ಬೆಳ್ತಂಗಡಿ: ವೃದ್ಧೆ ಮರ್ಡರ್ ಪ್ರಕರಣ- ಹಣಕ್ಕಾಗಿ ಸಂಬಂಧಿ ಅಜ್ಜಿ ಕಥೆ ಮುಗಿಸಿದವನ ಹೆಡೆಮುರಿ ಕಟ್ಟಿದ ಖಾಕಿ-ಕಹಳೆ ನ್ಯೂಸ್
ಬೆಳ್ತಂಗಡಿ: ವೃದ್ಧೆ ಮರ್ಡರ್ ಪ್ರಕರಣ- ಹಣಕ್ಕಾಗಿ ಸಂಬಂಧಿ ಅಜ್ಜಿ ಕಥೆ ಮುಗಿಸಿದವನ ಹೆಡೆಮುರಿ ಕಟ್ಟಿದ ಖಾಕಿ-ಕಹಳೆ ನ್ಯೂಸ್
ಬೆಳ್ತಂಗಡಿ: ಒಬ್ಬಂಟಿ ವೃದ್ಧೆ ಮನೆಗೆ ನುಗ್ಗಿ ಬರ್ಬರವಾಗಿ ಕೊಲೆಗೈದು ಚಿನ್ನಾಭರಣ ಹಾಗೂ ನಗದು ದರೋಡೆ ಮಾಡಿದ ಪ್ರಕರಣದಲ್ಲಿ ಏಂಟು ಗಂಟೆ ಒಳಗೆ ಆರೋಪಿಯನ್ನು ಧರ್ಮಸ್ಥಳ ಪೊಲೀಸರು ಬಂಧಿಸಿದ್ದಾರೆ.
ಬಂಧಿತ ಆರೋಪಿಯನ್ನು ಅಶೋಕ್ (28) ಎಂದು ಗುರುತಿಸಲಾಗಿದೆ. ಘಟನೆ ವಿವರ ನಿನ್ನೆ ಮಧ್ಯಾಹ್ನ ದಕ್ಷಿಣ ಕನ್ನಡ ಜಿಲ್ಲೆಯ ಬೆಳ್ತಂಗಡಿ ತಾಲೂಕಿನ ಬೆಳಾಲು ಗ್ರಾಮದ ಕೆರೆಕೋಡಿ ಮನೆಯಲ್ಲಿ ಅಕ್ಕು(85) ಎಂಬುವವರು ಕೊಲೆಗೈದ ಸ್ಥಿತಿಯಲ್ಲಿ ಮನೆಯ ಹಿಂಭಾಗ ಪತ್ತೆಯಾಗಿದ್ದರು.
ಜೊತೆಗೆ ವೃದ್ದೆಯ ಕಿವಿಯಲ್ಲಿದ್ದ ಚಿನ್ನಾಭರಣ ಹಾಗೂ ಮನೆಯೊಳಗಿದ್ದ 20 ಸಾವಿರ ನಗದು ಕಳವಾಗಿತ್ತು.
ಈ ಬಗ್ಗೆ ಪ್ರಕರಣ ದಾಖಲಿಸಿದ ಧರ್ಮಸ್ಥಳ ಪೊಲೀಸರು ಶ್ವಾನದಳದೊಂದಿಗೆ ಸ್ಥಳಕ್ಕೆ ಬಂದು ತನಿಖೆ ನಡೆಸಿದಾಗ ಪಕ್ಕದ ಮನೆಯ ನಿವಾಸಿ ಸುದರ್ಶನ್ ಎಂಬಾತ ತನ್ನ ಮನೆಗೆ ಟಿಲ್ಲರ್‌ಗೆ ಡೀಸೆಲ್ ತರಲು ಬೈಕ್‌ನಲ್ಲಿ ಹೋಗಿಬರುತ್ತಿದ್ದಾಗ ಅಕ್ಕು ಮನೆಯಿಂದ ಸಂಬಂಧಿ ಯುವಕ ಅಶೋಕ್ ಹೊರ ಹೋಗುತ್ತಿರುವುದನ್ನು ನೋಡಿದ್ದಾನೆ.
