ಎನ್‌ಡಿಎ ಮೈತ್ರಿಕೂಟದ ಅಭ್ಯರ್ಥಿ ದ್ರೌಪದಿ ಮುರ್ಮು ಅವರು ಭಾರತದ 15ನೇ ರಾಷ್ಟ್ರಪತಿಯಾಗಿ ಆಯ್ಕೆಯಾಗಿದ್ದು ದೇಶದ ಇತಿಹಾಸದಲ್ಲೇ ಮೊದಲ ಬಾರಿಗೆ ಬುಡಕಟ್ಟು ಮಹಿಳೆಯೊಬ್ಬರು ರಾಷ್ಟ್ರಪತಿ ಹುದ್ದೆಗೇರಿದ್ದಾರೆ.
ತೀವ್ರ ಕುತೂಹಲ ಕೆರಳಿಸಿರುವ ರಾಷ್ಟ್ರಪತಿ ಚುನಾವಣೆಯ ಮತ ಎಣಿಕೆಯಲ್ಲಿ ದ್ರೌಪದಿ ಮುರ್ಮು ಅವರು ವಿಪಕ್ಷ ಅಭ್ಯರ್ಥಿ ಯಶವಂತ್ ಸಿನ್ಹಾ ವಿರುದ್ಧ ಗೆಲುವು ಸಾಧಿಸಿದ್ದಾರೆ.
ದ್ರೌಪದಿ ಮುರ್ಮು ಅವರಿಗೆ ಪ್ರಧಾನಿ ಮೋದಿ, ಬಿಜೆಪಿ ರಾಷ್ಟ್ರಾಧ್ಯಕ್ಷ ಜೆಪಿ ನಡ್ಡಾ ಸೇರಿದಂತೆ ಹಲವರು ಶುಭಾಶಯ ಕೋರಿದ್ದು ಬಿಜೆಪಿ ಪಾಳಯದಲ್ಲಿ ಸಂಭ್ರಮ ಮುಗಿಲು ಮುಟ್ಟಿದೆ.
ದ್ರೌಪದಿ ಮುರ್ಮು ಅವರಿಗೆ 5,121 ಮತಗಳು ಬಿದ್ದಿವೆ. ಈ ಮತಗಳ ಒಟ್ಟು ಮೌಲ್ಯ 5,77,777 ಆಗಿದೆ. ಇನ್ನು ವಿಪಕ್ಷ ಅಭ್ಯರ್ಥಿ ಯಶವಂತ್ ಸಿನ್ಹಾ ಅವರಿಗೆ 1,058 ಮತಗಳು ಬಿದ್ದಿದ್ದು ಇದರ ಮೌಲ್ಯ 2,61,062 ಆಗಿದೆ.
ಹಾಲಿ ಚಲಾವಣೆಯಾಗಿರುವ ಮತಗಳ ಪೈಕಿ 15 ಸಂಸದರ ಮತಗಳು ಅಸಿಂಧು ಎಂದು ಘೋಷಿಸಲಾಗಿದೆ ಎಂದು ಪಿಸಿ ಮೋದಿ ತಿಳಿಸಿದ್ದಾರೆ. ಈ ಅಧ್ಯಕ್ಷೀಯ ಚುನಾವಣೆಯಲ್ಲಿ ಪ್ರತಿ ಸಂಸದರು 700 ಮತಗಳ ಮೌಲ್ಯವನ್ನು ಹೊಂದಿದೆ.
ಇನ್ನು ದ್ರೌಪದಿ ಮುರ್ಮು ಅವರ ವೈಯಕ್ತಿಕ ಜೀವನದ ಹಲವು ದುರಂತಗಳನ್ನು ಮೆಟ್ಟಿ ನಿಂತಿದ್ದಾರೆ.
2009 ಮತ್ತು 2015ರ ನಡುವಿನ ಆರು ವರ್ಷಗಳಲ್ಲಿ ಪತಿ, ಇಬ್ಬರು ಮಕ್ಕಳು, ತಾಯಿ ಮತ್ತು ಸಹೋದರರನ್ನು ಕಳೆದುಕೊಂಡು ತೀವ್ರ ಆಘಾತ ಅನುಭವಿಸಿದ್ದರು. ಬಳಿಕ, ಅವುಗಳನ್ನು ಮೆಟ್ಟಿ ನಿಂತು ಧ್ಯಾನಕ್ಕೆ ಮೊರೆಹೋದ ಅವರು, ತಮ್ಮ ವೈಯಕ್ತಿಕ ಆಘಾತಗಳಿಂದ ಹೊರಬಂದರು. ಸಾಮಾಜಿಕ ಕೆಲಸಗಳಲ್ಲಿ ತಮ್ಮನ್ನ ತಾವು ತೊಡಗಿಸಿಕೊಂಡಿದ್ದರು. ಬುಡಕಟ್ಟು ಜನಾಂಗದ ನಾಯಕಿಯಾಗಿ ಹೊರಹೊಮ್ಮಿದರು.
