Breaking News : ರೈತರ ಸಾಲಮನ್ನಾ ಪಕ್ಕಾ ಅಂತೆ ; ಯಾವ ರೈತರ ಎಷ್ಟು ಸಾಲ ಮನ್ನಾ ಎನ್ನದೇ ಯಕ್ಷ ಪ್ರಶ್ನೆ ..? – ಕಹಳೆ ನ್ಯೂಸ್
ಬೆಂಗಳೂರು: ಮುಖ್ಯಮಂತ್ರಿ ಎಚ್.ಡಿ.ಕುಮಾರಸ್ವಾಮಿ ಅವರು ಬರುವ ಜು.5ರಂದು ಮಂಡಿಸಲಿರುವ ಜೆಡಿಎಸ್-ಕಾಂಗ್ರೆಸ್ ನೇತೃತ್ವದ ಸಮ್ಮಿಶ್ರ ಸರ್ಕಾರದ ಚೊಚ್ಚಲ ಬಜೆಟ್‌ನಲ್ಲಿ ಸಹಕಾರಿ ಬ್ಯಾಂಕುಗಳು ಹಾಗೂ ರಾಷ್ಟ್ರೀಕೃತ ಬ್ಯಾಂಕುಗಳಲ್ಲಿನ ರೈತರ ಬೆಳೆ ಸಾಲಮನ್ನಾ ಘೋಷಣೆಯಾಗುವುದು ನಿಚ್ಚಳವಾಗಿದೆ.
ಆದರೆ, ರೈತರ ಎಷ್ಟುಸಾಲದ ಮೊತ್ತದ ಪೈಕಿ ಎಷ್ಟುಮನ್ನಾ ಆಗಲಿದೆ ಎಂಬುದು ಇನ್ನೂ ಅಂತಿಮವಾಗಿ ನಿರ್ಧಾರವಾಗಿಲ್ಲ. ಒಂದೂವರೆ ಲಕ್ಷದಿಂದ ಎರಡು ಲಕ್ಷ ರು.ವರೆಗೆ ಸಾಲಮನ್ನಾ ಆಗುವ ಸಾಧ್ಯತೆ ಹೆಚ್ಚಾಗಿದೆ. ಜೊತೆಗೆ ಐದು ಎಕರೆ ಒಳಗಿನ ಸಣ್ಣ ರೈತರ ಸಾಲ ಮನ್ನಾ ಮಾಡುವ ಆದ್ಯತೆ ಹೊಂದಲಾಗಿದೆ. ಇದರ ಮೊತ್ತ ಅಂದಾಜು 32ರಿಂದ 34 ಸಾವಿರ ಕೋಟಿ ರು.ಗಳಾಗುವ ನಿರೀಕ್ಷೆಯಿದೆ ಎಂದು ಸರ್ಕಾರದ ಉನ್ನತ ಮೂಲಗಳು ಮಾಹಿತಿ ನೀಡಿವೆ.
ರಾಷ್ಟ್ರೀಕೃತ ಹಾಗೂ ಸಹಕಾರಿ ಬ್ಯಾಂಕ್‌ಗಳಿಂದ ಕಳೆದ ಮೇ 31, 2018ರವರೆಗೆ ರೈತರು ಪಡೆದಿರುವ ಬೆಳೆಸಾಲ ಮನ್ನಾ ಮಾಡುವ ಬಗ್ಗೆ ಸಾಮಾನ್ಯ ಕನಿಷ್ಠ ಕಾರ್ಯಕ್ರಮಗಳ ಸಮಿತಿಯು (ಸಿಎಂಪಿ) ಸರ್ವಾನುಮತದಿಂದ ನಿರ್ಣಯ ಮಾಡಿದೆ. ಭಾನುವಾರ ನಡೆಯುವ ಸಮ್ಮಿಶ್ರ ಸರ್ಕಾರದ ಪಾಲುದಾರ ಪಕ್ಷವಾಗಿರುವ ಜೆಡಿಎಸ್ ಮತ್ತು ಕಾಂಗ್ರೆಸ್‌ನ ನಾಯಕರನ್ನು ಒಳಗೊಂಡ ಸಮನ್ವಯ ಸಮಿತಿ ಸಭೆಯಲ್ಲಿ ಇದಕ್ಕೆ ಅಂತಿಮ ಮುದ್ರೆ ಬೀಳಲಿದೆ.
