ಪ್ರವೀಣ್ ನೆಟ್ಟಾರ್ ಹತ್ಯೆ ಪ್ರಕರಣ ; ಮತ್ತೆ ಇಬ್ಬರು ಜಿಹಾದಿಗಳ ಬಂಧನ – ಸದ್ದಾಂ ಹಾಗೂ ಹಾರೀಸ್ ಹೆಡೆಮುಕಟ್ಟಿದ ಪೋಲೀಸರು – ಕಹಳೆ ನ್ಯೂಸ್
ಪುತ್ತೂರು: ಬೆಳ್ಳಾರೆಯಲ್ಲಿ ದುಷ್ಕರ್ಮಿಗಳಿಂದ ನಡೆದಿರುವ ಬಿಜೆಪಿ ಯುವ ನಾಯಕ ಪ್ರವೀಣ್ ನೆಟ್ಟಾರು ಅವರ ಹತ್ಯೆ ಪ್ರಕರಣದ ತನಿಖೆಯನ್ನು ರಾಷ್ಟ್ರೀಯ ತನಿಖಾ ಸಂಸ್ಥೆ(ಎನ್‌ಐಎ)ಗೆ ವಹಿಸಿಕೊಡಲು ರಾಜ್ಯ ಸರಕಾರ ತೀರ್ಮಾನಿಸಿರುವ ಬೆನ್ನಲ್ಲೇ ಎನ್‌ಐಎ ಅಧಿಕಾರಿಗಳ ಎರಡು ತಂಡಗಳು ಪ್ರಕರಣದ ಮಾಹಿತಿಯನ್ನು ಕಲೆ ಹಾಕುತ್ತಿರುವುದಾಗಿ ವರದಿಯಾಗಿದೆ. ಈ ನಡುವೆ ಪ್ರಕರಣಕ್ಕೆ ಸಂಬಂಧಿಸಿ ಇನ್ನಿಬ್ಬರು ಆರೋಪಿಗಳು ಪೊಲೀಸರು ಬಂಧಿಸಿದ್ದಾರೆ.
ಈ ಕುರಿತು ಅಧಿಕೃತ ಮಾಹಿತಿ ನೀಡಿದ ಜಿಲ್ಲಾ ಪೋಲೀಸ್ ವರಿಷ್ಠಾಧಿಕಾರಿ ಹೃಷಿಕೇಶ್ ಸೋನಾವಣೆ ಪ್ರವೀಣ್ ನೆಟ್ಟಾರ್ ಹತ್ಯೆ ಪ್ರಕರಣದಲ್ಲಿ ಮತ್ತೆ ಇಬ್ಬರು ಆರೋಪಗಳನ್ನು ಬಂಧನ ಖಚಿತ ಪಡಿಸಿದ್ದಾರೆ. ಬೆಳ್ಳಾರೆಯ ಪಲ್ಲಮಜಲು ನಿವಾಸಿಗಳಾದ ಸದ್ದಾಂ ( 32 ) ಹಾಗೂ ಹಾರೀಸ್ ( 42 ) ಎಂದು ಗುರುತಿಸಲಾಗಿದ್ದು, ಇನ್ನುಳಿದ ಆರೋಪಿಗಳಿಗಾಗಿ ಶೋಧ ಮುಂದುವರಿದಿದೆ ಎಂದು ಹೇಳಿದ್ದಾರೆ.
