ಇಂದು ಪುತ್ತೂರಿಗೆ ಎನ್‌ಐಎ ತಂಡ |<br>ಕೇರಳಕ್ಕೆ ವಿಸ್ತರಿಸಿದ ಪ್ರವೀಣ್ ನೆಟ್ಟಾರು ಹತ್ಯಾ ತನಿಖೆ ತಲಶ್ಶೇರಿಯಲ್ಲಿ ಕರ್ನಾಟಕ ಪೊಲೀಸರ ಕಾರ್ಯಾಚರಣೆ – ಓರ್ವ ವಶಕ್ಕೆ ; ವಿಧಿವಿಜ್ಞಾನ ಪ್ರಯೋಗಾಲಯದ ಮೊರೆ ಹೋದ ಪೊಲೀಸರು – ಕಹಳೆ ನ್ಯೂಸ್
ಪುತ್ತೂರು : ಹಿಂದು ಮುಖಂಡ ಪ್ರವೀಣ್ ನೆಟ್ಟಾರು ಹತ್ಯೆಪ್ರಕರಣವನ್ನು ರಾಜ್ಯ ಸರ್ಕಾರ ಗಂಭಿರವಾಗಿ ಪರಿಗಣಿಸಿ ಎನ್‌ಐಎಗೆ ವಹಿಸಿದ್ದು, ಭಾನುವಾರ ಎನ್‌ಐಎ ತಂಡದ ಪುತ್ತೂರಿಗೆ ಆಗಮಿಸುವ ಮಾಹಿತಿ ಲಭ್ಯವಾಗಿದೆ.
ಪುತ್ತೂರು ಸುಳ್ಯ ಹಾಗೂ ಬೆಳ್ಳಾರೆ ಪ್ರದೇಶಕ್ಕೆ ಎನ್‌ಐಎ ತಂಡ ಬೇಡಿ ನೀಡುವ ಸಾಧ್ಯತೆ ಇದೆ. ಜತೆಗೆ ಹತ್ಯೆಪ್ರಕರಣದ ಮಾಹಿತಿ ಕಲೆ ಹಾಕಲು ರಾಜ್ಯ ಗುಪ್ತ ವಾರ್ತೆ ವಿಭಾಗದ ಒಂದು ತಂಡ ಜಿಲ್ಲೆಗೆ ಆಗಮಿಸಿದ್ದು, 3 ದಿನದಿಂದ ಬೆಳ್ಳಾರೆ ಹಾಗೂ ಗಡಿನಾಡು ಪ್ರದೇಶದಲ್ಲಿ ಬೀಡುಬಿಟ್ಟಿದೆ. ಎನ್‌ಐಎ ತಂಡಕ್ಕೆ ರಾಜ್ಯ ಗುಪ್ತ ವಾರ್ತೆ ವಿಭಾಗವೂ ಸಹಕಾರ ನೀಡಲಿದೆ. ಚಿಕನ್, ಮಟನ್, ಮೀನು ಮಾರಾಟ ಮಾಡುವ ದಂಧೆ ಮುಸ್ಲಿಂಮರ ಹಿಡಿತದಲ್ಲಿದ್ದುದ್ದರಿಂದ ಪ್ರವೀಣ್ ಅವರ ಪ್ರೇರಣೆಯಿಂದ ಹಿಂದೂಗಳೂ ವ್ಯಾಪಾರಕ್ಕೆ ಪ್ರತಿಸ್ಪರ್ಧೆ ನೀಡಿದ್ದರು ಎಂಬ ಮಾಹಿತಿ ಆಧಾರದಲ್ಲಿ ಬೆಳ್ಳಾರೆ ಸ್ಥಳೀಯ ಗ್ರಾಪಂನಲ್ಲಿ ಇತ್ತೀಚೆಗೆ ನಡೆದ ಮಾರುಕಟ್ಟೆ ಏಲಂ ವಿಚಾರವಾಗಿ ತನಿಖೆ ನಡೆಸಲು ಪೊಲೀಸರು ತೀರ್ಮಾನಿಸಿದ್ದು, ಎನ್‌ಐಎ ತಂಡಕ್ಕೆ ಈ ವಿಚಾರದ ಬಗ್ಗೆ ಪೊಲೀಸರು ಮಾಹಿತಿ ನೀಡಿದ್ದಾರೆ.
