Recent Posts

Sunday, January 19, 2025
ಸುದ್ದಿ

ಇಂದು ವರಲಕ್ಷ್ಮಿಪೂಜೆಯ ಸಂಭ್ರಮ ‌: ವರಲಕ್ಷ್ಮಿ ಹಬ್ಬದ ಹಿನ್ನೆಲೆ, ಪೂಜಾ ವಿಧಾನಗಳು ಸೇರಿದಂತೆ ಇಂದಿನ ಹಬ್ಬದ ಅಪರೂಪದ ಮಾಹಿತಿ ಇಲ್ಲಿದೆ… -ಕಹಳೆ ನ್ಯೂಸ್

ಶ್ರಾವಣ ಮಾಸ ಬಂತು ಅಂದ್ರೆ ಶುರು ಹಬ್ಬಗಳ ಸಾಲು. ಹೆಂಗೆಳೆಯರಿಗಂತೂ ಹೊಸಬಟ್ಟೆ ಖರೀದಿ, ದಿನದಿನವೂ ಮನೆಯಲ್ಲಿ ವಿಶೇಷ ಪೂಜೆ, ರುಚಿ ರುಚಿ ಖಾದ್ಯಗಳ ತಯಾರಿಕೆ ಎಂದು ಸಂಭ್ರಮವೋ ಸಂಭ್ರಮ. ಶ್ರಾವಣ ಮಾಸದ ಪ್ರಮುಖ ಹಬ್ಬಗಳಲ್ಲೊಂದಾದ ವರಮಹಾಲಕ್ಷ್ಮಿ ವ್ರತ ಪ್ರತಿ ವರ್ಷ ಶುಕ್ರವಾರದಂದೇ ಬರಲಿದ್ದು, ಮನೆಗೆ ಸಂಪತ್ತು, ಸಮೃದ್ಧಿ ಕರುಣಿಸು ಎಂದು ದೇವಿ ಲಕ್ಷ್ಮಿಯನ್ನು ಪ್ರಾರ್ಥಿಸುವ, ಪೂಜಿಸುವ ಈ ಹಬ್ಬಕ್ಕೆ ತನ್ನದೇ ಆದ ವೈಶಿಷ್ಟ್ಯವಿದೆ.

ಜಾಹೀರಾತು
ಜಾಹೀರಾತು
ಜಾಹೀರಾತು

ಜಾಹೀರಾತು
ಜಾಹೀರಾತು
ಜಾಹೀರಾತು

ವರಲಕ್ಷ್ಮಿ ವ್ರತ ಅಥವಾ ವರಲಕ್ಷ್ಮಿ ನೊಂಬು ಎಂದು ಕರೆಯಲ್ಪಡುವ ಈ ಹಬ್ಬ ಹಿಂದೂ ಧರ್ಮದಲ್ಲಿ ತ್ರಿಮೂರ್ತಿ ದೇವರುಗಳಲ್ಲಿ ಒಬ್ಬನು ಎಂದು ಕರೆಯಲಾಗುವ ಭಗವಾನ್‌ ವಿಷ್ಣುವಿನ ಪತ್ನಿ ಲಕ್ಷ್ಮಿ ದೇವಿಯನ್ನು ಪ್ರತಿಷ್ಠಾಪಿಸುವ ಹಬ್ಬವಾಗಿದೆ. ಶ್ರಾವಣ ಶುಕ್ಲ ಪಕ್ಷದ ಆರಂಭದಲ್ಲಿ ಬೀಳುವ ಶುಕ್ರವಾರದಂದು ವರಲಕ್ಷ್ಮಿ ವ್ರತವನ್ನು ಆಚರಿಸಲಾಗುತ್ತದೆ. ಹಾಗಿದ್ದರೆ ಈ ಹಬ್ಬದ ಹಿನ್ನೆಲೆ ಏನು? ವೈಶಿಷ್ಟ್ಯವೇನು? ಆಚರಣೆ ಹೇಗೆ? ಇಲ್ಲಿದೆ ಮಾಹಿತಿ

ವರಮಹಾಲಕ್ಷ್ಮೀ ಪೂಜೆಯ ಮಹತ್ವ:

ವರಮಹಾಲಕ್ಷ್ಮಿ ವ್ರತವನ್ನು ಈ ವರ್ಷ 2022 ರ ಆ. 5 ರಂದು ಶುಕ್ರವಾರ ಅಂದರೆ ನಾಳೆ ಆಚರಿಸಲಾಗುತ್ತಿದೆ. ಇದು ಲಕ್ಷ್ಮಿ ದೇವಿಗೆ ಅರ್ಪಿತವಾದ ಹಬ್ಬವಾಗಿದ್ದು,ಈ ದಿನ, ಸಂಪತ್ತು ಮತ್ತು ಸಮೃದ್ಧಿಯ ದೇವಿಯನ್ನು ಮೆಚ್ಚಿಸಲು ವಿಶೇಷ ಲಕ್ಷ್ಮಿ ಪೂಜೆಯನ್ನು ನಡೆಸಲಾಗುತ್ತದೆ.

