ಮಂಗಳೂರು ವಿಮಾನ ನಿಲ್ದಾಣವನ್ನು ಸಂಪರ್ಕಿಸುವ ಕೆಂಜಾರ್ ನಿಂದ ಅದ್ಯಪಾಡಿ ಪ್ರಮುಖ ರಸ್ತೆಯಲ್ಲಿ ವಾಹನ ಸಂಚಾರಕ್ಕೆ ಅನುವು ಮಾಡಿಕೊಡಲಾಗಿದೆ ಎಂದು ಮಂಗಳೂರು ನಗರ ಉತ್ತರ ಶಾಸಕರಾದ ಡಾ.ಭರತ್ ಶೆಟ್ಟಿಯವರು ಹೇಳಿದ್ದಾರೆ.
ವಿಪರೀತ ಮಳೆಯಿಂದ 6 ದಿನಗಳ ಹಿಂದೆ ಕೆಲವು ಕಡೆ ರಸ್ತೆಯ ಕೆಳಗಿನ ಮಣ್ಣು ನೀರಿನ ರಭಸಕ್ಕೆ ಕೊಚ್ಚಿ ಹೋಗಿತ್ತು. ಇದರಿಂದ ರಸ್ತೆ ಸಾಕಷ್ಟು ಹಾನಿಗೊಳಗಾಗಿತ್ತು. ಅಪಾಯದ ಪರಿಸ್ಥಿತಿ ಇದ್ದ ಕಾರಣ ವಾಹನ ಸಂಚಾರವನ್ನು ನಿಬಂಧಿಸಲಾಗಿತ್ತು. ಕಂದಾಯ ಸಚಿವರಾದ ಮಾನ್ಯ ಆರ್ ಅಶೋಕ್, ಜಿಲ್ಲಾ ಉಸ್ತುವಾರಿ ಸಚಿವರಾದ ಮಾನ್ಯ ಸುನೀಲ್ ಕುಮಾರ್ ಅವರು ಸ್ಥಳಕ್ಕೆ ಭೇಟಿ ನೀಡಿ ಅಧಿಕಾರಿಗಳಿಗೆ ತ್ವರಿತವಾಗಿ ಕಾರ್ಯ ನಿರ್ವಹಿಸುವಂತೆ ಸೂಚಿಸಿದ್ದರು. ಆ ಪ್ರಕಾರವಾಗಿ ಅಪಾಯ ಸ್ಥಿತಿಯಲ್ಲಿದ್ದ ಕಡೆ ಕಾಂಕ್ರೀಟ್ ರಸ್ತೆಯನ್ನು ಒಡೆದು ಹೊಸ ರಸ್ತೆಯನ್ನು ನಿರ್ಮಿಸಲಾಗಿದೆ. ಸದ್ಯ ವಾಹನ ಸಂಚಾರ ಸುಗಮವಾಗಿ ಸಾಗಲು ಅನುಕೂಲ ಕಲ್ಪಿಸಲಾಗಿದೆ. ಮುಂದಿನ ದಿನಗಳಲ್ಲಿ ಲೋಕೋಪಯೋಗಿ ಇಲಾಖೆಯಿಂದ ತಡೆಗೋಡೆ ಕಾಮಗಾರಿ ನಡೆಯಲಿದ್ದು, ಇತರ ಕಾಮಗಾರಿಗಳು ವಾರದೊಳಗೆ ಪೂರ್ತಿಗೊಳಿಸಲಾಗುತ್ತದೆ ಎಂದು ಶಾಸಕರು ತಿಳಿಸಿದರು.