ಶುಕ್ರವಾರ ಕುಮಾರಕೃಪಾ ಅತಿಥಿಗೃಹದಲ್ಲಿ ನಡೆದ ಕನಿಷ್ಠ ಕಾರ್ಯಕ್ರಮಗಳ ಸಮಿತಿಯ ಕೊನೆಯ ಸಭೆಯ ಬಳಿಕ ಸುದ್ದಿಗಾರರೊಂದಿಗೆ ಮಾತನಾಡಿದ ಸಮಿತಿ ಅಧ್ಯಕ್ಷ ಎಂ.ವೀರಪ್ಪ ಮೊಯ್ಲಿ, ಸಭೆಯಲ್ಲಿ ರೈತರ ರಾಷ್ಟ್ರೀಕೃತ ಹಾಗೂ ಸಹಕಾರಿ ಬ್ಯಾಂಕ್‌ಗಳಲ್ಲಿನ ಬೆಳೆ ಸಾಲ ಮನ್ನಾ ಮಾಡಲು ನಿರ್ಧಾರ ಮಾಡಲಾಗಿದೆ. ಮೂರನೇ ಬಾರಿಗೆ ಶುಕ್ರವಾರ ನಡೆದ ಸಭೆಯಲ್ಲಿ ಅಂತಿಮ ಸುತ್ತಿನ ಸಮಾಲೋಚನೆ ಮುಗಿದಿದ್ದು, ಎರಡೂ ಪಕ್ಷದ ಕಾರ್ಯಕ್ರಮಗಳನ್ನೂ ಪರಸ್ಪರ ಒಪ್ಪಿ ಜಾರಿಗೊಳಿಸಲು ಸಜ್ಜಾಗಿದ್ದೇವೆ ಎಂದು ಸ್ಪಷ್ಟಪಡಿಸಿದರು.
ಸಭೆಯಲ್ಲಿ ಕಾಂಗ್ರೆಸ್ ಚುನಾವಣಾ ಪ್ರಣಾಳಿಕೆ ಹಾಗೂ ಜೆಡಿಎಸ್ ಪ್ರಣಾಳಿಕೆಯಲ್ಲಿ ಕಾರ್ಯಕ್ರಮಗಳನ್ನು ಸಮವಾಗಿ ತುಲನೆ ಮಾಡಲಾಗಿದೆ. ಸಾಲ ಮನ್ನಾ ವಿಷಯದಲ್ಲಾಗಲಿ, ಪಕ್ಷದ ಕಾರ್ಯಕ್ರಮ ವಿಷಯದಲ್ಲಾಗಲಿ ಇಬ್ಬರ ನಡುವೆ ಯಾವುದೇ ಭಿನ್ನಾಭಿಪ್ರಾಯವಿಲ್ಲ. ನಮ್ಮ ಕಾರ್ಯಕ್ರಮಗಳನ್ನು ಅವರು ಒಪ್ಪಿದ್ದಾರೆ. ಅವರ ಕಾರ್ಯಕ್ರಮಗಳನ್ನು ನಾವು ಒಪ್ಪಿದ್ದೇವೆ. ಈ ಮೂಲಕ ಇಂದು ಸಾಮಾನ್ಯ ಕನಿಷ್ಠ ಕಾರ್ಯಕ್ರಮದ ಸಮಿತಿ ವರದಿ ಅಂತಿಮಗೊಳಿಸಲಾಗಿದೆ ಎಂದು ಹೇಳಿದರು.
