Sunday, January 19, 2025
ರಾಜಕೀಯ

2 ಲಕ್ಷ ವರೆಗಿನ ರೈತರ ಸಾಲ ಮನ್ನಾ ; ಯಾವೆಲ್ಲ ರೈತರು ಸಾಲಮನ್ನಾಗೆ ಅರ್ಹರಾಗುತ್ತಾರೆ ಗೊತ್ತಾ ? – ಕಹಳೆ ನ್ಯೂಸ್

ಬೆಂಗಳೂರು: ಮೊಟ್ಟ ಮೊದಲ ಬಾರಿಗೆ ಇಂದು ಮುಖ್ಯಮಂತ್ರಿ ಎಚ್.ಡಿ ಕುಮಾರಸ್ವಾಮಿ 2018-19ರ ಬಜೆಟ್ ಮಂಡಿಸುತ್ತಿದ್ದಾರೆ. ಇಂದಿನ ಕುಮಾರಸ್ವಾಮಿ ಬಜೆಟ್ ನಲ್ಲಿ ನಿರೀಕ್ಷೆಗಳ ಭಾರವೇ ಇದೆ. 95 ಪುಟಗಳ ಬಜೆಟ್ ಆಗಿದ್ದು, ಇಂದಿನ ಬಜೆಟ್ ಗಾತ್ರ 2 ಲಕ್ಷ 18 ಸಾವಿರ 488 ಕೋಟಿ ರೂ. ಆಗಿದೆ.

ರೈತರ ಕೃಷಿ ಚಟುವಟಿಕೆಗಳಿಗಾಗಿ ಮಾಡಿರುವ ಎಲ್ಲಾ ಬಗೆಯ ಬೆಳೆ ಸಾಲವನ್ನು ನಮ್ಮ ಪಕ್ಷದ ಪೂರ್ಣ ಸರ್ಕಾರ ರಚನೆಯಾದ 24 ಗಂಟೆಯಲ್ಲಿಯೇ ಮನ್ನಾ ಮಾಡಲು ನಾನು ಸಂಕಲ್ಪ ತೊಟ್ಟಿದ್ದೆ. ಆದರೆ ನಾಡಿನ ಜನತೆ ಏಕಪಕ್ಷದ ಸರ್ಕಾರ ರಚನೆಗೆ ಬೇಕಾಗಿರುವ ಆಶೀರ್ವಾದ ಮಾಡಲಿಲ್ಲವಾದರೂ ಮೈತ್ರಿ ಸರ್ಕಾರ ರಚಿಸಿ, ಆ ಕೂಟದ ಮುಖ್ಯಮಂತ್ರಿಯಾಗಿ ಕೆಲಸ ಮಾಡುವ ಸದಾವಕಾಶ್ವನ್ನು ನನಗೆ ಒದಗಿಸಿದೆ ಎಂದು ಕುಮಾರಸ್ವಾಮಿ ಭಾಷಣದಲ್ಲಿ ಹೇಳಿದರು.

ಜಾಹೀರಾತು
ಜಾಹೀರಾತು
ಜಾಹೀರಾತು

ರೈತರ ಬೆಳೆ ಸಾಲದ ಬಗ್ಗೆ ಸರ್ಕಾರಿ ಅಧಿಕಾರಿಗಳೊಂದಿಗೆ, ರಾಷ್ಟ್ರೀಕೃತ ಬ್ಯಾಂಕ್, ಸಹಕಾರಿ ಕ್ಷೇತ್ರದ ಅಧಿಕಾರಿಗಳು ಹಾಗೂ ರೈತ ಸಮೂದಾಯದೊಂದಿಗೆ ಚರ್ಚೆ ಮಾಡಿದ್ದೇನೆ. ಈ ಚರ್ಚೆಯ ಫಲಶೃತಿಯಾಗಿ ಮೊದಲ ಹಂತದಲ್ಲಿ 2017 ಡಿಸೆಂಬರ್ 31ರವರೆಗೆ ರೈತರು ಮಾಡಿದ ಎಲ್ಲಾ ಸುಸ್ತಿ ಬೆಳೆ ಸಾಲವನ್ನು ಒಂದೇ ಹಂತದಲ್ಲಿ ಮನ್ನಾ ಮಾಡಲು ತೀರ್ಮಾನಿಸಿರುತ್ತೇನೆ. ಇದಲ್ಲದೆ ಸಕಾಲದಲ್ಲಿ ಸಾಲ ಮರುಪಾವತಿ ಮಾಡಿರುವ ರೈತರಿಗೂ ಸಹ ಅನುಕೂಲ ಮಾಡಿಕೊಡಲು ಸುಸ್ತಿದಾರರಲ್ಲದ ರೈತ ಸಾಲ ಖಾತೆಗಳಿಗೆ ಉತ್ತೇಜನಕಾರಿಯಾಗಿ ಪ್ರತಿ ಖಾತೆಗೆ ಅವರು ಮರುಪಾವತಿ ಮಾಡಿರುವ ಸಾಲದ ಮೊತ್ತ ಅಥವಾ 25,000 ರೂ. ಗಳಲ್ಲಿ ಯಾವುದು ಕಡಿಮೆಯೋ ಅದನ್ನು ತುಂಬಲು ನಾನು ನಿರ್ಧರಿಸಿದ್ದೇನೆ ಎಂದರು.

