣ್ಣೀರ ಬಟ್ಟೆ ಇಡಲೂ ನೀರಿಲ್ಲ, ಮಾನವಾ ನೀ ಮಾಡಿದ್ದು ಸರಿಯೇ? ಮರವ ಕಡಿದು ಮಾಡಿದ ಕುರ್ಚಿಯ ಮೇಲೆ ಕುಳಿತು ಮಳೆಯಿಲ್ಲ ಎಂದು ರೋಧಿಸಿ ಅದೇ ಮರದಿಂದ ಮಾಡಿದ ಹಾಳೆಯಲ್ಲಿ ಪ್ರಕೃತಿ ಉಳಿಸಿ ಎಂದು ಬರೆವೆಯಲ್ಲಾ ಏನಿದು ನಿನ್ನ ವಿಕೃತಿ. ತಂಪು ಕೊಡುತ್ತಿದ್ದಾ ಮರಗಳನ್ನೆಲ್ಲಾ ಹುಡಿಮಾಡಿ ಸೆಕೆಯಾಗುತ್ತಿದೇ ಎಂದು AC, ಫ್ರಿಡ್ಜನ್ನು ಬಳಸಿ ಪುನಃ ನನನ್ನೇ ಸುಟ್ಟೆಯಾ ಮನುಜ.
ಮಳೆ ಹಬ್ಬವಾಗಿರುತಿತ್ತು, ಸೂತಕದ ಅತಿವೃಷ್ಟಿ ಆಗಲು ಕಾರಣ ನೀನೆ ಅಲ್ಲವೇ.
ಮಳೆ ನಿಂತು ಹೋದಮೇಲೆ ಕಾಮನಬಿಲ್ಲು ಬಂದೇ ಬರುತ್ತದೆ ಎಂಬ ಮಾತಿದೆ ಅಂತೆಯೇ ಮಳೆಗಾಲ ನಮಗೆ ಅನ್ನವನೀಯುತ್ತದೆ, ಬೇಸಿಗೆ ಮೆಟ್ಟಿ ನಿಲ್ಲಲು ಜೀವಜಲ ಧಾನಗೈಯುತ್ತದೆ, ಹೆಚ್ಚಾಗಿ ಶ್ವಸಿಸಲು ಪ್ರಾಣವಾಯುವನ್ನೇ ಉಡುಗೊರೆಯಾಗಿ ನೀಡುತ್ತದೆ. ಸಾಮಾನ್ಯ ಜನರಿಗೆ ಮಳೆ ಹಬ್ಬವಾದರೆ, ಶ್ರಮ ಜೀವಿಗಳಿಗೆ ನೋವಿನ ಕಂಬನಿಯೇ ಸರಿ. ಗಡಿಯ ಕಾಯುವ ಯೋಧ ಮಳೆಗೆ,ಮೇಘದ ಘರ್ಜನೆಗೆ ಮನೆಯೊಳ ಸೇರಿದರೆ ದೇಶಕ್ಕೆ ಸಮಾಧಿಯಗುವ ಭಯ. ಮಳೆ ಬಂತೆಂದು ವಿದ್ಯುತ್ ಸರಿಪಡಿಸುವ ಕಾರ್ಮಿಕರು ಮನೆ ಸೇರಿದರೆ, ನಾಡೇ ಕತ್ತಲೆಯ ಗೂಡಾದೀತು ಎಂಬ ಭಯ,ಯ.ಮಳೆ ಬಂತೆಂದು ಪೂಲೀಸರು ರಜೆ ತೆಗೆದುಕೊಂಡರೆ ಊರೇ ಲೂಟಿ ಆಗುವ ಭಯ. ಅಬ್ಬಾ! ಮಳೆ ಏನೆಲ್ಲಾ ತಿಳಿ ಹೇಳುತ್ತದೆ!
ಮಳೆಎಂಬ ಹಬ್ಬ ಹೆಚ್ಚು ಸಿಹಿಯ ತರಲಿ, ಈ ಹಬ್ಬ ಕಾಲ ಕಾಲಕ್ಕೆ ಮರಳಿ ಬರುವುದು ಎಷ್ಟು ಅಗತ್ಯವೋ ಅಷ್ಟೇ ಅಗತ್ಯ ಅದು ಬರಲು ಅನುಕೂಲ ಮಾಡುವುದು. ಜೂನ್ 5ಕ್ಕೆ ನೆಟ್ಟ ಮರವಾಗುವ ಗಿಡ ಇನ್ನೂ ಬದುಕಿದೆಯಾ ನೋಡಿ, ಬದುಕ್ಕಿದ್ದರೆ ಆರೈಕೆ ಮಾಡಿ, ಬದುಕಿಲ್ಲ ಎಂದಾದರೆ ಪುನಃ ಪುನಃ ನೆಟ್ಟು ಇಳೆ ಜ್ವಾಲಾಮುಖಿ ಆಗದಂತೆ ಕಾಪಾಡಿ, ಪ್ರಕೃತಿ ಪ್ರೇಮ ವಾಟ್ಸಾಪ್ ಸ್ಟೇಟಸ್ಗೆ ಸೀಮಿತವಾದಲ್ಲಿ, ಕೆಜಿ ಆಮ್ಲಜನಕಕ್ಕೆ ಕಿಡ್ನಿ ಮಾರುವ ಪರಿಸ್ಥಿತಿ ಅಂಗೈ ದೂರದಲ್ಲಿದೆ.
ಬರಹ: ಕಾರ್ತಿಕ್.ಪೈ
ವಿದ್ಯಾರ್ಥಿ, ವಿವೇಕಾನಂದ ಪತ್ರಿಕೋದ್ಯಮ ವಿಭಾಗ