ವರದಿಯನ್ನು ಸಮನ್ವಯ ಸಮಿತಿ ಅಧ್ಯಕ್ಷರಾದ ಸಿದ್ದರಾಮಯ್ಯ ಅವರಿಗೆ ಕೊಡುತ್ತೇವೆ. ಕಾರ್ಯಕ್ರಮಗಳಿಗೆ ಹಣಕಾಸು ಹೊಂದಾಣಿಕೆ ಮಾಡುವುದು ಮುಖ್ಯಮಂತ್ರಿ ಎಚ್.ಡಿ. ಕುಮಾರಸ್ವಾಮಿ ಅವರ ನಿರ್ಧಾರಕ್ಕೆ ಬಿಟ್ಟು ಸಮಿತಿಯಲ್ಲಿ ತೀರ್ಮಾನಿಸಲಾಗಿದೆ. ಐದು ವರ್ಷಕ್ಕೆ ಅನ್ವಯವಾಗುವಂತೆ ಎರಡು ಪ್ರಣಾಳಿಕೆಯ ಯೋಜನೆಗಳನ್ನು ಜಾರಿ ಮಾಡುವ ಬಗ್ಗೆ ತೀರ್ಮಾನ ಮಾಡಿದ್ದೇವೆ ಎಂದು ಮಾಹಿತಿ ನೀಡಿದರು.
ಸಾಲಮನ್ನಾ ಬಗ್ಗೆ ಪರಸ್ಪರ ವಾಕ್ಸಮರ :
ಸಾಮಾನ್ಯ ಕನಿಷ್ಠ ಕಾರ್ಯಕ್ರಮ ಸಮಿತಿ ಸಭೆಯಲ್ಲಿ ಜೆಡಿಎಸ್ ಹಾಗೂ ಕಾಂಗ್ರೆಸ್ ಸದಸ್ಯರ ನಡುವೆ ಕಾರ್ಯಕ್ರಮಗಳ ಅನುಷ್ಠಾನದ ವಿಚಾರದಲ್ಲಿ ಪರಸ್ಪರ ಮಾತಿನ ಚಕಮಕಿ ನಡೆದಿದೆ ಎಂದು ತಿಳಿದು ಬಂದಿದೆ.
ಸಂಪೂರ್ಣ ಸಾಲ ಮನ್ನಾಗೆ ಜೆಡಿಎಸ್ ಪಟ್ಟು ಹಿಡಿದರೆ, ಸಾಲ ಮನ್ನಾಗೆ ಸಂಪನ್ಮೂಲ ಕ್ರೋಡೀಕರಣ ಹೇಗೆ ಮಾಡುತ್ತೀರಿ ತಿಳಿಸಿ ಎಂದು ಕಾಂಗ್ರೆಸ್ ಸದಸ್ಯರು ಪ್ರಶ್ನೆ ಮಾಡಿದರು. ಸಾಲ ಮನ್ನಾಗೆ ನಮ್ಮ ಸಂಪೂರ್ಣ ಸಹಕಾರ ಇದೆ. ಆದರೆ, ಖಜಾನೆ ಖಾಲಿ ಮಾಡಿಕೊಂಡು ಸರ್ಕಾರ ನಡೆಸುವ ದುಸ್ತರವಾಗುವಂತಹ ಪರಿಸ್ಥಿತಿ ನಿರ್ಮಾಣವಾಗುವುದು ಬೇಡ. ಇದರಿಂದ ಎರಡೂ ಪಕ್ಷಗಳಿಗೆ ಕೆಟ್ಟಹೆಸರು ಬರುತ್ತದೆ. ಹೀಗಾಗಿ ಸಾಲ ಮನ್ನಾಗೆ ಹಣ ಹೇಗೆ ಹೊಂದಿಸುತ್ತೀರಿ ತಿಳಿಸಿ ಎಂದು ಕಾಂಗ್ರೆಸ್ ಸದಸ್ಯರು ಪಟ್ಟು ಹಿಡಿದರು.
