Recent Posts

Sunday, January 19, 2025
ಸುದ್ದಿ

ಹತ್ತೂರಿನ ಗಮನ ಸೆಳೆಯಿತು ಪುತ್ತೂರಿನ ‘ ಹಲಸಿನ ಹಬ್ಬ ‘ ; ನಿರೀಕ್ಷೆಗೂ ಮೀರಿ ಸ್ಪಂದನೆ – ಕಹಳೆ ನ್ಯೂಸ್

s

ಪುತ್ತೂರು: ದೇಶದ ವಿವಿಧ ರಾಜ್ಯಗಳಲ್ಲಿ ಹಲಸಿನ ಮೌಲ್ಯವರ್ಧನೆಗೆ ಆದ್ಯತೆ ನೀಡಲಾಗುತ್ತಿದೆ. ಹಲಸಿನ ಉತ್ಪನ್ನಗಳಿಗೆ ಬೇಡಿಕೆ ಹೆಚ್ಚಾಗಿದೆ. ಹೀಗಾಗಿ ಭವಿಷ್ಯದಲ್ಲಿ ಹಲಸು ಸೂಪರ್ ಫುಡ್ ಆಗಲಿದೆ ಎಂದು ಅಡಿಕೆ ಪತ್ರಿಕೆ ಕಾರ್ಯನಿರ್ವಾಹಕ ಸಂಪಾದಕ ಶ್ರೀಪಡ್ರೆ ಹೇಳಿದರು.


ಅವರು ಪುತ್ತೂರು ಶ್ರೀ ಮಹಾಲಿಂಗೇಶ್ವರ ದೇವಸ್ಥಾನದ ನಟರಾಜ ವೇದಿಕೆಯಲ್ಲಿ ಭಾನುವಾರ ನವಚೇತನ ಸ್ನೇಹ ಸಂಗಮ, ಪುತ್ತೂರು ಶ್ರೀಮಹಾಲಿಂಗೇಶ್ವರ ದೇವಸ್ಥಾನ, ಅಡಿಕೆ ಪತ್ರಿಕೆ ಹಾಗೂ ವಿವಿಧ ಸಂಘಟನೆಗಳ ಸಹಕಾರದೊಂದಿಗೆ ನಡೆದ ಹಲಸು ಹಬ್ಬವನ್ನು ಹಲಸು ತುಂಡರಿಸುವ ಮೂಲಕ ಉದ್ಘಾಟಿಸಿ ಮಾತನಾಡಿದರು. ಹಲಸಿನ ಬಗೆಗಿನ ಕೀಳರಿಮೆ ದೂರವಾಗಬೇಕು. ಇಂದು ಪೇಟೆಯಿಂದ ವಿವಿಧ ಬಗೆಯ ಹಣ್ಣನ್ನು ಖರೀದಿ ಮಾಡಿ ಪಡೆದುಕೊಂಡು ಹೋಗುವುದನ್ನು ಕಂಡಿದ್ದೇವೆ, ಅದೇ ಮಾದರಿಯಲ್ಲಿ ಹಲಸು ಕೂಡಾ ಖರೀದಿಸುವ ಮನಸ್ಸು ಬೆಳೆಯಬೇಕು ಎಂದರು. ಇಂದು ಕೇರಳದಲ್ಲಿ ಹಲಸಿನ ಬಗ್ಗೆ ಸಾಕಷ್ಟು ಅಧ್ಯಯನ, ಪ್ರೋತ್ಸಾಹ ಲಭ್ಯವಾಗುತ್ತಿದೆ. ದೇಶದ ವಿವಿಧ ರಾಜ್ಯಗಳು ಸಹಕಾರ ನೀಡುತ್ತಿವೆ. ವಿದೇಶದಲ್ಲಿ ಹಲಸನ್ನು ಸಸ್ಯಜನ್ಯ ಮಾಂಸ ಎಂದೇ ಪರಿಗಣಿಸಿ ಆಹಾರವಾಗಿ ಬಳಕೆ ಮಾಡುತ್ತಾರೆ. ದೇಶದಲ್ಲೂ ಇದೇ ವಾತಾವರಣ ಸೃಷ್ಠಿಯಾಗುತ್ತಿರುವುದರಿಂದ ಹಲಸಿಗೆ ಭವಿಷ್ಯ ಇದೆ ಎಂದರು.
ಅತಿಥಿಯಾಗಿದ್ದ ಮುಳಿಯ ಜ್ಯವೆಲ್ಸ್‍ನ ಕೃಷ್ಣನಾರಾಯಣ ಮುಳಿಯ ಮಾತನಾಡಿ, ಹಲಸನ್ನು ಎಲ್ಲರೂ ಮನೆ ಬಳಕೆಯತ್ತ, ಅದರ ಉತ್ಪನ್ನಗಳನ್ನು ಬಳಕೆ ಮಾಡುವಂತಾಗಬೇಕು ಎಂದರು.

