ಬೆಂಗಳೂರು: ರಾಜ್ಯದ ಕಡಿಮೆ ಅವಧಿಯ ಮುಖ್ಯಮಂತ್ರಿಯಾಗಿ ಕಾರ್ಯ ನಿರ್ವಹಿಸುವ ಮೂಲಕ ಬಿಜೆಪಿ ರಾಜ್ಯಾಧ್ಯಕ್ಷ ಬಿ.ಎಸ್.ಯಡಿಯೂರಪ್ಪ ದಾಖಲೆ ಬರೆದಿದ್ದರು. ಆದರೆ ಈಗ ಮತ್ತೊಂದು ದಾಖಲೆ ಅವರ ಹೆಸರಿಗೆ ಸೇರ್ಪಡೆಯಾಗಿದೆ.
ರಾಜ್ಯ ರಾಜಕೀಯದಲ್ಲಿ ಅತಿ ಹೆಚ್ಚು ಬಾರಿಗೆ ವಿಧಾನಸಭೆಯ ವಿಪಕ್ಷ ನಾಯಕರಾದ ದಾಖಲೆಯನ್ನು ಸದ್ಯ ಬಿ.ಎಸ್.ಯಡಿಯೂರಪ್ಪ ಅವರು ತಮ್ಮದಾಗಿಸಿಕೊಂಡಿದ್ದಾರೆ. 11 ವರ್ಷಗಳ ಬಳಿಕ ವಿಪಕ್ಷ ನಾಯಕರಾಗಿರುವ ಯಡಿಯೂರಪ್ಪ ಅವರು, ಒಟ್ಟು ಮೂರು ಬಾರಿ ಈ ಸ್ಥಾನವನ್ನು ಏರಿದ್ದಾರೆ.
ಮಾಜಿ ಪ್ರಧಾನಿ ದೇವೇಗೌಡ ಅವರು ಮುಖ್ಯಮಂತ್ರಿ ಆಗಿದ್ದಾಗ(1994 ಡಿಸೆಂಬರ್ 27 ನಿಂದ 1996 ಡಿಸೆಂಬರ್ 18) ಮೊದಲ ಬಾರಿ ವಿಪಕ್ಷ ನಾಯಕರಾಗಿದ್ದರು. ಮಾಜಿ ಸಿಎಂ ಧರ್ಮಸಿಂಗ್ ಮುಖ್ಯಮಂತ್ರಿ ಆಗಿದ್ದಾಗ (2004ರ ಜೂನ್ 10 ರಿಂದ, 2006 ಫೆಬ್ರವರಿ 3ರವರೆಗೆ) ಎರಡನೇ ಬಾರಿ ವಿಪಕ್ಷ ನಾಯಕರಾಗಿದ್ದರು. ಈಗ 2018ರ ಮೇ 25 ರಿಂದ ಮೂರನೇ ಬಾರಿ ವಿರೋಧ ಪಕ್ಷದ ನಾಯಕರಾಗಿದ್ದಾರೆ.
ವಿಪಕ್ಷ ನಾಯಕರ ಕಚೇರಿಯಲ್ಲಿ ಪೂಜೆ:
ವಿಧಾನಸೌಧ ವಿಪಕ್ಷ ನಾಯಕರ ಕೊಠಡಿ ಹೂಗಳಿಂದ ಸಿಂಗಾರಗೊಂಡಿದ್ದು, ಪುರೋಹಿತರಿಂದ ಪೂಜೆ ನಡೆಯಿತು. ಪೂಜೆಯಲ್ಲಿ ಬಿಎಸ್ ಯಡಿಯೂರಪ್ಪ, ಶಾಸಕರಾದ ಗೋವಿಂದ ಕಾರಜೋಳ, ರಾಜು ಗೌಡ, ಸಿಎಂ ಉದಾಸಿ, ಅಪ್ಪಚ್ಚು ರಂಜನ್ ಭಾಗವಹಿಸಿದ್ದರು.