‘ರಾಷ್ಟ್ರೀಯ ಲಾಂಛನ’ ದಲ್ಲಿರುವ ಸಿಂಹ ಮುಖಭಾವದ ವಿವಾದದ ಬೆನ್ನಲ್ಲೇ ಸ್ಪಷ್ಟನೆ ನೀಡಿದ ಶಿಲ್ಪಿ, ಸುನಿಲ್ ಡಿಯೋರಾ – ಕಹಳೆ ನ್ಯೂಸ್
ನವದೆಹಲಿ: ನವದೆಹಲಿಯಲ್ಲಿ ಸಂಸತ್ ಭವನದ ಮೇಲೆ ನಿರ್ಮಿಸಲಾಗಿರುವ ಬೃಹತ್ ರಾಷ್ಟ್ರೀಯ ಲಾಂಛನವನ್ನು ಪ್ರಧಾನಿ ನರೇಂದ್ರ ಮೋದಿಯವರು ಅನಾವರಣಗೊಳಿಸಿದ್ದು, ಲಾಂಛನದಲ್ಲಿರುವ ಸಿಂಹಗಳ ಮುಖಭಾವದ ಕುರಿತು ಪ್ರತಿಪಕ್ಷಗಳ ನಾಯಕರು ತಕರಾರು ತೆಗೆದಿದ್ದಾರೆ.
ಸಿಂಹಗಳ ಮುಖಭಾವದಲ್ಲಿ ಅತಿಯಾದ ವ್ಯಗ್ರತೆ ಇದೆ ಎಂಬುದು ಪ್ರತಿಪಕ್ಷಗಳ ನಾಯಕರ ಆರೋಪವಾಗಿದ್ದು, ಇದನ್ನು ಬೇಕೆಂದೇ ಮಾಡಲಾಗಿದೆ ಎಂದು ಕೇಂದ್ರ ಸರ್ಕಾರವನ್ನು ತರಾಟೆಗೆ ತೆಗೆದುಕೊಳ್ಳುತ್ತಿದ್ದಾರೆ. ಅಲ್ಲದೆ ರಾಷ್ಟ್ರೀಯ ಲಾಂಛನ ಅನಾವರಣಗೊಳಿಸುವ ಸಂದರ್ಭದಲ್ಲಿ ಪ್ರತಿಪಕ್ಷಗಳನ್ನು ಆಹ್ವಾನಿಸಿಲ್ಲ ಎಂಬ ಆಕ್ಷೇಪವೂ ಕೇಳಿ ಬಂದಿದೆ.
ಈ ಮಧ್ಯೆ ಲಾಂಛನ ನಿರ್ಮಿಸಿರುವ 49 ವರ್ಷದ ಶಿಲ್ಪಿ ಸುನಿಲ್ ಡಿಯೋರಾ ಈಗ ವಿವಾದದ ಕುರಿತು ಸ್ಪಷ್ಟನೆ ನೀಡಿದ್ದು, ಸಂಸತ್ ಮೇಲೆ ನಿರ್ಮಾಣವಾಗಿರುವ ಲಾಂಛನದಲ್ಲಿನ ಸಿಂಹಗಳು ವಾರಣಾಸಿ ಬಳಿಯ ಸಾರಾನಾಥದಲ್ಲಿರುವ ಅಶೋಕ ಸ್ಥಂಭದ ಮೇಲಿನ ಸಿಂಹಗಳನ್ನೇ ಹೋಲುತ್ತವೆ ಎಂದು ತಿಳಿಸಿದ್ದಾರೆ.
ಅಲ್ಲಿರುವ ಸಿಂಹಗಳ ಗಾತ್ರಕ್ಕೂ ನೂತನ ಸಂಸತ್ ಭವನದ ಮೇಲಿನ ಬೃಹತ್ ಲಾಂಛನದ ಸಿಂಹಗಳ ಗಾತ್ರಕ್ಕೂ ಭಾರಿ ವ್ಯತ್ಯಾಸವಿದ್ದು, ಆದರೂ ಕೂಡ ಸಿಂಹಗಳ ಮುಖಭಾವದಲ್ಲಿ ಸಾಮ್ಯತೆ ಕಾಪಾಡಿಕೊಳ್ಳಲಾಗಿದೆ. ತದ್ರೂಪು ಬರುವಂತೆ ನೋಡಿಕೊಳ್ಳಲಾಗಿದ್ದು, ಮನಬಂದಂತೆ ಯಾವುದೇ ಮಾರ್ಪಾಡು ಮಾಡಿಲ್ಲ ಎಂದು ಹೇಳಿದ್ದಾರೆ.