ಕಾಸರಗೋಡು: ಸಾಲದ ಸುಳಿಯಲ್ಲಿ ಸಿಲುಕಿರುವ ಪೇಂಟರ್ ಒಬ್ಬರು ಮಂಜೇಶ್ವರದಲ್ಲಿ ಹೊಸದಾಗಿ ನಿರ್ಮಿಸಿದ ತನ್ನ ಮನೆಗೆ ಟೋಕನ್ ಹಣ ಸ್ವೀಕರಿಸುವ ಎರಡು ಗಂಟೆ ಮೊದಲು 1 ಕೋಟಿ ರೂ. ಲಾಟರಿ ಬಹುಮಾನ ಗೆದ್ದ ಘಟನೆ ನಡೆದಿದೆ.
ಲಾಟರಿ ಜಯಿಸಿರುವ ಮುಹಮ್ಮದ್ ಬಾವ, ನಾನು ನಮ್ಮ ಮನೆಯನ್ನು ಉಳಿಸುವಲ್ಲಿ ಯಶಸ್ವಿಯಾಗಿದ್ದೇನೆ. ನನಗೆ ಇನ್ನೂ ನಂಬಲು ಸಾಧ್ಯವಾಗುತ್ತಿಲ್ಲ ಎಂದು ತಿಳಿಸಿದ್ದಾರೆ.
ಭಾರಿ ಸಾಲದ ಸುಳಿಯಲ್ಲಿ ತತ್ತರಿಸಿರುವ ಬಾವ ಎಂಟು ತಿಂಗಳ ಹಿಂದೆ ನಿರ್ಮಿಸಿದ 2000 ಚದರ ಅಡಿಯ ತಮ್ಮ ಮನೆಯನ್ನು ಮಾರಾಟಕ್ಕೆ ಇಟ್ಟಿದ್ದರು. ಖರೀದಿದಾರರೊಬ್ಬರೊಂದಿಗೆ ಮಾತುಕತೆಯೂ ಯಶಸ್ಸಾಗಿತ್ತು. ಭಾನುವಾರ ಸಂಜೆ 5 ಗಂಟೆಗೆ ಖರೀದಿದಾರರು ಟೋಕನ್ ಹಣದೊಂದಿಗೆ ಮನೆಗೆ ಬರುವುದಾಗಿ ಒಪ್ಪಿಕೊಂಡಿದ್ದರು.
ನಮಗೆ 45 ಲಕ್ಷ ರೂ. ಸಾಲ ಇರುವುದರಿಂದ ಮನೆಯನ್ನು 45 ಲಕ್ಷ ರೂ.ಗೆ ಮಾರಬೇಕಾಗಿತ್ತು. ಆದರೆ ದಲ್ಲಾಳಿ ಮತ್ತು ಖರೀದಿದಾರರು 40 ಲಕ್ಷ ರೂ.ಗೆ ಖರೀದಿಸಲು ಒಪ್ಪಿತ್ತು ಎಂದು ಬಾವ ತಿಳಿಸಿದರು. ಆದರೆ ದಂಪತಿ ಆ ದಿನ ಸಂಜೆ ಖರೀದಿದಾರರು ಕೊಡುವ ಯಾವುದೇ ಹಣಕ್ಕೆ ಮನೆಯನ್ನು ಮಾರಲು ಮತ್ತು ಶಾಲೆಗೆ ಹೋಗುವ ಹೆಣ್ಣುಮಕ್ಕಳೊಂದಿಗೆ ಬಾಡಿಗೆ ಮನೆಗೆ ತೆರಳಲು ನಿರ್ಧರಿಸಿದ್ದರು.
ಅದೇ ದಿನದ 1 ಗಂಟೆ ಸುಮಾರಿಗೆ ಕೇರಳ ಸರ್ಕಾರದ ಫಿಫ್ಟಿ-ಫಿಫ್ಟಿ ಲಾಟರಿಯ ನಾಲ್ಕು ಟಿಕೆಟ್’ಗಳನ್ನು ಖರೀದಿಸಿದರು. ಅಂದು ಮಧ್ಯಾಹ್ನ 3 ಗಂಟೆಗೆ ಲಾಟರಿ ಡ್ರಾ ಆಗಿದ್ದು, ಜಾಕ್ ಪಾಟ್ ಹೊಡೆದಿರುವ ಬಗ್ಗೆ ಬಾವ ಅವರಿಗೆ ತಿಳಿಸಲಾಯಿತು. ತೆರಿಗೆ ಕಡಿತದ ಬಳಿಕ ಸುಮಾರು 63 ಲಕ್ಷ ರೂ. ಬಹುಮಾನ ಲಭಿಸಿದೆ. ಇದರಿಂದಾಗಿ ನಾವು ಮನೆ ಮಾರಾಟ ಮಾಡಲಿಲ್ಲ ಎಂದು ಬಾವ ಮಾಧ್ಯಮಕ್ಕೆ ತಿಳಿಸಿದರು.