ಉಡುಪಿ : ಕಲ್ಯಾಣಪುರ ರೋಟರಿ ಕ್ಲಬ್ ವತಿಯಿಂದ ಆಟಿಡೊಂಜಿ ರೋಟರಿ ಕೂಟ ಹಾಗೂ ಕುಟುಂಬ ಸಹಮಿಲನ ಕಾರ್ಯಕ್ರಮ ಕಲ್ಯಾಣಪುರದ ಬ್ಯಾಪಿಸ್ಟ್ ಹೋಮ್ ಹೊಲದಲ್ಲಿ ನಡೆಯಿತು. ಅಸೆಸ್ಟೆಂಟ್ ಗವರ್ನರ್ ರೋ. ಆನಂದ ಶೆಟ್ಟಿ ಕಾರ್ಯಕ್ರಮವನ್ನು ಉದ್ಘಾಟಿಸಿ ಮಾತಾಡುತ್ತಾ “ಅಟಿ ಅಂದರೆ ಭಯಂಕರ ಮಳೆ ಸುರಿಯುವ ಹೊತ್ತು. ಹಳ್ಳಿಗರಿಗೆಲ್ಲ ಬಹಳ ಕಷ್ಟದ ದಿನಗಳವು. ಆ ಸಂದರ್ಭ ಕಾಡು, ಗುಡ್ಡ, ಗದ್ದೆಗಳಲ್ಲಿ ನೈಸರ್ಗಿಕವಾಗಿ ಬೆಳೆಯುವ ಹೂ ಹುಲ್ಲುಗಳನ್ನೇ ಆಹಾರವಾಗಿ ಉಪಯೋಗಿಸಲು ಶುರು ಮಾಡಿದರು. ವಿವಿಧ ಆಟಗಳು ಹುಟ್ಟಿಕೊಂಡವು. ಅವುಗಳ ಮಹತ್ವ, ಆರೊಗ್ಯದ ಗುಟ್ಟುಗಳನ್ನು ನಾವೆಂದೂ ಮರೆಯ ಬಾರದು” ಎಂದರು.
ಝೋನಲ್ ಲೆಫ್ಟಿನೆಂಟ್ ರೋ. ಮಹಮ್ಮದ್ ಇಕ್ಬಾಲ್, ರೋಟರಿ ಜಿಲ್ಲಾ ಮಾಜಿ ಗವರ್ನರ್ ರೋ. ರಾಜಾರಾಂ ಭಟ್, ಬ್ಯಾಪಿಸ್ಟ್ ಡಯಾಸ್ ಪುತ್ರ ಬ್ಲೆನ್ ಡಯಾಸ್, ಅಧ್ಯಕ್ಷೆ ರೋ. ಶಾಲೆಟ್ ಲುವಿಸ್, ಕಾರ್ಯದರ್ಶಿ ರೋ. ರೀನಾ ಆನಂದ ಶೆಟ್ಟಿ ಉಪಸ್ಥಿತರಿದ್ದರು. ಕೆಸರು ಗದ್ದೆಯಲ್ಲಿ ವಿವಿಧ ಆಟ, ಓಟಗಳ ಸ್ಪರ್ಧೆ ಏರ್ಪಡಿಸಲಾಗಿತ್ತು. ರುಚಿ ರುಚಿಯಾದ ಆಟಿಯ ವಿವಿಧ ಖಾದ್ಯಗಳನ್ನು ಉಣಬಡಿಸಲಾಯಿತು. ಮಣ್ಣಿನ ಕಾಯಕವನ್ನು ಮುಂದುವರೆಸುತ್ತಿರುವ ರೋಟರಿ ರೈತರನ್ನು ಅಭಿಮಾನದಿಂದ ಸನ್ಮಾನಿಸಲಾಯಿತು.