ಮತ್ತಿಬ್ಬರು ಪೊಲೀಸರ ವಶಕ್ಕೆ..? :
ಈ ನಡುವೆ ಪ್ರವೀಣ್ ಹತ್ಯೆ ಪ್ರಕರಣಕ್ಕೆ ಸಂಬಂಧಿಸಿ ಇನ್ನಿಬ್ಬರನ್ನು ಪೊಲೀಸರು ವಶಕ್ಕೆ ಪಡೆದುಕೊಂಡಿದ್ದಾರೆ. ಬೆಂಗಳೂರಿನ ಕೆ.ಜೆ ಹಳ್ಳಿಯಲ್ಲಿ ಅಡಗಿದ್ದ ಸುಳ್ಯ ಮೂಲದ ಇಬ್ಬರನ್ನು ವಶಕ್ಕೆ ಪಡೆಯಲಾಗಿದೆ. ಬೆಂಗಳೂರಿನಲ್ಲಿ ಅಡಗಿ ಕುಳಿತಿದ್ದ ಸುಳ್ಯ ಮೂಲದ ಇರ್ಫಾನ್ ಮತ್ತು ಅಲ್ತಾಫ್ ಎಂಬವರನ್ನು ಜು.31ರಂದು ರಾತ್ರಿ ವಶಕ್ಕೆ ಪಡೆದುಕೊಳ್ಳಲಾಗಿದೆ. ಶಂಕಿತರು ಇದ್ದ ಮನೆಯನ್ನು ಸುತ್ತುವರಿದ ಪೊಲೀಸ್ ತಂಡ ಮಧ್ಯರಾತ್ರಿ ಆರೋಪಿಗಳನ್ನು ಬಂಽಸಿ ಮಂಗಳೂರಿಗೆ ಕರೆತಂದಿರುವುದಾಗಿ ದೃಶ್ಯ ಮಾಧ್ಯಮಗಳಲ್ಲಿ ವರದಿಯಾಗಿದೆ. ಬೆಂಗಳೂರಿನಲ್ಲಿ ಮೂವರನ್ನು ಪೊಲೀಸರು ವಶಕ್ಕೆ ಪಡೆದುಕೊಂಡು ಮಂಗಳೂರಿಗೆ ಕರೆತಂದಿದ್ದಾರೆ. ಮೊಬೈಲ್ ನೆಟ್‌ವರ್ಕ್ ಆಧರಿಸಿ ಈ ಕಾರ್ಯಾಚರಣೆ ನಡೆದಿದೆ ಎಂದೂ ಹೇಳಲಾಗುತ್ತಿದೆ. ಆದರೆ ಈ ಪ್ರಕರಣಕ್ಕೆ ಸಂಬಂಧಿಸಿ ಹೊಸದಾಗಿ ಯಾರನ್ನೂ ಬಂಧಿಸಲಾಗಿಲ್ಲ ಎಂದು ಜಿಲ್ಲಾ ಪೊಲೀಸ್ ಅಧೀಕ್ಷಕರು ಸ್ಪಷ್ಟನೆ ನೀಡಿದ್ದಾರೆ.
ಪ್ರಕರಣಕ್ಕೆ ಸಂಬಂಧಿಸಿದಂತೆ ಈಗಾಗಲೇ ಬಂಧಿತರಾಗಿರುವ ಬೆಳ್ಳಾರೆಯ ಶಫೀಕ್ ಹಾಗೂ ಸವಣೂರಿನ ಝಾಕಿರ್ ಎಂಬೀರ್ವರನ್ನು ನ್ಯಾಯಾಂಗ ಬಂಧನದಿಂದ ಕಸ್ಟಡಿಗೆ ಪಡೆದುಕೊಂಡಿರುವ ಪೊಲೀಸರು ವಿಚಾರಣೆ ತೀವ್ರಗೊಳಿಸಿದ್ದಾರೆ. ಬಂಧಿತ ಶಫೀಕ್ ಮತ್ತು ಝಾಕಿರ್ ನೀಡಿರುವ ಮಾಹಿತಿ ಆಧರಿಸಿ ಬೆಂಗಳೂರಿನಲ್ಲಿ ಇರ್ಫಾನ್ ಹಾಗೂ ಅಲ್ತಾಫ್ ರನ್ನು ಪೊಲೀಸರ ತಂಡ ವಶಕ್ಕೆ ಪಡೆದುಕೊಂಡು ವಿಚಾರಣೆ ನಡೆಸುತ್ತಿದೆ ಎಂದು ಸುದ್ದಿಯಾಗಿದೆ.