ಜಾಹೀರಾತು
ಜಾಹೀರಾತು
ಜಾಹೀರಾತು


ಸಭಾಧ್ಯಕ್ಷತೆ ವಹಿಸಿದ್ದ ಪುತ್ತೂರು ಶ್ರೀಮಹಾಲಿಂಗೇಶ್ವರ ದೇವಸ್ಥಾನ ವ್ಯವಸ್ಥಾಪನಾ ಸಮಿತಿ ಅಧ್ಯಕ್ಷ ಎನ್.ಸುಧಾಕರ ಶೆಟ್ಟಿ ಮಾತನಾಡಿ ಹಲಸು ಎಂಬುದು ನಿರ್ಲಕ್ಷ ಮಾಡುವ ವಸ್ತುವಲ್ಲ. ಅದು ಎಲ್ಲಾ ವಿಧದಿಂದಲೂ ಬಳಕೆಗೆ ಯೋಗ್ಯವಾಗಿದೆ. ಹೀಗಾಗಿ ಇಂತಹ ಕಾರ್ಯಕ್ರಮ ನಡೆಯುವ ಮೂಲಕ ಕೃಷಿಕರಿಗೂ ಗ್ರಾಹಕರಿಗೂ ಸಂಬಂಧ ಬೆಸೆಯುವಂತೆ ಮಾಡಬೇಕಿದೆ ಎಂದರು.

ಜಾಹೀರಾತು
ಜಾಹೀರಾತು
ಜಾಹೀರಾತು


ಬೆಳಗ್ಗೆ ಪುತ್ತೂರು ಶ್ರೀಮಹಾಲಿಂಗೇಶ್ವರ ದೇವಸ್ಥಾನದ ಅರ್ಚಕ ವಿ ಎಸ್ ಭಟ್ ಅವರು ದೀಪಪ್ರಜ್ವಲನೆ ಮೂಲಕ ಕಾರ್ಯಕ್ರಮಕ್ಕೆ ಚಾಲನೆ ನೀಡಿದರು.
ವೇದಿಕೆಯಲ್ಲಿ ನವಚೇತನ ಸ್ನೇಹ ಸಂಗಮದ ಕಾರ್ಯದರ್ಶಿ ಪಾಂಡುರಂಗ ಭಟ್ , ಸದಸ್ಯ ಪ್ರಕಾಶ್ ಕುಮಾರ್ ಕೊಡೆಂಕಿರಿ ಉಪಸ್ಥಿತರಿದ್ದರು.
ನವಚೇತನ ಸ್ನೇಹ ಸಂಗಮದ ಅಧ್ಯಕ್ಷ ಅನಂತ ಪ್ರಸಾದ್ ನೈತ್ತಡ್ಕ ಸ್ವಾಗತಿಸಿ ಸದಸ್ಯ ಸುಹಾಸ ಮರಿಕೆ ವಂದಿಸಿದರು. ಪತ್ರಕರ್ತ ಮಹೇಶ್ ಪುಚ್ಚಪ್ಪಾಡಿ ಕಾರ್ಯಕ್ರಮ ನಿರ್ವಹಿಸಿದರು.

