ನೀಟ್ ಪರೀಕ್ಷೆ: ಒಳಉಡುಪು ಬಿಚ್ಚಿಟ್ಟು ಪರೀಕ್ಷೆ ಬರೆಯುವಂತೆ ಪಟ್ಟು: ಪಾಲಕರ ಮುಂದೆ ಕಣ್ಣೀರಿಟ್ಟ ವಿದ್ಯಾರ್ಥಿನಿಯರು – ಕಹಳೆ ನ್ಯೂಸ್
ಕೊಲ್ಲಂ: ದೇಶಾದ್ಯಂತ ನೀಟ್ ಪರೀಕ್ಷೆ ನಡೆದಿದೆ. ಇದರ ನಡುವೆ ಕೇರಳದ ಕಾಲೇಜು ಒಂದರಲ್ಲಿ ಅಮಾನವೀಯ ಘಟನೆ ನಡೆದಿರುವುದು ಬೆಳಕಿಗೆ ಬಂದಿದೆ. ಸೋಮವಾರ ದೇಶದ ಹಲವು ಭಾಗಗಳಲ್ಲಿ ವಿದ್ಯಾರ್ಥಿಗಳು ನೀಟ್ ಪರೀಕ್ಷೆಯ ಬರೆಯಲು ಪರೀಕ್ಷಾ ಕೇಂದ್ರದ ಒಳಗಡೆ ಆತ್ಮವಿಶ್ವಾದಿಂದ ಹೊರಟರೆ, ಕೇರಳದ ಕೊಲ್ಲಂನಲ್ಲಿರುವ ಮಾರ್ ಥೋಮಾ ಇನ್ಸ್ಟಿಟ್ಯೂಟ್ ಆಫ್ ಇನ್ಫರ್ಮೇಷನ್ ಟೆಕ್ನಾಲಜಿ ಸಂಸ್ಥೆಯು ಪರೀಕ್ಷಾ ಕೇಂದ್ರಕ್ಕೆ ಕೆಲ ಹೆಣ್ಣು ಮಕ್ಕಳು ತೆರಳುವ ಮುನ್ನ ಒಳಉಡುಪುಗಳನ್ನು ತೆಗೆಯಿರಿ ಎಂದು ಹೇಳಿರುವ ಆರೋಪ ಕೇಳಿಬಂದಿದೆ.
ರಾಷ್ಟ್ರೀಯ ಅರ್ಹತಾ ಪ್ರವೇಶ ಪರೀಕ್ಷೆ (NEET)ಯ ಪರೀಕ್ಷಾ ಕೇಂದ್ರಕ್ಕೆ ಪ್ರವೇಶಿಸುವ ಮುನ್ನ ನನ್ನ ಮಗಳಿಗೆ ಒಳಉಡುಪುಗಳನ್ನು ತೆಗೆಯುವಂತೆ ಕೇಳಲಾಗಿದೆ ಎಂದು ಕೊಲ್ಲಂ ಜಿಲ್ಲೆಯ ಪಾಲಕರೊಬ್ಬರು ಹೇಳಿದ್ದಾರೆ. ಈ ಘಟನೆಯ ಬಗ್ಗೆ ಸಾರ್ವಜನಿಕ ವಲಯದಲ್ಲಿ ಹಾಗೂ ಸಾಮಾಜಿಕ ಜಾಲತಾಣದಲ್ಲಿ ಆಕ್ರೋಶ ವ್ಯಕ್ತವಾದ ಬಳಿಕ ಮಾನವ ಹಕ್ಕುಗಳ ಆಯೋಗವು ತನಿಖೆ ನಡೆಸಿ 15 ದಿನಗಳಲ್ಲಿ ವರದಿ ಸಲ್ಲಿಸುವಂತೆ ಕೊಲ್ಲಂ ಗ್ರಾಮಾಂತರ ಎಸ್‍ಪಿಗೆ ಸೂಚಿಸಿದೆ.
