ಬಿಕಿನಿ ಧರಿಸಿ ತನ್ನ ಫೋಟೋಗಳನ್ನುಇನ್ಸ್ಟಾಗ್ರಾಂನಲ್ಲಿ ಹಾಕಿ ಪೇಚಿಗೆ ಸಿಲುಕಿದ ಉಪನ್ಯಾಸಕಿ ; ಶಿಕ್ಷಕಿಯ ನೋಡಬಾರದ ಫೋಟೋ ನೋಡಿದ ವಿದ್ಯಾರ್ಥಿಗಳು – ಟೀಚರ್ ಕೆಲಸದಿಂದ ವಜಾ, 99 ಕೋಟಿ ರೂ. ದಂಡ! – ಕಹಳೆ ನ್ಯೂಸ್
ಕೋಲ್ಕತಾ: ಆಚಾರ್ಯ ದೇವೋ ಭವ ಎನ್ನುವ ಮಾತಿದೆ. ಗುರುಗಳನ್ನು ದೇವರ ಸ್ಥಾನದಲ್ಲಿ ಇಡಲಾಗಿದೆ. ಆದರೆ ಇಲ್ಲೊಬ್ಬ ಉಪನ್ಯಾಸಕಿ ಬಿಕಿನಿ ಧರಿಸಿ ಅದರ ಫೋಟೋಗಳನ್ನು ತನ್ನ ಇನ್ಸ್ಟಾಗ್ರಾಂನಲ್ಲಿ ಹಾಕಿಕೊಂಡು ಈಗ ಪೇಚಿಗೆ ಸಿಲುಕಿದ್ದಾಳೆ. ಕೆಲಸ ಕಳೆದುಕೊಂಡ ಈ ಉಪನ್ಯಾಸಕಿ, ವಿಶ್ವವಿದ್ಯಾಲಯದ ಮಾನ ಹರಾಜು ಮಾಡಿದ್ದಕ್ಕೆ 99 ಕೋಟಿ ರೂಪಾಯಿ ದಂಡವನ್ನೂ ತೆರಬೇಕಾಗಿದೆ.
ಕೋಲ್ಕತಾದ ಸೇಂಟ್ ಕ್ಸೇವಿಯರ್ ವಿಶ್ವವಿದ್ಯಾಲಯದ ಉಪನ್ಯಾಸಕಿ ಇಂಥದ್ದೊಂದು ಕೃತ್ಯ ಎಸಗಿದ್ದಾರೆ. ಈಜುಡುಗೆ ಫೋಟೋಗಳನ್ನು ಇನ್‌ಸ್ಟಾಗ್ರಾಮ್‌ನಲ್ಲಿ ಪೋಸ್ಟ್ ಮಾಡಿ ವಿದ್ಯಾರ್ಥಿಗಳು ಶಾಕ್ ಆಗುವ ಹಾಗೆ ಮಾಡಿದ್ದಾರೆ. ಈ ಫೋಟೋಗಳನ್ನು ವಿದ್ಯಾರ್ಥಿಗಳು ನೋಡುತ್ತಿರುವುದನ್ನು ಕಂಡ ಪಾಲಕರು ವಿಶ್ವವಿದ್ಯಾನಿಲಯಕ್ಕೆ ದೂರು ನೀಡಿದ ಬೆನ್ನಲ್ಲೇ ಕೆಲಸದಿಂದ ಅವರನ್ನು ವಜಾ ಮಾಡಿದ ವಿಶ್ವವಿದ್ಯಾಲಯ, 99 ಕೋಟಿ ರೂಪಾಯಿ ದಂಡ ವಿಧಿಸಿದೆ!