ಕೇರಳಕ್ಕೆ ವಿಸ್ತರಿಸಿದ ಪ್ರವೀಣ್ ನೆಟ್ಟಾರು ಹತ್ಯಾ ತನಿಖೆ :
ಹಿಂದು ಮುಖಂಡ ಪ್ರವೀಣ್ ನೆಟ್ಟಾರು ಹತ್ಯಾ ತನಿಖೆ ಕೆರಳಕ್ಕೆ ವಿಸ್ತರಣೆಗೊಂಡಿದ್ದು, ಶನಿವಾರ ಕೆರಳದ ತಲಶ್ಶೇರಿಯಲ್ಲಿ ಕರ್ನಾಟಕದ ಪೋಲೀಸ್ ಕಾರ್ಯಾಚರಣೆ ನಡೆಸಿ ಓರ್ವನನ್ನು ವಶಕ್ಕೆ ಪಡೆದುಕೊಂಡಿದ್ದಾರೆ. ಹಿಂದು ಮುಖಂಡ ಪ್ರವೀಣ್ ನೆಟ್ಟಾರು ಹತ್ಯೆಗೆ ನೆರವಾದ ಶಂಕೆಯಲ್ಲಿ ಶನಿವಾರ ಪೊಲೀಸರು ಕೇರಳದ ತಲಶ್ಶೇರಿಯಲ್ಲಿ ಪರಲ್ ನಿವಾಸಿ ಅಬೀದ್(26) ಎಂಬವನನ್ನು ವಶಕ್ಕೆ ಪಡೆದಿದ್ದಾರೆ. ತನಿಖೆಗೆ ಪೊಲೀಸರ 6 ತಂಡಗಳನ್ನು ರಚಿಸಲಾಗಿತ್ತು. ಒಂದು ತಂಡ ಕೇರಳದಲ್ಲಿ ಕಾರ್ಯಾಚರಣೆ ನಡೆಸುತ್ತಿದೆ. ಈಗಾಗಲೇ ಬಂಧಿತ ಆರೋಪಿಗಳಾದ ಜಾಕಿರ್ ಮತ್ತು ಶಫೀಕ್ ಪೊಲೀಸರ ತಂಡದ ಮುಂದೆ ಕೆಲವು ಮಹತ್ತರ ಮಾಹಿತಿ ನೀಡಿದ್ದು, ಈ ಹಿನ್ನೆಲೆಯಲ್ಲಿ ಕೆರಳದಲ್ಲಿ ತನಿಖೆ ನಡೆಸುತ್ತಿರುವ ಕರ್ನಾಟಕ ಪೊಲೀಸರ ತಂಡಕ್ಕೆ ಮಹತ್ತರ ಮಾಹಿತಿ ನೀಡಲಾಗಿದೆ. ಆದರೆ ಪ್ರವೀಣ್ ನೆಟ್ಟಾರು ಹತ್ಯೆ ತನಿಖೆಗೆ ಕರ್ನಾಟಕದ ಪೊಲೀಸರಿಗೆ ಕೇರಳ ಪೊಲೀಸರಿಂದ ಯಾವುದೇ ಸಹಕಾರ ನೀಡದೆ ಇದ್ದುದರಿಂದ ನೇರವಾಗಿ ಕರ್ನಾಟಕದ ಪೊಲೀಸರೇ ಕಾರ್ಯಾಚರಣೆ ನಡೆಸಿ ಆರೋಪಿಯನ್ನು ವಶಕ್ಕೆ ಪಡೆದಿದ್ದಾರೆ.