ದ್ರೌಪದಿ ಮುರ್ಮು ಅವರಿಗೆ ಇಬ್ಬರು ಗಂಡು ಮತ್ತು ಒಂದು ಹೆಣ್ಣು ಮಕ್ಕಳಿದ್ದರು. ವರದಿಗಳ ಪ್ರಕಾರ, 2009ರಲ್ಲಿ ಅವರ ಒಬ್ಬ ಮಗ ಅನುಮಾನಾಸ್ಪದವಾಗಿ ಸಾವಿಗೀಡಾದರು. ಮತ್ತೊಬ್ಬ ಮಗ ರಸ್ತೆ ಅಪಘಾತದಲ್ಲಿ ಅಸುನೀಗಿದರು. ಇದಾದ ಒಂದು ವರ್ಷದಲ್ಲಿ ಅವರ ಪತಿ ಶ್ಯಾಮ್ ಚರಣ್ ಮುರ್ಮು ಹೃದಯಾಘಾತದಿಂದ ಸಾವಿಗೀಡಾದರು. ದ್ರೌಪದಿ ಮುರ್ಮು ಅವರ ಮಗಳು ಒಡಿಶಾದಲ್ಲಿ ಬ್ಯಾಂಕ್ ಉದ್ಯೋಗಿಯಾಗಿದ್ದಾರೆ.
ರಾಜಕೀಯ ಪಯಣ
ಜೂನ್ 20, 1958ರಲ್ಲಿ ಸಂತಾಲ ಬುಡಕಟ್ಟು ಜನಾಂಗದಲ್ಲಿ ಜನಿಸಿದ ಮುರ್ಮು ಉತ್ತಮ ವಾಗ್ಮಿಯಾಗಿದ್ದರು. ಜಾರ್ಖಂಡ್‌ನ ಮೊದಲ ಮಹಿಳಾ ರಾಜ್ಯಪಾಲೆಯಾಗಿ ಸೇವೆ ಸಲ್ಲಿಸಿದ ಖ್ಯಾತಿ ಅವರದು.
1997ರಲ್ಲಿ ಒಡಿಶಾದ ರಾಯ್‌ರಾಂಗ್‌ಪುರದ ಬಿಜೆಪಿಯ ಕೌನ್ಸಿಲರ್ ಆಗಿ ತಮ್ಮ ರಾಜಕೀಯ ಪಯಣ ಆರಂಭಿಸಿದರು. 2000-2004ರ ಬಿಜೆಪಿ-ಬಿಜೆಡಿ ಸಮ್ಮಿಶ್ರ ಸರ್ಕಾರದಲ್ಲಿ ಸಚಿವರಾಗಿಯೂ ಕೆಲಸ ಮಾಡಿದ್ಧಾರೆ. 2015ರಲ್ಲಿ ಅವರನ್ನು ಜಾರ್ಖಂಡ್ ರಾಜ್ಯದ ರಾಜ್ಯಪಾಲರಾಗಿ ನೇಮಕ ಮಾಡಲಾಗಿತ್ತು. 2021ರವರೆಗೆ ಅವರು ಅಲ್ಲಿ ಸೇವೆ ಸಲ್ಲಿಸಿದ್ದರು.
2014ರಲ್ಲಿ ರಾಯ್‌ರಾಂಗ್‌ಪುರ ವಿಧಾನಸಭಾ ಕ್ಷೇತ್ರದಲ್ಲಿ ಸ್ಪರ್ಧಿಸಿದ್ದ ಅವರು, ಬಿಜೆಡಿ ಅಭ್ಯರ್ಥಿ ಎದುರು ಸೋತಿದ್ದರು.2021ರಲ್ಲಿ ರಾಜ್ಯಪಾಲೆಯಾಗಿ ಅವಧಿ ಮುಗಿದ ಬಳಿಕ ರಾಯ್‌ರಾಂಗ್‌ಪುರದಲ್ಲಿ ಧ್ಯಾನ ಮತ್ತು ಸಾಮಾಜಿಕ ಕಾರ್ಯಗಳಲ್ಲಿ ತೊಡಗಿಸಿಕೊಂಡಿದ್ದರು