ಮಂಗಳೂರು, ಜು06: ಕರ್ನಾಟಕ ರಾಜ್ಯದ 2018-19ನೇ ಸಾಲಿನ ಸಮ್ಮಿಶ್ರ ಸರಕಾರದ ಬಜೆಟ್ ಕರಾವಳಿಯನ್ನು ಕಡೆಗಣಿಸಿದ್ದು, ಈ ಹಿನ್ನೆಲೆ ಮಂಗಳೂರಿನಲ್ಲಿ ವಿದ್ಯಾರ್ಥಿಗಳು ಸರ್ಕಾರದ ವಿರುದ್ಧ ಆಕ್ರೋಶ ವ್ಯಕ್ತಪಡಿಸಿದ್ದಾರೆ.
ಮಂಗಳೂರಿನ ಜಿಲ್ಲಾಧಿಕಾರಿ ಕಚೇರಿ ಬಳಿ ಎಬಿವಿಪಿ ವತಿಯಿಂದ ನಡೆದ ಪ್ರತಿಭಟನೆಯಲ್ಲಿ, ರಾಜ್ಯ ಸರಕಾರದ ಧೋರಣೆ ಖಂಡಿಸಿ ವಿದ್ಯಾರ್ಥಿಗಳು ಆಕ್ರೋಶ ವ್ಯಕ್ತಪಡಿಸಿದ್ದಾರೆ. ರಾಜ್ಯದ ಬಜೆಟ್ ವಿದ್ಯಾರ್ಥಿಗಳಿಗೆ ನಿರಾಸೆ ಮೂಡಿಸಿದ ಬಜೆಟ್. ಕೇವಲ ವಿದ್ಯಾರ್ಥಿಗಳನ್ನು ಮಾತ್ರವಲ್ಲದೆ ಶಿಕ್ಷಕರಿಗೂ ಈ ಬಜೆಟ್ ನಿರಾಸೆಯನ್ನುಂಟು ಮಾಡಿದೆ ಎಂದು ಪ್ರತಿಭಟನೆಯಲ್ಲಿ ವಿದ್ಯಾರ್ಥಿಗಳು ಗಂಭೀರ ಆರೋಪ ಮಾಡಿದ್ದಾರೆ.
ಬಜೆಟ್‌ನಲ್ಲಿ ಬೇರೆ ಜಿಲ್ಲೆಗಳಿಗೆ ಭರಪೂರ ಕೊಡುಗೆ ಘೋಷಿಸಿದ್ದಾರೆ. ಆದರೆ ಕರಾವಳಿ ಜಿಲ್ಲೆಗೆ ಯಾವುದೇ ಅನುದಾನ ಘೋಷಣೆ ಮಾಡದೇ ಸಿಎಂ ತಾರತಮ್ಯದ ಪ್ರದರ್ಶನ ಮಾಡಿದ್ದಾರೆ. ಸರಕಾರದ ಈ ನಿರ್ಲಕ್ಷ್ಯಕ್ಕೆ ಎಬಿವಿಪಿ ಸಂಘಟನೆಯಿಂದ ತೀವ್ರ ವಿರೋಧವಿದೆ ಎಂದು ಪ್ರತಿಭಟನಾಕಾರರು ತಿಳಿಸಿದ್ದಾರೆ.