ವಿದ್ಯಾರ್ಥಿಯ ತಂದೆ ಕೊಲ್ಲಂ ಪೊಲೀಸ್ ವರಿಷ್ಠಾಧಿಕಾರಿಗೆ ದೂರು ನೀಡಿದ ನಂತರ ಈ ಘಟನೆ ಬೆಳಕಿಗೆ ಬಂದಿದೆ. ಕೊಟ್ಟಾರಕರ ಪೊಲೀಸರಿಗೆ ದೂರು ನೀಡಿದ ದೂರುದಾರರು, ಚಾತಮಂಗಲದಲ್ಲಿರುವ ಪರೀಕ್ಷಾ ಕೇಂದ್ರಕ್ಕೆ ಪ್ರವೇಶಿಸುವ ಮೊದಲು ತಮ್ಮ ಮಗಳು ಸೇರಿದಂತೆ ಮಹಿಳಾ ನೀಟ್ ಆಕಾಂಕ್ಷಿಗಳು ತಮ್ಮ ಒಳಉಡುಪುಗಳನ್ನು ತೆಗೆಯುವಂತೆ ಕೇಳಿಕೊಂಡಿದ್ದಾರೆ ಎಂದು ಹೇಳಿದ್ದಾರೆ.
ನನ್ನ ಮಗಳು 8ನೇ ತರಗತಿಯಿಂದ ನೀಟ್ ಪರೀಕ್ಷೆಗೆ ತಯಾರಿ ನಡೆಸುತ್ತಿದ್ದಳು. ಪರೀಕ್ಷೆಯಲ್ಲಿ ಆಕೆ ಉತ್ತಮ ರ‍್ಯಾಂಕ್ ಗಳಿಸುತ್ತಾಳೆ ಎಂಬ ವಿಶ್ವಾಸ ನಮಗಿತ್ತು. ಆದರೆ, ಈ ಘಟನೆಯಿಂದಾಗಿ ಮಗಳ ಏಕಾಗ್ರತೆಗೆ ಭಂಗವಾಗಿದೆ ಮತ್ತು ಆಕೆಯ ಆತ್ಮವಿಶ್ವಾಸವನ್ನು ಕುಗ್ಗಿಸಿದೆ. ಪರಿಣಾಮ ಪರೀಕ್ಷೆಯನ್ನು ಸರಿಯಾಗಿ ಬರೆಯಲಾಗಲಿಲ್ಲ ಎಂದು ನನ್ನ ಬಳಿ ಮಗಳು ಹೇಳಿಕೊಂಡಳು ಎಂದು ವಿದ್ಯಾರ್ಥಿಯ ತಂದೆ ತಿಳಿಸಿದ್ದಾರೆ.
ರಾಷ್ಟ್ರೀಯ ಪರೀಕ್ಷಾ ಏಜೆನ್ಸಿಯ ಮಾರ್ಗಸೂಚಿಗಳನ್ನು ಉಲ್ಲೇಖಿಸಿದ ಸಂತ್ರಸ್ತೆಯ ತಂದೆ, ಯಾವುದೇ ರೀತಿಯ ಒಳಉಡುಪಿನ ಮೇಲೆ ಯಾವುದೇ ನಿಷೇಧವನ್ನು ಏರಿಲ್ಲ. ನಾವು ಎಲ್ಲಾ ಮಾರ್ಗಸೂಚಿಗಳನ್ನು ಅನುಸರಿಸುತ್ತಿದ್ದೇವೆ. ಆದರೆ, ಸಿಬ್ಬಂದಿ ಒಳಉಡುಪುಗಳನ್ನು ತೆಗೆಯದೆ ತರಗತಿಗೆ ಪ್ರವೇಶಿಸಲು ಬಿಡಲಿಲ್ಲ ಎಂದು ಹೇಳಿದರು.
ಇದೇ ಸಂದರ್ಭದಲ್ಲಿ ಆರೋಪವನ್ನು ಮಾರ್ಥೋಮಾ ಇನ್ಸ್ಟಿಟ್ಯೂಟ್ ಆಫ್ ಇನ್ಫರ್ಮೇಷನ್ ಟೆಕ್ನಾಲಜಿ ನಿರಾಕರಿಸಿದೆ. ಘಟನೆಯ ಕುರಿತು ರಾಜ್ಯ ಮಹಿಳಾ ಆಯೋಗವೂ ಸ್ವಯಂಪ್ರೇರಿತ ಪ್ರಕರಣ ದಾಖಲಿಸಿಕೊಂಡಿದೆ.