ಬೆಳಗ್ಗಿನಿಂದಲೇ ಅಪಾರ ಸಂಖ್ಯೆಯಲ್ಲಿ ಹಲಸು ಪ್ರೇಮಿಗಳು ಆಗಮಿಸಿದ್ದರು. ನಟರಾಜ ವೇದಿಕೆ ತುಂಬೆಲ್ಲಾ ಹಸಲು ಪ್ರೇಮಿಗಳು ತುಂಬಿದ್ದರು. ಬೆಳಗ್ಗಿನಿಂದ ಸಂಜೆಯವರೆಗೆ ಸುಮಾರು 5 ಸಾವಿರ ಮಂದಿ ಭಾಗವಹಿಸಿದ್ದರು. ಒಟ್ಟು 32 ವಿವಿಧ ಮಳಿಗೆಗಳು ಆಗಮಿಸಿದ್ದವು. 28 ರಷ್ಟು ಮಳಿಗೆಗಳು ಹಲಸು ಉತ್ಪನ್ನಗಳನ್ನು ತಯಾರು ಮಾಡಿ ಮಾರಾಟ ಮಾಡುತ್ತಿದ್ದರು. ಪ್ರಮುಖವಾಗಿ ಹಲಸುಬೀಜದ ಜಾಮೂನು, ಹೋಳಿಗೆ, ಚಿಪ್ಸ್ ಹಾಗೂ ಹಲಸು ಐಸ್‍ಕ್ರೀಂ, ಗುಜ್ಜೆ ಉಪ್ಪಿನಕಾಯಿ, ಹಲಸಿನ ಹಣ್ಣಿನ ಉಪ್ಪಿನಕಾಯಿ, ಹಲಸು ಬೀಜದ ಉಪ್ಪಿನಕಾಯಿ, ಹಲಸು ಹಣ್ಣಿನ ಜಾಮೂನು, ಪಲ್ಪ್, ಹಪ್ಪಳ, ಚಿಪ್ಸ್, ಹಣ್ಣಿನ ಪಾಯಸ, ಕಬಾಬ್, ಅಂಬಡೆ, ಮುಳ್ಕ , ಗಟ್ಟಿ, ಹಲಸಿನ ಕಾಯಿ ಪೋಡಿ, ಹಣ್ಣಿನ ಪೋಡಿ, ಹಲಸು ಬೀಜದ ಚಟ್ಟಂಬಡೆ , ಹಲಸುಬೀಜದ ಪತ್ರೊಡೆ, ಹಲಸಿ ಬೀಜದ ಕಾಫಿ, ಮಸಾಲೆ ದೋಸೆ, ಗೆಣಸೆಲೆ ಇತ್ಯಾದಿ ವಸ್ತುಗಳು ಗಮನಸೆಳೆದವು. ಹಲಸು ಉತ್ಪನ್ನಗಳಿಂದ ಮನೆಯಲ್ಲಿ ತಯಾರಿಸಿದ ಅಡುಗೆಯ ಪ್ರದರ್ಶನ ಕೂಡಾ ಗಮನ ಸೆಳೆದವು.

ಹಲಸು ಹಬ್ಬದ ಸಂದರ್ಭ ಹಲಸಿನ ಸೊಳೆ ತಿನ್ನುವ ಸ್ಫರ್ಧೆ ಏರ್ಪಡಿಸಲಾಗಿತ್ತು. ಮಕ್ಕಳ ವಿಭಾಗದಲ್ಲಿ ಅಶ್ವಿನ್ ಪ್ರಥಮ ಸ್ಥಾನ ಹಾಗೂ ಅಘ್ರ್ಯನ್ಯ ಕೆಮ್ಮಾಯಿ ದ್ವಿತೀಯ ಸ್ಥಾನ ಪಡೆದರು. ಮಹಿಳಾ ವಿಭಾಗದಲ್ಲಿ ಪ್ರೇಮಲತಾ ಪ್ರಥಮ ಹಾಗೂ ಸಹನಾ ಕಾಂತಬೈಲು ದ್ವಿತೀಯ ಸ್ಥಾಮ ಪಡೆದರು. ಪುರುಷರ ವಿಭಾಗದಲ್ಲಿ ತಿಮ್ಮಪ್ಪ ನಾಯಕ್ ಪ್ರಥಮ ಹಾಗೂ ಸತೀಶ್ ಕೊಂಗೋಟು ದ್ವಿತೀಯ ಸ್ಥಾನ ಪಡೆದರು.


ಸ್ಫರ್ಧೆಯಲ್ಲಿ ವಿಜೇತರಿಗೆ ಪುತ್ತೂರು ಸಹಾಯಕ ಕಮೀಶನರ್ ಡಾ.ಎಚ್.ಕೆ.ಕೃಷ್ಣಮೂರ್ತಿ ಹಲಸು ಗಿಡವನ್ನು ಬಹುಮಾನವಾಗಿ ವಿತರಿಸಿದರು. ಬಳಿಕ ಮಾತನಾಡಿದ ಅವರು ಹಲಸು ಎಲ್ಲರ ಮನೆ ಬಳಕೆಯ ವಸ್ತುವಾಗಬೇಕು. ಹೀಗಾಗಿ ಈ ಮೇಳದ ಮೂಲಕ ಹಲಸಿನ ಉತ್ಪನ್ನಗಳು ಮನೆಗೆ ತಲುಪುವಂತಾಗಬೇಕು. ಪ್ರತೀ ಮನೆಯಲ್ಲೂ ಹಲಸಿನ ಗಿಡ ಬೆಳೆಯಲಿ ಎಂದು ಶುಭಹಾರೈಸಿದರು. ಪತ್ರಕರ್ತ ನಾ.ಕಾರಂತ ಪೆರಾಜೆ ನಿರ್ವಹಿಸಿದರು.