ಜಾಹೀರಾತು
ಜಾಹೀರಾತು
ಜಾಹೀರಾತು

ಕೃಷಿಕರ ಬೆಳೆ ಸಾಲ ಮನ್ನಾ ವಿಷಯವನ್ನು ಪೂರ್ಣವಾಗಿ ಪರಿಶೀಲಿಸಿದಾಗ ದೊಡ್ಡ ಭು ಹಿಡುವಳಿ ಹೊಂದಿರುವ ರೈತರ ಸಾಲಗಳು 40 ಲಕ್ಷ ಮೀರಿದಂತಹ ಪ್ರಸಂಗಗಳು ಸಹ ಕಂಡು ಬಂದಿವೆ. ಈ ಹಿನ್ನಲೆಯಲ್ಲಿ ಹೆಚ್ಚಿದ ಮೊತ್ತದ ಬೆಳೆ ಸಾಲವನ್ನು ಮನ್ನಾ ಮಾಡುವುದು ಸರಿಯಾದ ಕ್ರಮವಲ್ಲ ಎನ್ನವ ರೈತ ಸಮುದಾಯದ ಅಭಿಪ್ರಾಯದ ಹಿನ್ನೆಯಲ್ಲಿ ಸಾಲದ ಮೊತ್ತವನ್ನು ಪ್ರತಿ ರೈತ ಕುಟುಂಬಕ್ಕೆ 2 ಲಕ್ಷ ರೂ.ಗಳಿಗೆ ಮಿತಿಗೊಳಿಸಲು ನಿರ್ಧರಿಸಲಾಗಿದೆ ಎಂದು ತಿಳಿಸಿದರು.

ಈ ಬೆಳೆ ಸಾಲ ಮನ್ನಾ ಯೋಜನೆಯಿಂದ ಸುಮಾರು 34,000 ಕೋಟಿ ರೂ. ಗಳ ಮೊತ್ತದ ಪ್ರಯೋಜನ ರೈತರಿಗೆ ದೊರೆಯಲಿದೆ. ಸರ್ಕಾರಿ ಅಧಿಕಾರಿಗಳು ಮತ್ತು ಸಹಕಾರಿ ಕ್ಷೇತ್ರದ ಅಧಿಕಾರಿಗಳ ಕುಟುಂಬಗಳು ಹಾಗೂ ಕಳೆದ 3 ವರ್ಷಗಳಲ್ಲಿ ಆದಾಯ ತೆರಿಗೆ ಕಟ್ಟಿರುವಂತಹ ರೈತರುಗಳು ಹಾಗೂ ಇತರೆ ಅನರ್ಹ ಕೃಷಿ ಸಾಲಗಾರರು ಈ ಸಾಲ ಮನ್ನಾ ಯೋಜನೆಯಿಂದ ಹೊರಗೆ ಇರಲಿದ್ದಾರೆ.

ರೈತರಿಗೆ ಹೊಸ ಸಾಲ ಪಡೆಯಲು ಅನುಕೂಲವಾಗುವಂತೆ ಸರ್ಕಾರವು ಅವರ ಸುಸ್ತಿ ಖಾತೆಯಲ್ಲಿರುವ ಬಾಕಿಯನ್ನು ಮನ್ನಾ ಮಾಡಿ ಋಣಮುಕ್ತ ಪತ್ರವನ್ನು ನೀಡಲು ಕ್ರಮ ಕೈಗೊಳ್ಳಲಿದೆ. ಈ ಉದ್ದೇಶಕ್ಕಾಗಿ 2018-19ರ ಆಯವ್ಯಯದಲ್ಲಿ 6,500 ಕೋಟಿ ರೂ. ನಿಗದಿಪಡಿಸಿರುತ್ತೇನೆ. ಇದಲ್ಲದೆ ಹಿಂದಿನ ಸರ್ಕಾರವು ಸಹಕಾರಿ ಬ್ಯಾಂಕ್ ಗಳಲ್ಲಿ ರೈತರು ಮಾಡಿದ ಸುಮಾರು 8,165 ಕೋಟಿ ರೂ. ಸಾಲ ಮನ್ನಾ ಮಾಡಿ ಅದರಲ್ಲಿ 4,165 ಕೋಟಿ ರೂ.ಗಳನ್ನು ಹಿಂದಿನ ವರ್ಷ ಬಿಡುಗಡೆ ಮಾಡಿದೆ. ಉಳಿದ 4,000 ಕೋಟಿ ರು.ಗಲನ್ನು ಸಹ ಪಾವತಿ ಮಾಡಲು ಈ ಆಯವ್ಯಯದಲ್ಲಿ ಅವಕಾಶ ಕಲ್ಪಿಸಲಾಗಿದೆ.