ಬಂಧಿತ ಆರೋಪಿಗಳು ಪೊಲೀಸ್ ಕಸ್ಟಡಿಗೆ :
ಪ್ರವೀಣ್ ಹತ್ಯೆಗೆ ಸಹಕರಿಸಿದ ಆರೋಪಿಗಳಾದ ಜಾಕಿರ್ ಮತ್ತು ಶಫೀಕ್‌ನನ್ನು ಈಗಾಗಲೇ ಪೊಲೀಸರು ಬಂಧಿಸಿ ನ್ಯಾಯಾಂಗ ಬಂಧನಕ್ಕೆ ಒಪ್ಪಿಸಿದ್ದಾರೆ. ಈಮಧ್ಯೆ ಆರೋಪಿಗಳನ್ನು ಪೊಲೀಸ್ ಕಸ್ಟಡಿಗೆ ನೀಡುವಂತೆ ಮನವಿ ಮಾಡಿದ್ದು, ನ್ಯಾಯಾಲಯವು ಆರೋಪಿಗಳಾದ ಜಾಕಿರ್ ಮತ್ತು ಶಫೀಕ್‌ನನ್ನು ಐದು ದಿನಗಳ ಕಾಲ ಪೊಲೀಸ್ ಕಸ್ಟಡಿಗೆ ಒಪ್ಪಿಸಿ ಆದೇಶ ಹೊರಡಿಸಿದೆ. ಆರೋಪಿಗಳಾದ ಜಾಕಿರ್ ಮತ್ತು ಶಫೀಕ್‌ನ್ನು ಪೊಲೀಸರು ಗೌಪ್ಯ ಸ್ಥಳಕ್ಕೆ ಕರೆದೊಯ್ದು ತೀವ್ರ ವಿಚಾರನೆ ನಡೆಸುತ್ತಿದ್ದಾರೆ ಎಂಬ ಮಾಹಿತಿ ಕಹಳೆ ನ್ಯೂಸ್ ಗೆ ಲಭ್ಯವಾಗಿದೆ.
ವಿಧಿವಿಜ್ಞಾನ ಪ್ರಯೋಗಾಲಯದ ಮೊರೆ ಹೋದ ಪೊಲೀಸರು :
ಪ್ರವೀಣ್ ನೆಟ್ಟಾರು ಹತ್ಯಾ ತನಿಖೆ 2 ದಿನಗಳಿಂದ ಯಾವುದೇ ಪ್ರಗತಿ ಕಾಣುತ್ತಿಲ್ಲ. ಈ ಹಿನ್ನೆಲೆಯಲ್ಲಿ ಪೊಲೀಸರ ತಂಡ ವಿಧಿವಿಜ್ಞಾನ ಪ್ರಯೋಗಾಲಯದ ಮೊರೆ ಹೋಗಿದೆ. ಈಗಾಗಲೇ ಬೆಂಗಳೂರಿನ ಮಡಿವಾಳದಲ್ಲಿರುವ ವಿಧಿವಿಜ್ಞಾನ ಪ್ರಯೋಗಾಲಯಕ್ಕೆ ಕೆಲವು ಹತ್ತರ ದಾಖಲೆ ರವಾಣಿಸಿದ್ದು, ಹೈದರಬಾದಿನ ವಿಧಿವಿಜ್ಞಾನ ಪ್ರಯೋಗಾಲಯದ ಅಧಿಕಾರಿಗಳು ಸಾಕ್ಷೃ ಪರಿಶೀಲನೆ ನೀಡೆಸುತ್ತಿದ್ದಾರೆ. ಆರೋಪಿಗಳ ಮೊಬೈಲ್, ಸಾಮಾಜಿಕ ಜಾಲತಾಣ, ಈ ಮೆಲ್, ಫೋನ್ ಕರೆ ಸೇರಿದಂತೆ ವಿವಧ ಸಂಪರ್ಕ ಸಾಧನಗಳ ಟ್ರಾಪಿಂಗ್ ಹಾಗೂ ಪೂರ್ವಪರಿಶಿಲನೆ ನಡೆಸಲಾಗುತ್ತದೆ.