ಪ್ರವೀಣ್ ನೆಟ್ಟಾರು ಮನೆಗೆ ಕೇಂದ್ರ ಸಚಿವೆ ಶೋಭಾ ಕರಂದ್ಲಾಜೆ ಭೇಟಿ : “ಕೇರಳದಲ್ಲಿ ನಡೆಯುವ ಕೊಲೆಗಳ ಮಾದರಿಯಲ್ಲೇ ಪ್ರವೀಣ್ ಕೊಲೆಯಾಗಿದೆ” – ಶೋಭಾ ಕರಂದ್ಲಾಜೆ- ಕಹಳೆ ನ್ಯೂಸ್
ಪತ್ತೂರು : ದುಷ್ಕರ್ಮಿಗಳ ದಾಳಿಯಿಂದ ಮೃತಪಟ್ಟ ಬಿಜೆಪಿ ಯುವಮೊರ್ಚಾ ನಾಯಕ ಪ್ರವೀಣ್ ನೆಟ್ಟಾರು ಮನೆಗೆ ಕೇಂದ್ರ ಸಚಿವೆ ಶೋಭಾ ಕರಂದ್ಲಾಜೆ ಭೇಟಿ ನೀಡಿ ಸಾಂತ್ವನ ಹೇಳಿದರು. ಸಚಿವೆ ಶೋಭಾ ಕರಂದ್ಲಾಜೆ ಈ ಸಂದರ್ಭ ಪ್ರವೀಣ್ ಅವರ ಕುಟುಂಬಕ್ಕೆ 5 ಲಕ್ಷ ರೂ. ನಗದು ಪರಿಹಾರ ನೀಡಿದರು. ಅಲ್ಲದೆ ಒಂದು ತಿಂಗಳ ಸಂಬಳ ನೀಡುವುದಾಗಿ ಘೋಷಣೆ ಮಾಡಿದರು.
ಬಳಿಕ ಮಾಧ್ಯಮಗಳ ಜೊತೆ ಮಾತನಾಡಿದ ಅವರು “ಪ್ರವೀಣ್ ಕೊಲೆ ಕೇರಳ ಮಾದರಿಯಲ್ಲಿ ನಡೆದ ಕೊಲೆಯಾಗಿದ್ದು, ಪ್ಯಾಪ್ಯುಲರ್ ಫ್ರಂಟ್ ಆಫ್ ಇಂಡಿಯಾದ ಕಾರ್ಯಕರ್ತರು ಇದೇ ರೀತಿಯ ಕೊಲೆಗಳನ್ನು ಕೇರಳದಲ್ಲಿ ಸಾಕಷ್ಟು ಮಾಡಿದ್ದಾರೆ. ಸಿರಿಯಾ, ಪಾಕಿಸ್ತಾನದಲ್ಲಿ ತರಭೇತಿ ಪಡೆದು ಭಾರತದಲ್ಲಿ ಈ ಕೃತ್ಯವನ್ನು ನಡೆಸುತ್ತಿದ್ದಾರೆ ಎನ್ನುವ ಮಾಹಿತಿ ಇದೆ” ಎಂದರು. ಕುತ್ತಿಗೆಯಿಂದ ಮೇಲ್ಬಾಗದಲ್ಲಿ ತಲೆಗೆ ಹೊಡೆದು ಕೊಲೆ ಮಾಡಲಾಗುತ್ತಿದೆ. ಬೆಂಗಳೂರಿನ ರುದ್ರೇಶ್, ಮಂಗಳೂರಿನ ಶರತ್ ಮಡಿವಾಳ ಸೇರಿದಂತೆ ರಾಜ್ಯದಲ್ಲಿ ನಡೆದ ಹಿಂದೂ ಕಾರ್ಯಕರ್ತರ ಕೊಲೆ ಇದೇ ರೀತಿಯಲ್ಲಿ ಆಗಿದೆ. ಘಟನೆಯ ಬಗ್ಗೆ ಮಾಹಿತಿ ತಿಳಿಯುತ್ತಿದ್ದಂತೆ ಈ ವಿಚಾರವನ್ನು ಗೃಹಮಂತ್ರಿ ಅಮಿತ್ ಶಾ ಗಮನಕ್ಕೆ ತರಲಾಗಿದೆ, ಅಲ್ಲದೆ ಪ್ರಕರಣವನ್ನು ಎನ್.ಐ.ಎ ತನಿಖೆಗೆ ಒಪ್ಪಿಸಲಾಗಿದೆ. ಶೀಘ್ರವೇ ತನಿಖಾ ತಂಡ ಈ ಬಗ್ಗೆ ತನಿಖೆ ಕೈಗೆತ್ತಿಕೊಳ್ಳಲಿದೆ ಎಂದರು.