ಆಗಿದ್ದೇನೆಂದರೆ, ಈಜುಡುಗೆಯಲ್ಲಿದ್ದ ಉಪನ್ಯಾಸಕಿ ಅದರ ಫೋಟೋ ತೆಗೆದು ತಮ್ಮ ಇನ್ಸ್ಟಾಗ್ರಾಂನಲ್ಲಿ ಶೇರ್ ಮಾಡಿಕೊಂಡಿದ್ದರು. ಇದನ್ನು ಪ್ರಥಮ ಪಿಯುಸಿಯಲ್ಲಿ ಓದುತ್ತಿರುವ ಅವರ ವಿದ್ಯಾರ್ಥಿ ನೋಡಿದ್ದಾನೆ. ಮೊಬೈಲ್ನಲ್ಲಿ ಅಷ್ಟು ಕುತೂಹಲದಿಂದ ವೀಕ್ಷಿಸುತ್ತಿದ್ದ ಮಗನನ್ನು ನೋಡಿದ ಅವರ ತಂದೆ ಮೊಬೈಲ್ ಕಸಿದುಕೊಂಡಾಗ ಉಪನ್ಯಾಸಕಿಯ ಅರೆಬರೆ ಡ್ರೆಸ್ ಕಂಡಿದೆ. ನಂತರ ಮಗನನ್ನು ವಿಚಾರಿಸಿದಾಗ ಅವರು ತನ್ನ ಗುರುಗಳು ಎಂದು ಮಗ ಹೇಳಿದ್ದಾನೆ.
ಇದರಿಂದ ಸಿಟ್ಟಿಗೆದ್ದ ಅಪ್ಪ, ನೇರವಾಗಿ ಕಾಲೇಜಿಗೆ ಹೋಗಿ ದೂರು ದಾಖಲು ಮಾಡಿದ್ದಾರೆ. ಶಿಕ್ಷಕಿಯಾದವಳು ಇಂಥ ಬಟ್ಟೆ ಧರಿಸಿ ಫೋಟೋ ಹಾಕಿಕೊಂಡರೆ ಮಕ್ಕಳ ಸ್ಥಿತಿ ಏನಾಗಬೇಡ? ಗುರುಗಳು ಎಂದರೆ ದೇವರ ಸ್ಥಾನದಲ್ಲಿ ನೋಡಲಾಗುತ್ತದೆ, ನಾಳೆ ಇದೇ ಶಿಕ್ಷಕಿಯ ಬಳಿ ಮಕ್ಕಳು ಪಾಠ ಕಲಿಯಲು ಸಾಧ್ಯವೆ ಎಂದು ವಿದ್ಯಾರ್ಥಿಯ ಅಪ್ಪ ಕಾಲೇಜನ್ನು ತರಾಟೆಗೆ ತೆಗೆದುಕೊಂಡಿದ್ದಾರೆ. ಆಮೇಲೆ ವಿಚಾರಿಸಿದಾಗ ಹಲವು ವಿದ್ಯಾರ್ಥಿಗಳು ಕದ್ದುಮುಚ್ಚಿ ಶಿಕ್ಷಕಿಯ ಈ ಫೋಟೋ ನೋಡಿರುವುದು ತಿಳಿದುಬಂದಿದೆ. ಈ ಸುದ್ದಿ ವೈರಲ್ ಆಗುತ್ತಲೇ ವಿಶ್ವವಿದ್ಯಾಲಯದ ಮಾನ ಹರಾಜು ಆಯಿತೆಂದು ಉಪನ್ಯಾಸಕಿಗೆ ಭಾರಿ ದಂಡ ವಿಧಿಸಿದೆ.
ಈ ಬಗ್ಗೆ ಪ್ರತಿಕ್ರಿಯೆ ನೀಡಿರುವ ಉಪನ್ಯಾಸಕಿ, ನನ್ನನ್ನು ಕೆಲಸದಿಂದ ಯಾವುದೇ ಕಾರಣ ನೀಡದೇ ವಜಾ ಮಾಡಲಾಗಿದೆ. ಅದು ನನ್ನ ವೈಯಕ್ತಿಯ ಫೋಟೋ. ಯಾರೋ ನೀಡಿರುವ ದೂರಿನ ಮೇಲೆ ಹೀಗೆ ದಂಡ ವಿಧಿಸಿ ಕೆಲಸದಿಂದ ವಜಾ ಮಾಡಿರುವುದು ಸರಿಯಲ್ಲ ಎಂದು ಆರೋಪಿಸಿದ್ದಾರೆ. ಆದರೆ ವಿಶ್ವವಿದ್ಯಾಲಯ ಮಾತ್ರ ದಂಡ ವಿಧಿಸಿದ್ದು ನಿಜ, ಆದರೆ ಅವರೇ ರಾಜೀನಾಮೆ ನೀಡಿದ್ದಾರೆಯೇ ವಿನಾ ನಾವು ಕೆಲಸದಿಂದ ತೆಗೆದುಹಾಕಲಿಲ್ಲ ಎಂದಿದೆ. (ಏಜೆನ್ಸೀಸ್)