ಲಕ್ಷ್ಮಿ ದೇವಿಯ ವರಲಕ್ಷ್ಮಿ ರೂಪವು ವರಗಳನ್ನು ನೀಡುತ್ತದೆ ಮತ್ತು ತನ್ನ ಭಕ್ತರ ಎಲ್ಲಾ ಆಸೆಗಳನ್ನು ಪೂರೈಸುತ್ತದೆ ಎಂದು ನಂಬಲಾಗಿದೆ. ಆದ್ದರಿಂದ ದೇವಿಯ ಈ ರೂಪವನ್ನು ವರ + ಲಕ್ಷ್ಮಿ ಎಂದು ಕರೆಯಲಾಗುತ್ತದೆ. ಅಂದರೆ ವರಗಳನ್ನು ನೀಡುವ ಲಕ್ಷ್ಮಿ ದೇವಿ ಎಂದರ್ಥ. ಸಮುದ್ರ ಮಥನದ ಸಮಯದಲ್ಲಿ ಉದ್ಭವಿಸಿದ ಲಕ್ಷ್ಮಿ, ಸಂಪತ್ತಿನ ಅಧಿದೇವತೆಯಾಗಿ ಎಲ್ಲರಿಗೂ ಬೇಕಾದವಳಾಗಿದ್ದು, ಜೊತೆಗೆ ಮುತ್ತೈದೆ ತನದ ಸಂಕೇತವಾಗಿಯೂ ಆಕೆಯನ್ನು ಆರಾಧಿಸಲಾಗುತ್ತದೆ.

ಹಬ್ಬದ ಹಿನ್ನೆಲೆ ವರಮಹಾಲಕ್ಷ್ಮಿ ಹಬ್ಬದ ಹಿನ್ನೆಲೆಯ ಬಗ್ಗೆ ತಿಳಿದುಕೊಳ್ಳುವುದಾದರೆ, ಪುರಾಣದಲ್ಲಿ ಚಾರುಮತಿ ಎಂಬ ಸ್ತ್ರೀಯೊಬ್ಬಳು ನಿಸ್ವಾರ್ಥವಾಗಿ ತನ್ನ ಅತ್ತೆ-ಮಾವಂದಿರ ಸೇವೆ ಮಾಡಿದ್ದನ್ನು ಕಂಡು ಆಕೆಯ ಶ್ರದ್ಧೆಗೆ ಒಲಿದ ಲಕ್ಷ್ಮಿ, ಶ್ರಾವಣ ಮಾಸದ ಹುಣ್ಣಿಮೆಗೂ ಮೊದಲ ಶುಕ್ರವಾರ ನನ್ನನ್ನು ಆರಾಧಿಸು, ನಿನ್ನ ಇಷ್ಟಾರ್ಥಗಳನ್ನು ಪೂರೈಸುತ್ತೇನೆ ಎನ್ನುತ್ತಾಳೆ.

ಲಕ್ಷ್ಮಿ ಹೇಳಿದಂತೆ ಚಾರುಮತಿ ಶ್ರಾವಣ ಮಾಸದ ಹುಣ್ಣಿಮೆಗೂ ಮೊದಲ ಶುಕ್ರವಾರ ವರಮಹಾಲಕ್ಷ್ಮಿಯನ್ನು ಆರಾಧಿಸಿ ತನ್ನ ಇಷ್ಟಾರ್ಥಗಳನ್ನು ಪೂರೈಸಿಕೊಳ್ಳುತ್ತಾಳೆ. ಆದ್ದರಿಂದಲೇ ಇಷ್ಟಾರ್ಥಗಳನ್ನು ಪೂರೈಸುವ ಲಕ್ಷ್ಮಿಯ ಆರಾಧನೆಗಾಗಿ ಈ ಹಬ್ಬ. ಈ ದಿನ ಲಕ್ಷ್ಮಿಯನ್ನು ಶ್ರದ್ಧೆ-ಭಕ್ತಿಯಿಂದ ಆರಾಧಿಸುವುದರಿಂದ ಸಕಲ ಇಷ್ಟಾರ್ಥವೂ ಪ್ರಾಪ್ತಿಯಾಗುತ್ತದೆ ಎಂಬ ನಂಬಿಕೆ ಇದೆ.

