ಪ್ರವೀಣ್ ಹತ್ಯೆ ಬೆನ್ನಲ್ಲೇ ಜನೋತ್ಸವ ಸಾಧನಾ ಸಮಾವೇಶ ಮಾಡಲು ಹೊರಟ ಸಿಎಂಗೆ ಹೈಕಮಾಂಡ್ ತೀವ್ರ ತರಾಟೆ ; ” ರಕ್ತದೋಕುಳಿಯ ಸ್ವಾಗತ ನಮಗೆ ಬೇಡ. ಜನೋತ್ಸವ ಕಾರ್ಯಕ್ರಮಕ್ಕೆ ಬರಲ್ಲ ” ಎಂದು ಪಕ್ಷದ ಅಧ್ಯಕ್ಷ ಜೆ.ಪಿ.ನಡ್ಡಾ ಖಡಕ್ ಸಂದೇಶ – ಕಹಳೆ ನ್ಯೂಸ್
ಬೆಂಗಳೂರು: ಪ್ರವೀಣ್ ಹತ್ಯೆ ಬೆನ್ನಲ್ಲೇ ರಾಜ್ಯದಲ್ಲಿ ಬಿಜೆಪಿ ಕಾರ್ಯಕರ್ತರ ಆಕ್ರೋಶ ಭುಗಿಲೆದ್ದಿದೆ. ಸ್ವಪಕ್ಷದ ವಿರುದ್ಧ ಕಾರ್ಯಕರ್ತರ ಜೊತೆಗೆ ಕೆಲ ನಾಯಕರೂ ಕಿಡಿಕಾರುತ್ತಿದ್ದಾರೆ. ಈ ಹೊತ್ತಲ್ಲಿ ಜನೋತ್ಸವ ಸಾಧನಾ ಸಮಾವೇಶ ಮಾಡಲು ಹೊರಟ ಸಿಎಂ ಅವರನ್ನು ಹೈಕಮಾಂಡ್ ತೀವ್ರ ತರಾಟೆಗೆ ತೆಗೆದುಕೊಂಡಿತ್ತು.
ರಕ್ತದೋಕುಳಿಯ ಸ್ವಾಗತ ನಮಗೆ ಬೇಡ. ಜನೋತ್ಸವ ಕಾರ್ಯಕ್ರಮಕ್ಕೆ ಬರಲ್ಲ ಎಂದು ಪಕ್ಷದ ಅಧ್ಯಕ್ಷ ಜೆ.ಪಿ.ನಡ್ಡಾ ಖಡಕ್ ಸಂದೇಶ ರವಾನೆ ಮಾಡಿದ್ದರು. ದೂರವಾಣಿ ಮೂಲಕ ಸಿಎಂ ಬೊಮ್ಮಾಯಿ, ರಾಜ್ಯಾಧ್ಯಕ್ಷ ನಳಿನ್ ಕುಮಾರ್ ಕಟೀಲ್‍ಗೆ ಬಿಸಿ ಮುಟ್ಟಿಸಿದ್ದರು.
ಘಟನೆಯ ಎಲ್ಲ ಮಾಹಿತಿ ಪಡೆದುಕೊಂಡಿದ್ದ ಹೈಕಮಾಂಡ್ ನಾಯಕರು, ನಾವು ಈಗ ಜನೋತ್ಸವ ಮಾಡಿದರೆ ಕಾರ್ಯಕರ್ತರಿಗೆ ಕೊಡುವ ಸಂದೇಶ ಏನು? ಕಾರ್ಯಕರ್ತನ ಹತ್ಯೆಯಾಗಿರುವಾಗ ನಾವು ಬಂದು ಸರ್ಕಾರದ ಸಾಧನೆ ಬಗ್ಗೆ ಮಾತನಾಡಬೇಕೇ? ನಮಗೆ ಕಾರ್ಯಕರ್ತರೇ ಮುಖ್ಯ ಎನ್ನುವುದನ್ನು ಸಾಬೀತುಪಡಿಸಿ ಅಂತ ಕ್ಲಾಸ್ ತೆಗೆದುಕೊಂಡಿದ್ದಾರೆ.
ಹೈಕಮಾಂಡ್ ಸಂದೇಶದ ಬೆನ್ನಲ್ಲೇ ಎಚ್ಚೆತ್ತ ಸಿಎಂ ಬೊಮ್ಮಾಯಿ, ರಾಜ್ಯಾಧ್ಯಕ್ಷ ಕಟೀಲ್ ಮತ್ತು ಸಚಿವ ಸುಧಾಕರ್ ಅವರನ್ನು ತಮ್ಮ ನಿವಾಸಕ್ಕೆ ಕರೆಸಿಕೊಂಡು ಚರ್ಚೆ ನಡೆಸಿದರು. ಬಳಿಕ ಸುದ್ದಿಗೊಷ್ಠಿ ನಡೆಸಿ ಜನೋತ್ಸವ ಕಾರ್ಯಕ್ರಮ ರದ್ದುಗೊಳಿಸಿದರು.