ಈ ವೇಳೆ ಜೆಡಿಎಸ್ ಸದಸ್ಯರು, 34 ಸಾವಿರ ಕೋಟಿ ರು.ಗಳನ್ನು ನೇರವಾಗಿ ಬ್ಯಾಂಕ್‌ಗಳಿಗೆ ವರ್ಗಾವಣೆ ಮಾಡಲಾಗುವುದು. ಉಳಿಕೆ ಹಣ ತೆಲಂಗಾಣ ಸರ್ಕಾರದ ಮಾದರಿಯಲ್ಲಿ ಸಂಬಂಧಪಟ್ಟಬ್ಯಾಂಕ್‌ಗಳಿಗೆ ಬಾಂಡ್ ಕೊಡುವುದು ಎಂದು ಸಮರ್ಥನೆ ನೀಡಿದರು ಎಂದು ತಿಳಿದು ಬಂದಿದೆ.
ಈ ವೇಳೆ ಜೆಡಿಎಸ್ ಸದಸ್ಯರೊಬ್ಬರು ಕಾಂಗ್ರೆಸ್ ಸರ್ಕಾರ ತಂದಿದ್ದ ಜನಪ್ರಿಯ ಯೋಜನೆಗಳಿಗೆ ಅನುದಾನ ಕಡಿತ ಮಾಡಿದರೆ ಸರಿ ಹೋಗುತ್ತದೆ. ಸಾಲಮನ್ನಾದಿಂದ ಕಾಂಗ್ರೆಸ್ ಹಾಗೂ ಜೆಡಿಎಸ್ ಎರಡೂ ಪಕ್ಷಗಳಿಗೆ ಉತ್ತಮ ಹೆಸರು ಬರುತ್ತದೆ. ಎರಡೂ ಪಕ್ಷಗಳ ಬಗ್ಗೆ ಜನಾಭಿಪ್ರಾಯ ಮೂಡುವುದರಿಂದ ಲೋಕಸಭೆ ಚುನಾವಣೆಗೆ ಒಳಿತಾಗಲಿದೆ. ಹೀಗಾಗಿ ಗಂಗಾ ಕಲ್ಯಾಣ ಹಾಗೂ ಪಂಚಾಯತ್ ರಾಜ್ ಇಲಾಖೆಯ ಶುದ್ಧ ಕುಡಿಯುವ ನೀರು ಘಟಕಗಳ ಬಗ್ಗೆ ಮತ್ತೊಮ್ಮೆ ಯೋಚಿಸಬೇಕು. ಇನ್ನು ಇಂದಿರಾ ಕ್ಯಾಂಟೀನ್‌ನಿಂದ ಇರುವ ಲಾಭಕ್ಕಿಂತ ನಷ್ಟವೇ ಜಾಸ್ತಿ ಎಂದು ಅಭಿಪ್ರಾಯಪಟ್ಟರು ಎನ್ನಲಾಗಿದೆ.
ಈ ವೇಳೆ ಕಾಂಗ್ರೆಸ್ ನಾಯಕರು, ತಮ್ಮ ಜನಪ್ರಿಯ ಯೋಜನೆಗಳನ್ನು ನಿಲ್ಲಿಸಬಾರದು. ಅದರಿಂದ ಲಕ್ಷಾಂತರ ಜನರಿಗೆ ಅನುಕೂಲವಾಗುತ್ತಿದೆ. ಇಂತಹ ಕಾರ್ಯಕ್ರಮಗಳನ್ನು ನಿಲ್ಲಿಸಿದರೆ ಮೈತ್ರಿ ಸರ್ಕಾರಕ್ಕೆ ಕೆಟ್ಟಹೆಸರು ಬರಲಿದೆ ಎಂದು ತೀವ್ರ ಅಸಮಧಾನ ವ್ಯಕ್ತಪಡಿಸಿದರು ಎನ್ನಲಾಗಿದೆ.