ಪೂಜೆಗೆ ಸಿದ್ಧತೆ ಹೀಗಿರಲಿ

ಶ್ರಾವಣ ಹುಣ್ಣಿಮೆಗೂ ಮೊದಲ ಶುಕ್ರವಾರದಂದು ಬೆಳಿಗ್ಗೆ ಬೇಗ ಎದ್ದು, ಸ್ನಾನ ಮಾಡಿ ದೇವರ ಕೋಣೆಯನ್ನು ಶುದ್ಧೀಕರಿಸಬೇಕು. ರಂಗೋಲಿ ಬಿಡಿಸಿ, ನಂತರ ಬಾಳೆ ಎಲೆಯ ಮೇಲೆ ಅಕ್ಕಿ ಹಾಕಿ ಅದರ ಮೇಲೆ ಬೆಳ್ಳಿ ಅಥವಾ ತಾಮ್ರದ(ಕೆಲವೆಡೆ ಸ್ಟೀಲ್ ಅನ್ನೂ ಉಪಯೋಗಿಸುತ್ತಾರೆ) ಕಳಶ ಇಡಬೇಕು. ಕಳಶದಲ್ಲಿ ನೀರನ್ನು ತುಂಬಿ ಅದಕ್ಕೆ ಸ್ವಲ್ಪ ಒಣದ್ರಾಕ್ಷಿ, ಖರ್ಜೂರಗಳನ್ನು ಹಾಕಬೇಕು. ಕಳಶದಲ್ಲಿ ಮಾವಿನ ಎಲೆ ಮತ್ತು ವೀಳ್ಯದೆಲೆಗಳನ್ನು ಜೋಡಿಸಿ, ಅದರ ಮೇಲೆ ಅರಿಶಿಣ ಹಚ್ಚಿದ ತೆಂಗಿನ ಕಾಯಿಯನ್ನು ಇಡಬೇಕು. ಕೆಲವರು ಆ ತೆಂಗಿನ ಕಾಯಿಯನ್ನೇ ದೇವಿಯ ರೂಪದಲ್ಲಿ ಚಿತ್ರಿಸುತ್ತಾರೆ.

ಅರಿಶಿಣ ಮೆತ್ತಿ, ದೇವಿಯ ಆಕಾರ ಬರೆದ ಕಳಶಕ್ಕೆ ಸೀರೆ ಉಡಿಸುವುದು ಮತ್ತೊಂದು ಕ್ರಿಯಾಶೀಲತೆಯ ಕೆಲಸವಾಗಿದ್ದು, ಅವರವರ ಅನುಕೂಲಕ್ಕೆ ತಕ್ಕಂತೆ ಲಕ್ಷ್ಮೀ ದೇವಿಗೆ ಅಲಂಕಾರ ಮಾಡಲಾಗುತ್ತದೆ. ಕೆಲವರು ದುಬಾರಿ ಸೀರೆ ಉಡಿಸಿದ್ದರೆ, ಹಲವರು ಸಾಧಾರಣ ಸೀರೆ ಉಡಿಸುತ್ತಾರೆ. ಮತ್ತೂ ಕೆಲವರು ಕಳಶಕ್ಕೆ ದೇವಿಯ ಮುಖವಾಡ ತೊಡಿಸುತ್ತಾರೆ. ಇದೆಲ್ಲವು ಅವರವರ ಆರ್ಥಿಕ ಸ್ಥಿತಿಗತಿಗೆ ಬಿಟ್ಟಿದ್ದಾಗಿದ್ದು, ಈ ಹಬ್ಬದ ಅಲಂಕಾರದ ದೃಶ್ಯವನ್ನು ಕಣ್ತುಂಬಿಕೊಳ್ಳುವುದೇ ಖುಷಿ.

ದೇವಿ ಆರಾಧನೆಗೆ ಬಿಲ್ವ ಪತ್ರೆ ಶ್ರೇಷ್ಠ

ಯಾವುದೇ ಶುಭಕಾರ್ಯಕ್ಕೂ ಮುನ್ನ ವಿಘ್ನನಾಶಕ ಗಣಪತಿಯ ಆರಾಧನೆ ಸಂಪ್ರದಾಯ. ಅಂತೆಯೇ ಗಣೇಶನನ್ನು ಆರಾಧಿಸಿ. ನಂತರ ಭಕ್ತಿಯಿಂದ ದೇವಿಯನ್ನು ಧ್ಯಾನಿಸುತ್ತ ಪೂಜೆ ಆರಂಭಿಸಿ. ದೇವಿ ಬಿಲ್ವ ವೃಕ್ಷದಲ್ಲಿ ನೆಲೆಸಿದ್ದಾಳೆ ಎಂಬ ಪ್ರತೀತಿ ಇರುವುದರಿಂದ ಬಿಲ್ವ ಪತ್ರೆ ಶ್ರೇಷ್ಠ. ಜೊತೆಗೆ ಹೂವುಗಳನ್ನು ಬಳಸಿ ದೇವಿಯನ್ನು ಅಲಂಕರಿಸಿ. ದೇವಿಯ ವಿಗ್ರಹಕ್ಕೆ ಪಂಚಾಮೃತ ಅಭಿಷೇಕ ಮಾಡುವವರೂ ಇದ್ದಾರೆ. ಇಲ್ಲವೇ ಸರಳವಾಗಿ ದೇವಿಗೆ ಕುಂಕುಮಾರ್ಚನೆ ಮಾಡಿ, ಭಕ್ತಿಯಿಂದ ಧ್ಯಾನಿಸಿದರೂ ಆಗುತ್ತದೆ.