ಈ ಬಗ್ಗೆ ಮಾಹಿತಿ ಪಡೆದ ಅಕ್ಕು ಮಗ ಡೀಕಯ್ಯ ಆತನಿಗೆ ಕರೆ ಮಾಡಿ ಎಲ್ಲಿದ್ದೀಯಾ ಎಂದು ಕೇಳಿದಾಗ ನಾನು ನಾರಾವಿಯಲ್ಲಿದ್ದೇನೆ ಎಂದು ತಿಳಿಸಿದ್ದಾರೆ.
ನಂತರ ಪೊಲೀಸರು ಆತನ ಮೊಬೈಲ್ ನಂಬರ್ ಪಡೆದು ಲೋಕೇಷನ್ ಟ್ರೇಸ್ ಮಾಡಿದಾಗ ಉಜಿರೆಗೆ ಬಂದಿರುವುದು ತಿಳಿದು ಬಂದಿದೆ.
ತಕ್ಷಣವೇ ಧರ್ಮಸ್ಥಳ ಪೊಲೀಸರು ಆತನನ್ನು ಆತನಿದ್ದ ಸ್ಥಳಕ್ಕೆ ತೆರಳಿ ವಶಕ್ಕೆ ಪಡೆದಿದ್ದಾರೆ. ಈ ವೇಳೆ ಆತ ಕಂಠಪೂರ್ತಿ ಕುಡಿದಿದ್ದ ಎಂದು ತಿಳಿದು ಬಂದಿದೆ.
ಆರೋಪಿ ಹಿನ್ನೆಲೆ ಆರೋಪಿ ಅಶೋಕ್ ಸಂಬಂಧದಲ್ಲಿ ಅಕ್ಕುವಿನ ಮಗ ಡೀಕಯ್ಯನ ಹೆಂಡತಿಯ ಅಕ್ಕ ಸುಂದರಿ ಎಂಬಾಕೆಯ ಮಗನಾಗಿದ್ದಾನೆ. ಈತ ಐಸ್‌ಕ್ರೀಂ ವಾಹನದಲ್ಲಿ ಕೆಲಸ ಮಾಡುತ್ತಿದ್ದನು. ಇವನಿಗೆ ವಿಪರೀತ ಕುಡಿತದ ಚಟ ಇತ್ತು. ಸಂಬಂಧಿಯಾದ ಕಾರಣ ಆಗಾಗ ಅಕ್ಕುವಿನ ಮನೆಗೆ ಈತ ಬಂದು ಹೋಗುತ್ತಿದ್ದ. ಕೆಲ ಸಮಯದಿಂದ ಕೆಲಸಕ್ಕೆ ಹೋಗದೇ ಮನೆಯಲ್ಲಿಯೇ ಇದ್ದು, ಕುಡಿಯಲು ಹಣವಿಲ್ಲದೇ ಅಕ್ಕುವಿನ ಮನೆಗೆ ಬಂದು ಆಕೆಯನ್ನೇ ಕೊಲೆಗೈದಿದ್ದಾನೆ.
ತನಿಖೆಯಲ್ಲಿ ಬೆಳ್ತಂಗಡಿ ಸರ್ಕಲ್ ಇನ್ಸ್‌ಪೆಕ್ಟರ್ ಶಿವಕುಮಾರ್, ಧರ್ಮಸ್ಥಳ ಠಾಣೆಯ ಪಿಎಸ್ಐ ಕೃಷ್ಣಕಾಂತ್ ಪಾಟೀಲ್, ಮಂಗಳೂರು ಎಫ್.ಎಸ್.ಎಲ್ ತಂಡದ ಡಿವೈಎಸ್ಪಿ ಗೌರೀಶ್ ಹಾಗೂ ಸಿಬ್ಬಂದಿ ಭಾಗವಹಿಸಿದ್ದರು.