ಎನ್.ಐ.ಎ.ಗುಪ್ತ ಕಾರ್ಯಾಚರಣೆ:
ಮುಖ್ಯ ಮಂತ್ರಿ ಬಸವರಾಜ ಬೊಮ್ಮಾಯಿ ಅವರು ಪ್ರವೀಣ್ ನೆಟ್ಟಾರು ಅವರ ಮನೆಗೆ ಭೇಟಿ ನೀಡಿ ಹೋದ ಬಳಿಕದ ಬೆಳವಣಿಗೆಯಲ್ಲಿ, ಪ್ರವೀಣ್ ಹತ್ಯೆ ಪ್ರಕರಣದ ತನಿಖೆಯನ್ನು ಎನ್‌ಐಎಗೆ ಒಪ್ಪಿಸಲು ಸರಕಾರ ನಿರ್ಧರಿಸಿರುವುದಾಗಿ ಹೇಳಿದ್ದರು.ಇನ್ನೆರಡು ಮೂರು ದಿನಗಳಲ್ಲಿ ಈ ಪ್ರಕರಣವನ್ನು ಎನ್‌ಐಎಗೆ ಹಸ್ತಾಂತರಿಸಲಾಗುವುದು. ಪ್ರಕರಣದ ಬಗ್ಗೆ ಈಗಾಗಲೇ ಎನ್‌ಐಎಗೆ ಔಪಚಾರಿಕವಾಗಿ ತಿಳಿಸಲಾಗಿದೆ. ಟೆಕ್ನಿಕಲ್ ಹಾಗೂ ಪೇಪರ್ ವರ್ಕ್ ನಡೆಯುತ್ತಿದ್ದು ಎರಡು ಮೂರು ದಿನಗಳೊಳಗೆ ಪ್ರಕರಣವನ್ನು ಎನ್‌ಐಎಗೆ ಹಸ್ತಾಂತರಿಸಲಾಗುವುದು ಎಂದು ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಹೇಳಿದ್ದಾರೆ.
ಎನ್‌ಐಎ ತನಿಖೆಗೆ ವಹಿಸಿಕೊಡುವುದಾಗಿ ಮುಖ್ಯಮಂತ್ರಿ ಹೇಳಿಕೆ ನೀಡಿದ್ದ ಬೆನ್ನಲ್ಲೇ ಪ್ರಕರಣದ ಮಾಹಿತಿ ಪಡೆದುಕೊಂಡಿರುವ ಎನ್‌ಐಎ ಎರಡು ತಂಡಗಳು ಈಗಾಗಲೇ ಮಂಗಳೂರು ಹಾಗೂ ಕೇರಳದಲ್ಲಿ ಪ್ರಕರಣದ ಬಗ್ಗೆ ಮಾಹಿತಿಯನ್ನು ಕಲೆ ಹಾಕುತ್ತಿರುವುದಾಗಿ ತಿಳಿದು ಬಂದಿದೆ. ಜೊತೆಗೆ ಹತ್ಯೆ ನಡೆದಿರುವ ಬೆಳ್ಳಾರೆ ಭಾಗದಲ್ಲೂ ಎನ್‌ಐಎ ಗುಪ್ತವಾಗಿ ಮಾಹಿತಿ ಸಂಗ್ರಹಿಸಿರುವುದಾಗಿ ವರದಿಯಾಗಿದೆ.ಆದರೆ ಪೊಲೀಸರು ಇದನ್ನು ಖಚಿತಪಡಿಸಿಲ್ಲ.ಜಿಲ್ಲೆಯಲ್ಲಿ ಇದೇ ಮೊದಲು ಪ್ರಕರಣವೊಂದು ಎನ್.ಐ.ಎ ತನಿಖೆಗೆ ಹಸ್ತಾಂತರವಾಗಲಿರುವುದರಿಂದ ಸಹಜವಾಗಿ ಜನರು ಈ ಕುರಿತು ಕುತೂಹಲದಿಂದ ಕಾಯುತ್ತಿದ್ದಾರೆ.