ಸುಮಂಗಲಿಯರ ಕಂಕಣ

ಈ ವೇಳೆ ಕುಂಕುಮಾರ್ಚನೆಯೊಂದಿಗೆ ಲಕ್ಷ್ಮಿ ದೇವಿಯ ಆವಾಹನೆ ಮಾಡಲಾಗುತ್ತದೆ. ನಂತರ ಹನ್ನೆರಡು ಗಂಟಿನ ದಾರವನ್ನು ದೇವರ ಮುಂದಿಟ್ಟು ಪೂಜಿಸಿ, ಅನಂತರ ಆ ದಾರವನ್ನು ಸುಮಂಗಲಿಯರು ಕೈಗೆ ಕಂಕಣದಂತೆ ಕಟ್ಟಿಕೊಳ್ಳುವ ರೂಡಿ ಇದೆ. ಈ ವ್ರತವನ್ನು ವಿವಾಹಿತ ಮಹಿಳೆಯರು ಒಂಬತ್ತು ವರ್ಷಗಳ ಕಾಲ ಸತತವಾಗಿ ಮಾಡುವುದರಿಂದ ಫಲ ಲಭಿಸುತ್ತದೆ ಎಂಬ ನಂಬಿಕೆ ಇದೆ.

ನೈವ್ಯೇದ್ಯಕ್ಕೆ ಲಕ್ಷ್ಮಿಗೆ ಪ್ರಿಯವಾದ ಕಡಲೆಬೇಳೆ

ಲಕ್ಷ್ಮಿಗೆ ಕಡಲೆಬೇಳೆ ಪ್ರಿಯವಾದ ಧಾನ್ಯವಾಗಿದ್ದು, ವರಮಹಾಲಕ್ಷ್ಮಿ ಹಬ್ಬದ ದಿನದಂದು ನೈವ್ಯೇದ್ಯಕ್ಕೆ ಕಡಲೆಬೇಳೆಯಿಂದ ತಯಾರಿಸಿದ ಪಾಯಸ, ಹೋಳಿಗೆ ಇತ್ಯಾದಿ ಸಿಹಿ ತಿನಿಸುಗಳನ್ನು ದೇವರಿಗೆ ಅರ್ಪಿಸುತ್ತಾರೆ. ವ್ರತದ ನೇಮದ ಪ್ರಕಾರ ಪೂಜೆಯ ಸಿದ್ಧತೆಗಳೆಲ್ಲ ಆದ ನಂತರ ಮೊದಲು ವಿಘ್ನಕಾರಕನಾದ ಗಣಪತಿಯನ್ನು ಪೂಜಿಸಿ ನಂತರ ಯಮುನಾ ಪೂಜೆ ಅಂದರೆ ಶ್ರೇಷ್ಠವಾದ ನದಿಯ ನೀರನ್ನು ತಂದು ಪೂಜೆ ಮಾಡುತ್ತಾರೆ. ಇದಾದ ಮೇಲೆ ವರಲಕ್ಷ್ಮಿ ವ್ರತವನ್ನು ಆರಂಭಿಸುತ್ತಾರೆ. ಮನೆಗೆ ಮುತ್ತೈದೆಯರನ್ನು ಕರೆದು ಅರಿಶಿಣ, ಕುಂಕುಮ, ಸಿಹಿ ಕೊಡುತ್ತಾರೆ.

ಇನ್ನೂ ಲಕ್ಷ್ಮಿ ದೇವಿಯ ಆಶೀರ್ವಾದವನ್ನು ಪಡೆಯಲು ವರಮಹಾಲಕ್ಷ್ಮಿ ವ್ರತದ ದಿನದಂದು ”ಓಂ ಹ್ರೀ ಶ್ರೀಂ ಲಕ್ಷ್ಮಿಭ್ಯೋ ನಮಃ” ಮಂತ್ರವನ್ನು ಪಠಿಸಿದ್ದರೆ ಸಕಲ ಸಿದ್ಧಿ ನಮ್ಮದಾಗುತ್ತದೆ ಎಂಬ ನಂಬಿಕೆಯಿದೆ.